ಬೆಳ್ತಂಗಡಿ: ಎಳನೀರು, ಬಂಗರಪಲ್ಕೆ ಫಾಲ್ಸ್ ಬಳಿ ಗುಡ್ಡ ಕುಸಿದು ನಾಪತ್ತೆಯಾಗಿದ್ದ ಸನತ್ ಶೆಟ್ಟಿ ಮೃತದೇಹ 23 ದಿನಗಳ ಬಳಿಕ ಫೆ.16 ಮಂಗಳವಾರ ಸಂಜೆ ಲಭಿಸಿದ್ದು, ಅವರ ಕುಟುಂಬದವರಿಗೆ ಪ್ರಾಕೃತಿಕ ವಿಕೋಪ ನಿಧಿಯಿಂದ ಮಂಜೂರಾದ 5 ಲಕ್ಷ ರೂ. ಪರಿಹಾರ ಮೊತ್ತದ ಚೆಕ್ ಅನ್ನು ಶಾಸಕ ಹರೀಶ್ ಪೂಂಜ ಬುಧವಾರ ಮೃತರಮನೆಗೇ ತೆರಳಿ ಹಸ್ತಾಂತರಿಸಿದರು. ಮೃತ ಸನತ್ ಶೆಟ್ಟಿಯ ತಂದೆ ಕೃಷ್ಣ ವಾಸುದೇವ ಶೆಟ್ಟಿ, ತಾಯಿ ಹಾಗೂ ಸಹೋದರ ಶರತ್ ಮತ್ತು ಶಮಿತ್ ಶೆಟ್ಟಿ ಅವರನ್ನು ಭೇಟಿ ಮಾಡಿ ಪೋಷಕರಿಗೆ ಸಾಂತ್ವನ ತಿಳಿಸಿದರು.
ಪ್ರಭಾರ ತಹಶೀಲ್ದಾರ್ ಸುರೇಶ್ ಬಾಬು, ಲಾಯಿಲ ತಾ.ಪಂ ಸದಸ್ಯ ಸುಧಾಕರ ಬಿ.ಎಲ್, ಲಾಯಿಲ ಗ್ರಾ.ಪಂ ಅಧ್ಯಕ್ಷೆ ಆಶಾ ಬೆನೆಡಿಕ್ಟ್ ಸಾಲ್ಡಾನಾ, ಉಪಾಧ್ಯಕ್ಷ ಗಣೇಶ್, ಸದಸ್ಯರಾದ ಪ್ರಸಾದ್ ಶೆಟ್ಟಿ ಏಣಿಂಜ, ಮಹೇಶ್, ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭ ಮಾತನಾಡಿದ ಶಾಸಕರು, ಸನತ್ ಶೆಟ್ಟಿ ದೇಹದ ಹುಡುಕಾಟ ಸಂದರ್ಭ ಬೇಕಾದ ಎಲ್ಲಾ ನೆರವು ನೀಡಲಾಗಿದೆ.
ಬಡ ಕುಟುಂಬದವರಾದ ಅವರಿಗೆ ಮನೆ ನಿರ್ಮಾಣಕ್ಕೆ ಪಂಚಾಯತ್ ಮೂಲಕ ಸಹಕಾರ ಮಾಡಲಾಗುವುದು.
ಇನ್ನಿತರ ಅಗತ್ಯ ನೆರವು ಬೇಕಾದಲ್ಲಿ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಮಾನವೀಯ ನೆಲೆಯಲ್ಲಿ ಸುಮಾರು 21 ದಿನಗಳ ಕಾಲ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ವಿವಿಧ ಇಲಾಖೆಗಳ ಅಧಿಕಾರಿಗಳು, ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಎಳನೀರು ಗ್ರಾ.ಪಂ. ಸದಸ್ಯ ಪ್ರಕಾಶ್ ಜೈನ್ ಹಾಗೂ ವಿವಿಧ ಸಂಘ- ಸಂಸ್ಥೆಗಳ ಕಾರ್ಯಕರ್ತರು, ಸ್ಥಳೀಯರು ಸಾರ್ವಜನಿಕರಿಗೆ ಧನ್ಯವಾದ ತಿಳಿಸಿದರು.