ಬೆಂಗಳೂರು: ಸಾರ್ವಜನಿಕವಾಗಿ ಹೊಸ ವರ್ಷಾಚರಣೆಗೆ ಈ ಬಾರಿ ಅವಕಾಶ ಇರುವುದಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಸುದ್ದಿಗಾರರೊಂದಿಗೆ ತಿಳಿಸಿದರು.
ಕೋವಿಡ್ ಕಾರಣದಿಂದಾಗಿ ವಿಜ್ಞಾನಿಗಳ ಸಲಹೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಅವರೊಂದಿಗೆ ನಾನು ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಇಂದು ಚರ್ಚೆ ಮಾಡಿದ್ದೇವೆ. ಅದಕ್ಕೆ ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದಾರೆ. ಶೀಘ್ರವೇ ಈ ವಿಷಯದಲ್ಲಿ ಆದೇಶ ಹಾಗೂ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು ಎಂದು ಹೇಳಿದರು.
ಹೊಟೇಲ್‌ಗಳಲ್ಲಿ ಪಾರ್ಟಿ ಮಾಡುವುದಕ್ಕೆ ಅಭ್ಯಂತರವಿಲ್ಲ. ಆದರೆ ಕೋವಿಡ್ ಮಾರ್ಗಸೂಚಿ ಪ್ರಕಾರ ಇರಬೇಕು. ಒಟ್ಟು ಸಾಮರ್ಥ್ಯದ ಶೇ 50ರಷ್ಟು ಆಸನಗಳಿಗೆ ಮಾತ್ರ ಅವಕಾಶ ಇರುತ್ತದೆ. ಅಂತರ ಕಾಯ್ದುಕೊಳ್ಳಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ನಿಗಾ ವಹಿಸಲಿದೆ. ಹಿಂದೆಲ್ಲಾ ಅದ್ಧೂರಿಯಾಗಿ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ಮಾಡಿದ್ದೇವೆ. ಈ ಬಾರಿ ಕೊರೊನಾ ಕಾರಣದಿಂದಾಗಿ ಸರ್ಕಾರಕ್ಕೆ ಸಹಕಾರ ನೀಡಬೇಕು. ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕೋರಿದರು.