ಬೆಳ್ತಂಗಡಿ; ಉಜಿರೆ ಮತ ಎಣಿಕೆ ಕೇಂದ್ರದ ಎದುರು ವಿಜಯೋತ್ಸವದ ಸಂದರ್ಭ ಎಸ್‌ಡಿಪಿಐ ಕಾರ್ಯಕರ್ತರು ಪಾಕಿಸ್ತಾನ ಜಿಂದಾಬಾದ್ ಘೊಷಣೆ ಕೂಗಿದ್ದು, ಇದು ಬಿಜೆಪಿ ಕಾರ್ಯಕರ್ತರೊಬ್ಬರ ಕೃತ್ಯ ಎಂದು ತಿರುಚಿ ಸುಳ್ಳು ಸುದ್ದಿಯನ್ನು ಹಬ್ಬಿಸಿದ ಎಸ್‌ಡಿಪಿಐ ಮತ್ತು ಇದನ್ನು ಪ್ರಚಾರ ಮಾಡಿದ ಯುಟ್ಯೂಬ್ ಚಾನಲನ್ನು ರದ್ದು ಮಾಡಬೇಕು, ದೇಶದ್ರೋಹದ ಕೃತ್ಯದಲ್ಲಿ ಭಾಗಿಯಾಗಿರುವ ಎಸ್‌ಡಿಪಿಐ ಯಿಂದ ನಮಗೆ ದೇಶಪ್ರೇಮದ ಪಾಠ ಕೇಳುವ ಅಗತ್ಯವಿಲ್ಲ ಎಂದು ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಯಶವಂತ ಗೌಡ ಬೆಳಾಲು ಮತ್ತು ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಯತೀಶ್ ಶೆಟ್ಟಿ ಹೇಳಿದರು.
ಅವರು ಜ.4 ರಂದು ಬೆಳ್ತಂಗಡಿ ಪ್ರವಾಸಿ ಬಂಗಲೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಬಿಜೆಪಿ ಕಾರ್ಯಕರ್ತರು ದೇಶಕ್ಕೆ ತಾಯಿಯ ಸ್ಥಾನ ಕೊಡುವವರು.ದೇಶಕ್ಕಾಗಿ ಹೋರಾಟವನ್ನೂ ಮಾಡಿದವರು.
ಎಸ್‌ಡಿಪಿಐ ದೇಶ ವಿರೋಧಿ ಚಟುವಟಿಕೆ ನಡೆಸುತ್ತಿದೆ. ಬಿಜೆಪಿ ಕಾರ್ಯಕರ್ತ ಪವನ್ ಶೆಟ್ಟಿ ಉಜಿರೆ ಇವರ ಮೇಲೆ ಸುಳ್ಳು ಆರೋಪ ಮಾಡಿ ಬೇರೆ ಫೋಟೋ ಎಡಿಟ್ ಮಾಡಲಾಗಿದೆ. ಇದು ವೈಯುಕ್ತಿಕ ದ್ವೇಷದಿಂದ ಮಾಡಿದ್ದಾರೆ.
ಇನ್ನೂ ಕೂಡ ಅವರು ಇದೇ ರೀತಿ ವರ್ತಿಸಿದರೆ ಯುವ ಮೋರ್ಚಾ ಕೈಕಟ್ಟಿ ಕೂರುವುದಿಲ್ಲ, ಎಸ್‌ಡಿಪಿಐ ಗೆ ತಕ್ಕ ಶಾಸ್ತಿ ಯಾಗಲಿದೆ ಎಂದು ಎಚ್ಚರಿಸಿದರು.
ಆರೋಪಕ್ಕೆ ಗುರಿಯಾಗಿರುವ ಪವನ್ ಶೆಟ್ಟಿ ಅವರು ಸ್ಪಷ್ಟನೆ ನೀಡುತ್ತಾ, ವಿಜಯೋತ್ಸವ ಸಂದರ್ಭ ನಾನು ಬಂದು ಹೋಗಿದ್ದೆ, ಅಲ್ಲದೆ ಆ ದಿನ ನೀಲಿ ಶರ್ಟ್ ಧರಿಸಿದ್ದು, ಬಿಳಿ ಶರ್ಟ್‌ನ ಫೋಟೊವನ್ನು ಎಡಿಟ್ ಮಾಡಲಾಗಿದೆ. ಇದು ಸುಳ್ಳು. ಈ ಬಗ್ಗೆ ಸಂಶಯವಿರುವ ಕೆಲವರ ವಿರುದ್ಧ ನಾನು ದಾಖಲೆ ಸಹಿತ ಠಾಣೆಗೆ ದೂರು ನೀಡಿದ್ದೇನೆ. ಅವರ ವಿರುದ್ಧ ಮಾನ ನಷ್ಟ ಮೊಕದ್ದಮೆಯನ್ನೂ ದಾಖಲಿಸಲಿದ್ದೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಸುಧಾಕರ ಧರ್ಮಸ್ಥಳ, ತಾಲೂಕು ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್, ಮಂಡಲದ ಉಪಾಧ್ಯಕ್ಷ ಪ್ರಮೋದ್ ದಿಡುಪೆ ಉಪಸ್ಥಿತರಿದ್ದರು.