ಬೆಳ್ತಂಗಡಿ; ರಿಯಲ್ ಎಸ್ಟೇಟ್ ಉದ್ಯಮ ಹಾಗೂ ಪ್ಲೈವುಡ್ ವ್ಯವಹಾರ ನಡೆಸುತ್ತಿದ್ದ ಮೂಲತಃ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ತೋಟತ್ತಾಡಿ ಸನಿಹದ ಬೆಂದ್ರಾಳ ನಿವಾಸಿ ಸುದರ್ಶನ್ ಯಾನೆ ಹರ್ಷ ಅವರನ್ನು ವಾಹನದಲ್ಲಿ ಅಪಘಾತವೆಸಗಿ ಬಳಿಕ ತಲವಾರು ದಾಳಿ ನಡೆಸಿ ಬರ್ಬರವಾಗಿ ಹತ್ಯೆಗೈದ ಘಟನೆ ಗುರುವಾರ ನಡೆದಿದೆ.
ಶಿರಸಿ ಮುಂಡಗೋಡ ತಾಲೂಕಿನ ಬಡ್ಡಿಗೇರಿ ಎಂಬಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಈ ಹತ್ಯೆ ನಡೆಸಿ ಪರಾರಿಯಾಗಿದೆ ಎಂಬುದು ಪ್ರಾಥಮಿಕ ಮಾಹಿತಿ.
ಸುದರ್ಶನ್ ಅಲಿಯಾಸ್ ಹರ್ಷ ರಾಣೆ (36ವ.) ಅವರೇ ಕೊಲೆಗೀಡಾದವರು. ತನ್ನ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಅವರಿಗೆ ಅಪಘಾತವೆಸಗಿದ ತಂಡ ಬಳಿಕ ತಲವಾರಿನಿಂದ ಕೊಚ್ಚಿ ಅವರನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಮುಂಡಗೋಡ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಧಾವಿಸಿದ ಅಲ್ಲಿನ ಪೊಲೀಸರು ಮುಂದಿನ ಅಗತ್ಯ ಕಾನೂನು ಕ್ರಮ ಜರುಗಿಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿಯಬೇಕಿದೆ. ತನಿಖೆ ಆರಂಭವಾಗಿದೆ.
ಚಾಲಕನಾಗಿ ಬೆಳಕಿಗೆ ಬಂದಿದ್ದ ಸುದರ್ಶನ್;
ಕಕ್ಕಿಂಜೆಯ ಬೇಂದ್ರಾಳ ಸನಿಹ ನೆಲೆಸಿದ್ದ ಅವರು ಕ್ರಿಯಾಶೀಲ ವ್ಯಕ್ತಿತ್ವ ಹಿಂದಿದ್ದರು.
ಆರಂಭದಲ್ಲಿ ಊರಿನಲ್ಲೇ ಸಣ್ಣಪುಟ್ಟ. ಚಟುವಟಿಕೆಗಳಲ್ಲಿ ಯುವಕರ ಜೊತೆಗೆ ಭಾಗಿಯಾಗುತ್ತಿದ್ದ ಅವರು ವೈದ್ಯರೊಬ್ಬರ ಕಾರು ಚಾಲಕನಾಗಿ ಸಮಾಜಕ್ಕೆ ಹೆಚ್ಚಿನ ಪರಿಚಯ ಪಡೆದಿದ್ದರು. ಆ ಬಳಿಕ ಸ್ಥಳೀಯ ಹಣಕಾಸು ಉದ್ಯಮ ನಡೆಸುತ್ತಿದ್ದ ವ್ಯವಹಾರಸ್ಥರ ಜೊತೆಗೆ ದೈನಂದಿನ ಕಲೆಕ್ಷನ್ ಕೆಲಸ ಆರಂಭಿಸಿದ್ದರು.
ಈಮಧ್ಯೆ ಅವರು ಹಿಂದೂ ಸಂಘಟನೆಗಳಲ್ಲೂ ತೊಡಗಿಸಿಕೊಂಡು ಜಾನುವಾರು ಸಾಗಾಟ ತಡೆಯುವುದು ಇತ್ಯಾಧಿ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದರು.
ಹಿಂದೂ ಸಂಘಟನೆಗಳ ಆತ್ಮೀಯತೆ ಅವರಿಗೆ ಹೆಸರು ತಂದಿತ್ತು. ಅದೇ ಸಂದರ್ಭ ಆರ್‌ಎಸ್‌ಎಸ್ ಪ್ರಮುಖ ಕಲ್ಲಡ್ಕ ಪ್ರಭಾಕರ ಭಟ್ ಅವರ ಜೊತೆಯೂ ಇರುವ ಭಾವ ಚಿತ್ರಗಳು ಈ ಘಟನೆಯ ಬಳಿಕ ಇದೀಗ ಮುನ್ನಲೆಗೆ ಬಂದಿದೆ.
ಠಾಣೆಯ ಸುತ್ತ ವ್ಯವಹಾರ;
ಸಹಜವಾಗಿಯೇ ಹಣಕಾಸು ಸಂಸ್ಥೆಯ (ಖಾಸಗಿ ಫೈನಾನ್ಸ್ ವಸೂಲಿ ವ್ಯವಹಾರ) ಜೊತೆ ಗುರುತಿಸಿಕೊಂಡಿದ್ದರಿಂದ ಹೆಚ್ಚು ಪ್ರಚಲಿತಕ್ಕೆ ಬಂದಿದ್ದ ಅವರು ಬೆಳ್ತಂಗಡಿ ಠಾಣೆಯ ಸುತ್ತವೂ ಆಗ ನಿತ್ಯ ಕಂಡು ಬರುತ್ತಿದ್ದರು. ಕೆಲವು ಪೊಲೀಸರ ಸ್ನೇಹ ಬೆಳೆಸಿಕೊಂಡಿದ್ದ ಅವರು ಅಲ್ಲೂ ಕೆಲವು ವ್ಯವಹಾರಗಳ ಮಧ್ಯಸ್ಥಿಕೆ ನಡೆಸುತ್ತಿದ್ದರು.
ವ್ಯವಹಾರ ಸಂಬಂಧಿತ ವಿಚಾರವೊಂದರಿಂದ ಕಕ್ಕಿಂಜೆ ಊರು ತೊರೆದಿದ್ದ ಅವರು ನಂತರ ತನ್ನ ಕಾರ್ಯಕ್ಷೇತ್ರವನ್ನು ಶಿರಸಿ ಭಾಗಕ್ಕೆ ಬದಲಾಯಿಸಿದ್ದರು. ಅಲ್ಲಿ ವ್ಯವಹಾರ ಕ್ಷೇತ್ರ ಗಟ್ಟಿಗೊಳಿಸಿ ವಿವಾಹವೂ ಆಗಿ ಕುಟುಂಬ ಸಮೇತ ಅಲ್ಲೇ ನೆಲೆಸಿದ್ದರು.
ಇದೀಗ ಅವರನ್ನು ಕೊಲೆಮಾಡಲಾಗಿದ್ದು, ವ್ಯವಹಾರ ಅಥವಾ ಪೂರ್ವಧ್ವೇಷದ ಹಿನ್ನೆಲೆಯಲ್ಲಿ ಕೊಲೆಗೈದಿರುವ ಸಾಧ್ಯತೆ ಧಟ್ಟವಾಗಿದೆ. ನೈಜ ವಿಚಾರ ತನಿಖೆಯಿಂದ ಬಹಿರಂಗವಾಗಲಿದೆ.