ಬೆಳ್ತಂಗಡಿ; 2004 ರಲ್ಲಿ ಕನ್ಯಾಡಿ ಗ್ರಾಮವನ್ನು ತನ್ನ ಕಾರ್ಯಕ್ಷೇತ್ರವನ್ನಾಗಿಸಿ ಮೊಳಕೆಯೊಡೆದ ಸೇವಾಭಾರತಿ ಸಂಸ್ಥೆ ಬೆಳ್ತಂಗಡಿ ತಾಲೂಕು ಕಾರ್ಯಕ್ಷೇತ್ರವಾಗಿ ಬೆಳೆದು ನಿಂತಿದ್ದು
ಕಳೆದ ಮೂರು ವರ್ಷಗಳಿಂದ ಸೇವಾಧಾಮದ ಮೂಲಕ ಮೂರು ಜಿಲ್ಲೆಗಳಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿರುವ ನಮ್ಮ ಸೇವಾಭಾರತಿ 17 ವರ್ಷಗಳ ಸಾರ್ಥಕ ಸೇವೆಯನ್ನು ಪೂರೈಸಿ 18 ನೇ ವರ್ಷಕ್ಕೆ ಪಾದರ್ಪಣೆ ಮಾಡುವ ಸಂದರ್ಭ ವಿವಿಧ ಸೇವಾಕಾರ್ಯಗಳ ಹಸ್ತಾಂತರ ಕಾರ್ಯಕ್ರಮವನ್ನು ಫೆಬ್ರವರಿ 25 ರಂದು 5 ಗಂಟೆಗೆ ಕನ್ಯಾಡಿಯ ಹಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಹಮ್ಮಿಕೊಂಡಿದೆ ಎಂದು ಸೇವಾ ಭಾರತಿ ಅಧ್ಯಕ್ಷ ವಿನಾಯಕ ರಾವ್ ಮತ್ತು ಸೌತಡ್ಕ ಸೇವಾಧಾಮ ಪುನಶ್ಚೇತನಾ ಕೇಂದ್ರ ಸಂಚಾಲಕ ಪುರಂದರ ರಾವ್ ಹೇಳಿದರು.
ಕನ್ಯಾಡಿಯ ಸೇವಾ ಭಾರತಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.
ಕಾರ್ಯಕ್ರಮವನ್ನು ಮಂಗಳೂರು ಕೆಎಂಸಿ ಆಸ್ಪತ್ರೆಯ ಹೆಸರಾಂತ ವೈದ್ಯ ಡಾ.ಈಶ್ವರಕೀರ್ತಿ ಸಿ ಯವರು ಉದ್ಘಾಟಿಸಲಿದ್ದಾರೆ . ಕಾರ್ಯಕ್ರಮದಲ್ಲಿ ಸೇವಾಭಾರತಿಯ ಸೇವಾ ಚಟುವಟಿಕೆಗಳಲ್ಲಿ ಸಹಭಾಗಿಗಳಾಗಿರುವ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿರುತ್ತಾರೆ . ಪುನಶ್ವೇತನ ಕೇಂದ್ರ ಹಾಗೂ ಸಮುದಾಯದಲ್ಲಿ ವಿಸ್ತರಿತ ಸೇವೆಗಾಗಿ ಮೈಸೂರಿನ ಜೆ.ಎಸ್.ಎಸ್ ಸಂಸ್ಥೆಯೊಂದಿಗೆ ಒಡಂಬಡಿಕೆ ವಿನಿಮಯ ನಡೆಯಲಿದೆ .
ಅರ್ಹ ಫಲಾನುಭವಿಗಳಿಗೆ ಗಾಲಿಕುರ್ಚಿ , ರಾಂಪ್ , ವಾಟರ್ ಬೆಡ್ ಹಾಗೂ ಸ್ವ ಉದ್ಯೋಗಕ್ಕೆ ಅಗತ್ಯ ಸಹಾಯ ಒದಗಿಸಲಾಗುವುದು . ಸ್ವ ಉದ್ಯೋಗ ತರಬೇತಿ ಪಡೆದ ಫಲಾನುಭವಿಗಳು ತಯಾರಿಸಿದ ವಸ್ತುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ . ಸಭಾ ಕಾರ್ಯಕ್ರಮದ ಬಳಿಕ ಸೇವಾನಿಕೇತನದಲ್ಲಿ ಆಶ್ಲೇಷಾ ಬಲಿ ಹಾಗೂ ಶ್ರೀ ದುರ್ಗಾಪೂಜೆ ಸಂಪನ್ನಗೊಳ್ಳಲಿದೆ ಎಂದರು.
ಮೆನೇಜರ್ ಮೋಹನ್ ಎಸ್ ಉಪಸ್ಥಿತರಿದ್ದರು.