ಬೆಳ್ತಂಗಡಿ: ಉಜಿರೆಯಲ್ಲಿ ಪಾಕ್ ಪರ ಘೋಷಣೆ ಕೋಗಿದ ನಿಜವಾದ ಆರೋಪಿಗಳು ಯಾರು ಎಂದು ನಾವು ಈಗಾಗಲೇ ನಿಮಗೆ ದಾಖಲೆಸಹಿತ ದೂರು ನೀಡಿದ್ದೇವೆ. ಆದರೆ ನೀವು ಎಫ್‌ಐಆರ್ ದಾಖಲಿಸಲು ಹಿಂದೇಟು ಹಾಕುತ್ತಿದ್ದೀರಿ.
ಎಸ್‌ಡಿಪಿಐ ವಿರುದ್ಧದ ವಿಚಾರದಲ್ಲಿ ಸ್ವಯಂಪ್ರೇರಿತರಾಗಿ ವಿಶೇಷ ಆಸಕ್ತಿ ವಹಿಸಿ ಮುಂದುವರಿಯುವ ನೀವು ತಾರತಮ್ಯ ನೀತಿಏಕೆ ಅನುಸರಿಸುತ್ತೀರಿ ಎಂದು ಎಸ್‌ಡಿಪಿಐ ತಾ. ಅಧ್ಯಕ್ಷ ಹೈದರ ನೀರ್ಸಾಲ್, ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ ಪ್ರಶ್ನಿಸಿದರು.
ಬುಧವಾರ ಬೆಳ್ತಂಗಡಿ ಪೊಲೀಸ್ ಠಾಣೆ ಮುಂಭಾಗ ಜಮಾಯಿಸಿದ ಎಸ್‌ಡಿಪಿಐ ಕಾರ್ಯಕರ್ತರು ಮತ್ತು ನಾಯಕರು, ತಮ್ಮನ್ನು ಭೇಟಿ ಮಾಡಲು ಬಂದ ಡಿವೈಎಸ್‌ಪಿ ವೆಲೆಂಟೈನ್ ಡಿಸೋಜಾ ಅವರನ್ನು ಕಂಡು ತಮ್ಮ ಹಕ್ಕು ಮಂಡಿಸಿದರು.
ಮುಂದುವರಿದು ಮಾತನಾಡಿದ ಎಸ್.ಡಿ.ಪಿ.ಐ. ತಾಲೂಕು ಅಧ್ಯಕ್ಷ ಹೈದರ್ ನೀರ್ಸಾಲ್, ಪಾಕ್ ಪರ ಘೋಷಣೆ ಕೂಗಿ ಬಿಜೆಪಿ ಕಾರ್ಯಕರ್ತರನ್ನು ಬಂಧಿಸದೆ ಅಮಾಯಕರನ್ನು ಬಂಧಿಸಲಾಗಿದೆ. ರಾಜಕೀಯ ಒತ್ತಡ ಬಳಸಿ ಎಸ್.ಡಿ.ಪಿ.ಐ. ಕಾರ್ಯಕರ್ತರನ್ನು ಬಂಧಿಸಲಾಗಿದೆ. ನಮಗೆ ಉತ್ತರ ಬೇಕು. ನಾವು ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದೇವೆ. ಮೇಲಾಧಿಕಾರಿಗಳು ಬರುವವ ವರೆಗೂ ನಾವು ಕದಲುವುದಿಲ್ಲ ಎಂದರು.
ಎಸ್.ಡಿ.ಪಿ.ಐ.ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ ಪ್ರತಿಭಟನಾ ನಿರತರನ್ನುದ್ದೇಶಿಸಿ ಮಾತನಾಡಿ, ಸಂವಿಧಾನಕ್ಕೆ ನಾವು ಗೌರವ ನೀಡುವವರು. ಸಂವಿಧಾನ ಬದ್ಧವಾಗಿ ಎಸ್.ಡಿ.ಪಿ.ಐ. ಕಾರ್ಯಕರ್ತರು ನಮ್ಮ ಪಕ್ಷಕ್ಕೆ ಘೋಷಣೆ ಕೂಗಿದ್ದಾರೆ. ಆದರೆ ಅದನ್ನು ತಿರುಚಲಾಗಿದೆ. ಎಸ್‌ಡಿಪಿಐ ಅವರು ತಮ್ಮ ಪಕ್ಷಕ್ಕೆ ಜೈಕಾರ ಕೂಗುವಾಗ ಪಕ್ಕದಲ್ಲೇ ಸಾವಿರಾರು ಸಂಖ್ಯೆಯಲ್ಲಿಸೇರಿದ್ದ ಹಿಂದೂ ಕಾರ್ಯಕರ್ತರು ದುರುದ್ದೇಶ ಪೂರಕವಾಗಿ ಜೈಕಾರಕ್ಕೆ ಜೊತೆ ಸೇರುವಂತೆ ಅಥವಾ ವೀಡಿಯೋ ಸೆರೆಹಿಡಿಯುವುದಕ್ಕಾಗಿ ಸಂಚು ರೂಪಿಸಿ ಪಾಕ್ ಹೆಸರು ಕೂಗಿರುವ ಸಾಧ್ಯತೆಯ ಬಗ್ಗೆ ನಮಗೆ ಅನುಮಾನ ಇದೆ. ಈ ಪ್ರಕರಣದಲ್ಲಿ ಪೊಲೀಸರು ಯಾರದ್ದೋ ಒತ್ತಡಕ್ಕೆ ಮಣಿದು ಅಮಾಯಕರನ್ನು ಬಂಧಿಸಿದ್ದಾರೆ.ಇದು ಸರಿಯಲ್ಲ ಎಂದರು.
ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಆಂಟೊನಿ ಪಿ.ಡಿ., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಚ್.ಶಾಹುಲ್, ಮಾಜಿ ಅಧ್ಯಕ್ಷ ನವಾಝ್‌ಶರೀಫ್ ಕಟ್ಟೆ, ತಾಲೂಕು ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ, ಪಿಎಫ್‌ಐ ಜಿಲ್ಲಾಧ್ಯಕ್ಷ ಮುಸ್ತಾಫ ಜಿ.ಕೆ., ಮಡಂತ್ಯಾರು ವಲಯಾಧ್ಯಕ್ಷ ಬಿ.ಎಂ. ಫಾರೂಕ್, ಎಸ್.ಡಿ.ಟಿ.ಯು. ಕಾರ್ಮಿಕ ಸಂಘಟನೆಯ ಮುಖಂಡರಾದ ಶಮೀಮ್‌ಯೂಸುಫ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಎಸ್‌ಡಿಪಿಐ ಠಾಣೆಗೆ ಮುತ್ತಿಗೆ ಹಾಕಲಿದೆ ಎಂದು ಹಿಂದಿನ ದಿನವೇ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸಿದ್ದರಿಂದ ಬೆಳ್ತಂಗಡಿ ಪೊಲೀಸ್ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ., ಉಪನಿರೀಕ್ಷಕ ನಂದಕುಮಾರ್ ಎಂ.ಎಂ. ನೇತೃತ್ವದಲ್ಲಿ ವಿಶೇಷ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.