17 ಪ್ರಕರಣ ಎದುರಿಸುತ್ತಿರುವ ಇಳಂತಿಲ ನೇಜಿಕಾರು ಶಾಫಿ ಎರೆಸ್ಟ್
ಬೆಳ್ತಂಗಡಿ; ಎರಡು ದಿನಗಳ ಹಿಂದಷ್ಟೇ ಮದ್ದಡ್ದ ಸಬರಬೈಲು ಎಂಬಲ್ಲಿ ಒಂದೂವರೆ ಕೆ.ಜಿ ಗಾಂಜಾ ಸಹಿತ ಇಬ್ಬರು ಆರೋಪಿಗಳನ್ನು ವಶಪಡಿಸಿಕೊಂಡ ಬೆಳ್ತಂಗಡಿ ಪೊಲೀಸರು ಮತ್ತೆ ಎರಡು ಕೆ.ಜಿ ಗಾಂಜಾ ಸಹಿತ ಇನ್ನೊಬ್ಬ ಆರೋಪಿಯನ್ನು ಸೋಮವಾರ ಪರಪ್ಪಿ ಎಂಬಲ್ಲಿ ಬಲೆಗೆ ಕೆಡವಿದ್ದಾರೆ.ಬಂಧಿತ ಆರೋಪಿಯನ್ನು ಇಳಂತಿಲ ಗ್ರಾಮದ ನೇಜಿಕಾರು ಅಂಬೊಟ್ಟು ನಿವಾಸಿ ಮುಹಮ್ಮದ್ ಶಾಫಿ(29) ಯಾನೆ ನೇಜಿಕಾರು ಶಾಫಿ ಎಂಬವನೆಂದು ಗುರುತಿಸಲಾಗಿದೆ.
ಆತನಿಂದ 71,925 ರೂ. ಮೌಲ್ಯದ 2.55 ಕೆ.ಜಿ ತೂಕದ ಗಾಂಜಾ, ಅದನ್ನು ಸಾಗಾಟಕ್ಕೆ ಬಳಸಿದ 80ಸಾವಿರ ರೂ. ಮೌಲ್ಯದ ಹೋಂಡಾ ಸ್ಕೂಟರ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಸೋಮವಾರ ಬೆಳಿಗ್ಗೆ 10.30 ಕ್ಕೆ ಗೇರುಕಟ್ಟೆ ಸನಿಹದ ಪರಪ್ಪು ಎಂಬಲ್ಲಿ ಬೆಳ್ತಂಗಡಿ ಠಾಣೆಯ ಅಪರಾಧ ಪತ್ತೆ ತಂಡದ ಸಿಬ್ಬಂದಿಗಳಾದ ಇಬ್ರಾಹಿಂ ಗರ್ಡಾಡಿ, ಅಬ್ದುಲ್ ಲೆತೀಫ್ ಉಪ್ಪಿನಂಗಡಿ, ಮಾಲತೇಶ್ ರಾವ್, ಗುತ್ಯಪ್ಪ, ಚರಣ್ ಇವರು ವಾಹನ ತಪಾಸಣೆ ನಡೆಸುತ್ತಿದ್ದಾಗ ಉಪ್ಪಿನಂಗಡಿ ಕಡೆಯಿಂದ ಸ್ಕೂಟರ್ ನಲ್ಲಿ ಅತಿವೇಗದಿಂದ ಬರುತ್ತಿದ್ದ ಶಾಫಿ ಎಂಬಾತನನ್ನು ತಡೆದು ವಿಚಾರಣೆ ನಡೆಸಿದಾಗ ಆರೋಪಿ ಉತ್ತರಿಸಲು ತಡವರಿಸಿದಾಗ ಹೆಚ್ಚಿನ ತನಿಖೆ ನಡೆಸಿ ಆತನ ವಾಹನ ಪರಿಶೀಲಿಸಿದಾಗ ಅದರಲ್ಲಿ 2.55 ಕೆ.ಜಿ ಗಾಂಜಾ ಸಾಗಿಸುತ್ತಿದ್ದುದು ಪತ್ತೆಯಾಗಿರುತ್ತದೆ.
ಎಸ್.ಪಿ ಸೋನಾವಣೆ ಋಷಿಕೇಶ್ ಭಗವಾನ್, ಎಡಿಶನಲ್ ಎಸ್.ಪಿ ಡಾ. ಕುಮಾರ್, ಬಂಟ್ವಾಳ ಡಿವೈಎಸ್‌ಪಿ ವೇಲೆಂಟೈನ್ ಡಿಸೋಜಾ ಅವರ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್ ಬಿ ಮತ್ತು ಎಸ್.ಐ ನಂದಕುಮಾರ್ ಅವರ ತಂಡ ಜಂಟಿ ಕಾರ್ಯಾಚರಣೆ ನಡೆಸಿದೆ. ತಂಡದಲ್ಲಿ ಎಎಸ್‌ಐ ಕುಲಜ್ಯೋತಿ ತಿಲಕ್, ಸಿಬ್ಬಂದಿಗಳಾದ ಇಬ್ರಾಹಿಂ ಗರ್ಡಾಡಿ, ಲೆತೀಫ್ ಉಪ್ಪಿನಂಗಡಿ, ಪ್ರಮೋದ್, ವಿಜಯಕುಮಾರ್, ಮಾಲತೇಶ್, ಚರಣ್, ಲಾರೆನ್ಸ್, ಗೀತಾ, ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್ ಬಿ ಅವರ ವಾಹನ ಚಾಲಕ ಆಸಿಫ್ ಮುಂಡಾಜೆ ಇವರು ಭಾಗಿಯಾಗಿದ್ದಾರೆ.
ಚುರುಕುಗೊಂಡ ಪೊಲೀಸ್ ಕಾರ್ಯಾಚರಣೆ;
ಬಂಟ್ವಾಳ ತಾಲೂಕು ತೆಂಕಕಜೆಕಾರು ಗ್ರಾಮದ ಕೆಳಗಿನ ಕರ್ಲ ಎಂಬಲ್ಲಿ ನಡೆದ ಮಾಧಕ ವ್ಯಸನ ಸಂಬಂಧಿತವಾಗಿ ರಫೀಕ್ ಎಂಬಾತನನ್ನು ಸಿದ್ದೀಕ್ ಎಂಬಾತ ಕೊಲೆಗೈದ ಬಳಿಕ ಪೊಲೀಸರ ಕಾರ್ಯಾಚರಣೆ ಚುರುಕುಗೊಳಿಸಿದ್ದು, ಅದರ ಭಾಗವಾಗಿ ಮೂರುದಿನಗಳ ಅಂತರದಲ್ಲಿ ಎರಡು ಗಾಂಜಾ ಪ್ರಕರಣಗಳನ್ನು ಪತ್ತೆಹಚ್ಚಿ ಒಟ್ಟು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಎರಡು ಪ್ರಕರಣಗಳಲ್ಲಿ ಒಟ್ಟು 3.50 ಕೆ.ಜಿ ಗಾಂಜಾ ಪತ್ತೆಹಚ್ಚಿದ್ದಾರೆ.