ಬೆಳ್ತಂಗಡಿ; ಮನೆಯವರ ಒಪ್ಪಿಗೆ ರಹಿತವಾಗಿ ಸ್ವಜಾತಿಯವಳಲ್ಲದ ಯುವತಿಯೊಬ್ಬಳ ಜೊತೆ ಸ್ನೇಹಸಂಬಂಧವಿಟ್ಟುಕೊಂಡದ್ದೂ ಮಾತ್ರವಲ್ಲದೆ ಇತ್ತೀಚೆಗೆ ಆಕೆಯನ್ನು ಮನೆಗೆ ಕರೆತಂದ ವಿಚಾರವಾಗಿ ನಡೆಯುತ್ತಿದ್ದ ಕಲಹದ ಮುಂದುವರಿದ ಭಾಗವಾಗಿ ಕುಡಿದು ಬಂದ ಮಗ ತನ್ನ ತಂದೆಯನ್ನೇ ಮರದ ಸಲಾಕೆಯಿಂದ ತಲೆಗೆ ಹೊಡೆದು ಸಾಯಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಮುಂಡ್ಯೊಟ್ಟು ಎಂಬಲ್ಲಿ ಸೊಮವಾರ ಸಂಜೆ ವೇಳೆ ನಡೆದಿದೆ.
ವೃತ್ತಿಯಲ್ಲಿ ಗಾರೆ ಕೆಲಸಗಾರಾಗಿದ್ದ ಶ್ರೀದರ ಪೂಜಾರಿ(55ವ.) ಎಂಬವರೇ ಕೊಲೆಯಾದವರು.
ತನ್ನ ಪುತ್ರ ಹರೀಶ(27ವ.) ಎಂಬಾತನೇ ಕೊಲೆಗೈದಾತ.
ಘಟನೆಯ ಸಾರಾಂಶ:
ಶ್ರೀಧರ ಪೂಜಾರಿ ಲಲಿತಾ ದಂಪತಿಗೆ ದಿನೇಶ್
ಮತ್ತು ಹರೀಶ ಇಬ್ಬರು ಗಂಡು ಮಕ್ಕಳು. ಹರ್ಷಿತಾ ಎಂಬ ಓರ್ವೆ ಹೆಣ್ಣು ಮಗಳು. ಆಕೆ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸಕ್ಕಿದ್ದಾಳೆ. ಈ ಪೈಕಿ ಕೊಲೆಕೃತ್ಯ ನಡೆಸಿದ ಹರೀಶ ದ್ವಿತೀಯ ಪಿಯುಸಿ ವರೆಗೆ ಊರಿನಲ್ಲೇ ಓದಿದ್ದಾನೆ. ಆರಂಭದಲ್ಲಿ ಧರ್ಮಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಆತ ಅಲ್ಲಿ ಸ್ವಜಾತಿಯಲ್ಲದ ಯುವತಿ ಜೊತೆ ಪರಿಚಯವಾಗಿ ಆಕೆಯ ಜೊತೆ ಊರುಬಿಟ್ಟು ಬೆಂಗಳೂರು ಸೇರಿದ್ದನೆನ್ನಲಾಗಿದೆ. ಈ ವಿಚಾರ ಮನೆಗೆ ತಿಳಿದು ಕುಟುಂಬಸ್ತರು ವಿರೋಧ ವ್ಯಕ್ತಪಡಿಸಿದ್ದರು. ಈ ಎಲ್ಲದರ ಮಧ್ಯೆಯೇ ಹರೀಶ ವಿಪರೀತ ಮದ್ಯ ಸೇವನೆ ದುರಾಭ್ಯಾಸ ಅಂಟಿಸಿಕೊಂಡು ವಿಚಿತ್ರವಾಗಿ ವರ್ತಿಸುತ್ತಿದ್ದ.
ಮನೆಯವರ ವಿರೋಧದ ಮಧ್ಯೆಯೇ ಕೆಲ ದಿನಗಳ ಹಿಂದೆ ಆಕೆಯನ್ನು ಬೆಂಗಳೂರಿನಿಂದ ಗರ್ಡಾಡಿ ಮನೆಗೆ ಕರೆತಂದಿದ್ದ. ಮನೆಯಲ್ಲಿ ಮದುವೆ ಪ್ರಾಯಕ್ಕೆ ಬಂದಿರುವ ಸಹೋದರಿ ಇರುವಾಗ ಅನ್ಯಜಾತಿಯ ಯುವತಿಯನ್ನು ಮನೆಗೆ ಕರೆತಂದ
ಈ ವಿಚಾರವಾಗಿ ಮನೆಯಲ್ಲಿ ನಿತ್ಯ ಗಲಾಟೆ ನಡೆಯುತ್ತಿತ್ತು. ಮಗನಿಗೆ ಸಾಕಷ್ಟು ಬುದ್ದಿವಾದ ಹೇಳಿದ್ದ ತಂದೆ ಶ್ರೀಧರ ಪೂಜಾರಿ ಅವರು ಸದ್ರಿ ಯುವತಿಯನ್ನು ಬೆಂಗಳೂರಿಗೆ ಕಳಿಸುವಂತೆ ಒತ್ತಾಯಿಸಿದ್ದರು.
ಅಂತೆಯೇ ಮೂರು ದಿನಗಳ ಹಿಂದೆ ಆ ಯುವತಿಯನ್ನು ಬೆಂಗಳೂರು ಮನೆಗೆ ಕಳುಹಿಸಲಾಗಿತ್ತು. ಇದಾದ ಬೆನ್ನಿಗೇ ಆಕ್ರೋಶಕ್ಕೆ ಒಳಗಾಗಿದ್ದ ಮಗ ಸೋಮವಾರ ಬೆಳಿಗ್ಗೆ ಕೂಡ ಅತೀವ ಮದ್ಯ ಸೇವಿಸಿ ವೃದ್ದ ತಂದೆಯ ಜೊತೆ ಜಗಳವಾಡಿದ್ದ.
ಹಾಗೆಯೇ ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದ ತಂದೆ ಸಂಜೆ ಮರಳುತ್ತಿರುವಂತೆ ಅವರ ಸಹೋದರ ಮೋಹನ ಪೂಜಾರಿ ಮನೆಯ ಅಂಗಳದಲ್ಲೇ ಮತ್ತೆ ತಂದೆ ಮಗ ಜಗಳ ವಾಡಿ ಕೊಂಡಿದ್ದಾರೆ. ಈ ವೇಳೆ ಮಗ ಹರೀಶ ಮರದ ಸಲಾಖೆಯಿಂದ ತಂದೆಯ ತಲೆಗೆ ಬೀಸಿ ಹೊಡೆದಿದ್ದು ಅವರು ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಘಟನೆ ವಿವರ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಮತ್ತು ಬಳಗದವರು ಧಾವಿಸಿದ್ದು ಸ್ಥಳ ಮಹಜರು ನಡೆಸುತ್ತಿದ್ದಾರೆ.
ಊರವರ ಸಹಕಾರದಿಂದ ಮಗನನ್ನು ವಶಕ್ಕೆ ಪಡೆದಿದ್ದಾರೆ.ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ತರಲಾಗಿ ಮರಣೋತ್ತರ ಪರೀಕ್ಷೆ ಕೈಗೊಳ್ಳಲಾಗಿದೆ.