ಬೆಳ್ತಂಗಡಿ: ದಾದಿಯರ ದಿನದ ಅಂಗವಾಗಿ ಬೆಳ್ತಂಗಡಿ ಸಮುದಾಯ ಆಸ್ಪತ್ರೆಯಲ್ಲಿ ಕರ್ತವ್ಯ ಸಲ್ಲಿಸುತ್ತಿರುವ 22 ಮಂದಿ ದಾದಿಯರಿಗೆ ತಲಾ 10 ಸಾವಿರ ರೂ.ಗಳಂತೆ ಅಭಿನಂದನಾ ಪ್ರೋತ್ಸಾಹಕ ಧನ ವಿತರಿಸುವ ಮೂಲಕ ಶಾಸಕ ಹರೀಶ್ ಪೂಂಜ ವಿಶಿಷ್ಟತೆ ಮೆರೆದಿದ್ದಾರೆ.
ಅವರು ಬುಧವಾರ ಬೆಳ್ತಂಗಡಿ ಸಾರ್ವಜನಿಕ ಸಮುದಾಯ ಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನ ಉದ್ಘಾಟಿಸಿ ಈ ಮೊತ್ತ ಹಸ್ತಾಂತರಿಸಿದರು.
ಹಿರಿಯ ಶುಶ್ರೂಷಕಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಸಿಸ್ಟರ್ ಮಾತನಾಡಿ, ನನ್ನ ೩೦ವರ್ಷಗಳ ಅನುಭವದಲ್ಲಿ ದಾದಿಯರನ್ನು ಈ ರೀತಿ ಗೌರವಿಸಿರುವುದು ಪ್ರಥಮವಾಗಿದೆ. ಎಲ್ಲಾ ದಾದಿಯರ ಪರವಾಗಿ ಶಾಸಕ ಹರೀಶ್ ಪೂಂಜಾರವರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಶುಶ್ರೂಷಕಿ ಅಧೀಕ್ಷಕಿ ಜಾಯ್ಸ್ ಫರ್ನಾಂಡೀಸ್ ಮಾತನಾಡಿದರು.
ಈ ಸಂದರ್ಭದಲ್ಲಿ ನ.ಪಂ ಉಪಾಧ್ಯಕ್ಷ ಜಯಾನಂದ ಗೌಡ, ತಾಲೂಕು ವೈದ್ಯಾಧಿಕಾರಿ ಡಾ| ಕಲಾಮಧು ಶೆಟ್ಟಿ ಉಪಸ್ಥಿತರಿದ್ದರು.
ಆಪ್ತ ಸಮಾಲೋಚಕಿ ರಮ್ಯಾ ಕಾರ್ಯಕ್ರಮ ನಿರೂಪಿಸಿದರು.