ಬಾಲಕ ಅನುಭವ್ ರಕ್ಷಣೆಗಾಗಿ 3 ಗಂಟೆ 56 ನಿಮಿಷಗಳಲ್ಲಿ 486 ಕಿ.ಮೀ. ಓಡಿದ ಅಜಯ್ ಶೆಟ್ಟಿ ಉಜಿರೆ ಅವರ ಫಾರ್ಚುನರ್ ಕಾರು!
ಬೆಳ್ತಂಗಡಿ; ಉಜಿರೆಯ ಬಾಲಕ ಅನುಭವ್ ಅವರನ್ನು ಅಪಹರಿಸಿದ ತಂಡವನ್ನು ಬೆನ್ನತ್ತಿದ್ದ ಪೊಲೀಸ್ ತಂಡ ಅಲ್ಲಿ ತಲುಪುವುದು 10 ನಿಮಿಷ ತಡವಾಗುತ್ತಿದ್ದರೆ ಆ ಮಗು ಬೇರೆ ರಾಜ್ಯಕ್ಕೆ ಶಿಫ್ಟ್ ಆಗುತ್ತಿತ್ತು.
ಶರವೇಗದಲ್ಲಿ ಗುರಿ ತಲುಪಿದ ತಂಡ 486 ಕಿ.ಮೀ ಕ್ರಮಿಸಲು ಬಳಸಿದ್ದು ಫುಲ್ ಟ್ರಾಫಿಕ್ ನಲ್ಲಿ ಅಜಯ್ ರಾಮಚಂದ್ರ ಶೆಟ್ಟಿ ಉಜಿರೆ ಬಳಸಿದ್ದು ಬರೀ 3.56 ಗಂಟೆಗಳು ಮಾತ್ರ.....
ಈ ರೋಚಕ ಕಥೆ ಇದೀಗ ಹೊರಬಿದ್ದಿದೆ. ಪೊಲೀಸರನ್ನು ತನ್ನ ಸ್ವಂತ ವಾಹನ ಫಾರ್ಚುನರ್‌ನಲ್ಲಿ ಶರವೇಗದಲ್ಲಿ ಚಲಾಯಿಸಿ ನಿಗದಿತ ಸ್ಥಳಕ್ಕೆ ತಲುಪಿಸಿದವರು ಉಜಿರೆಯ ಕೃಷಿಕ ಹಾಗೂ ಆಫ್ ರೋಡ್ ರಿಯಾಲಿ ಕ್ಷೇತ್ರದ ಸೆಲೆಬ್ರಿಟಿ ಅಜಯ್ ರಾಮಚಂದ್ರ ಶೆಟ್ಟಿ ಉಜಿರೆ ಅವರು.
ಬಾಲಕನ್ನು ಅಪಹರಿಸಿದ ತಂಡ ಕೋಲಾರದ ಕೂರ್ನಹಳ್ಳಿಯ ಮನೆಯೊಂದರಲ್ಲಿ ವಿಶ್ರಾಂತಿಯಲ್ಲಿದ್ದಾರೆ ಎಂದು ಅರಿತ ಪೊಲೀಸ್ ತಂಡ ಆದಷ್ಟು ಬೇಗ ಗುರಿ ತಲುಪಬೇಕಾದ ಅನಿವಾರ್ಯತೆ ಇತ್ತು. ಈ ವೇಳೆ ತನ್ನ ಸ್ವಂತ ವಾಹನವನ್ನು ಉಚಿತವಾಗಿ ಒದಗಿಸಿಕೊಟ್ಟು ಅತೀ ಕಡಿಮೆ ಅವಧಿಯಲ್ಲಿ ಅತಿದೂರ ತಲುಪುವ ಸಾಧನೆಯನ್ನು ಅಜಯ್ ಶೆಟ್ಟಿ ಮಾಡಿದ್ದಾರೆ.
ಚಾರ್ಮಾಡಿಘಾಟ್ ಮೂಲಕ ಹ್ಯಾಂಡ್‌ಪೋಸ್ಟ್, ಬೇಲೂರು, ಹಾಸನ, ಚನ್ನರಾಯಪಟ್ಟಣ, ನೆಲಮಂಗಲ, ಬೆಂಗಳೂರು ತಲುಪಿ ಅಲ್ಲಿಂದ ಮತ್ತೆ ಮುಂದುವರಿದು ಕೋಲಾರಕ್ಕೆ ತಲುಪಿ, ಅಲ್ಲಿಂದಲೂ ಮತ್ತೆ 35 .ಕಿ.ಮೀಟರ್ ಒಳಗೆ ನೀಲಗಿರಿ ತೋಪಿನ ಅತೀ ದುರ್ಗಮ ಪ್ರದೇಶಕ್ಕೆ ಅಂದು ಅಜಯ್ ಶೆಟ್ಟಿ ಅವರು ಪೊಲೀಸರನ್ನು ತಲುಪಿಸದಿದ್ದರೆ ಮತ್ತೆ 10 ನಿಮಿಷದಲ್ಲಿ ಅಲ್ಲಿಂದ ಹೊರಡುತ್ತಿದ್ದ ತಂಡ ಮಗುವನ್ನು ಕರೆದುಕೊಂಡು ಆಂಧ್ರಪ್ರದೇಶದ ಬಾರ್ಡರ್ ಪಾಸ್ ಆಗಿಬಿಡುತ್ತಿದ್ದರು.
ಆ ನಂತರ ಮಗುವಿನ ಸುರಕ್ಷಿತ ವಾಪಾಸಾತಿ ಸಂದೇಹದ ವಿಚಾರವಾಗಿತ್ತು ಎಂದು ತಂಡ ಅನುಭವ ಹಂಚಿಕೊಂಡಿದೆ.
ಮಾರಕಾಯುಧ ಹಿಡಿದು ಪೊಲೀಸ್ ವಾಹನವನ್ನೇ ಸುತ್ತುವರಿದಿದ್ದ ಊರ ಜನರು!
ಕೋಲಾರದ ಕೂರ್ನಹಳ್ಳಿಗೆ ತಲುಪಿದ ಇಬ್ಬರು ಎಸ್.ಐ ಗಳು ಮತ್ತು ಇತರ ಐವರು ಪೊಲೀಸರ ತಂಡ ಮನೆಮೇಲೆ ದಾಳಿ ಮಾಡಿ ಓರ್ವನನ್ನು ವಶಕ್ಕೆ ಪಡೆದಿದ್ದರು. ಆತ ನೀಡಿದ ಮಾಹಿತಿಯಂತೆ ಮಗುವನ್ನು ಪಕ್ಕದ ಇನ್ನೊಂದು ಮನೆಯಲ್ಲಿ ಇಟ್ಟಿರುವಲ್ಲಿಗೆ ದಾಳಿ ನಡೆಸಿ ಅಲ್ಲಿ ಐದು ಮಂದಿಯನ್ನು ಒಮ್ಮೆಗೇ ವಶಕ್ಕೆ ಪಡೆದುಕೊಳ್ಳಲಾಯಿತು.
ಅಷ್ಟರಲ್ಲೇ ಕೇವಲ ಐವತ್ತರಷ್ಟು ಮನೆಗಳಿರುವ ಕೂರ್ನಹಳ್ಳಿಯ ಕೆಲವು ಮಂದಿ ಕತ್ತಿ, ದೊಣ್ಣೆ, ಮಾರಕಾಯುಧ ಸಹಿತ ಒಗ್ಗಟ್ಟಾಗಿ ಪೊಲೀಸ್ ವಾಹನವನ್ನೇ ಸುತ್ತುವರಿದು ಅಪಾಯ ತಂದೊಡ್ಡಿದ್ದರು.
ಇಬ್ಬರು ಸಬ್ಸ್ ಇನ್ಸ್‌ಪೆಕ್ಟರ್ ಗಳಲ್ಲಿಮಾತ್ರ ರೈಫಲ್ ಇದ್ದುದುಬಿಟ್ಟರೆ ಇತರ ಐವರಲ್ಲಿ ಅಸ್ತ್ರಗಳಿರಲಿಲ್ಲ. ಅಪಾಯ ಅರಿತ ಪೊಲೀಸರು ಚಾಣಾಕ್ಷತನ ಬಳಸಿ ಅದ್ಹೇಗೋ ಅಲ್ಲಿಂದ ಎಸ್ಕೇಪ್ ಆಗಬೇಕಾಯಿತು ಎಂಬುದು ಬಂಧನದ ಹಿಂದಿರುವ ಕಹಾನಿ.
ಸ್ಥಳೀಯ ಇಬ್ಬರು ಪೊಲೀಸರು ಸಮವಸ್ತ್ರದಲ್ಲಿದ್ದುದು ಬಿಟ್ಟರೆ ಇಲ್ಲಿಂದ ತೆರಳಿದ್ದ ಪೊಲೀಸರು ಯಾರೆಂದು ತಿಳಿಯುತ್ತಿರಲಿಲ್ಲ. ಆದ್ದರಿಂದ ಬೆಳ್ತಂಗಡಿ ಠಾಣೆಯ ಸಿಬ್ಬಂದಿ ಇಬ್ರಾಹಿಂ ಅವರನ್ನು ಹಿಡಿದಿಟ್ಟಿದ್ದ ಊರವರ ಕೈಯಿಂದ ಅವರು ಹೇಗೋ ತಪ್ಪಿಸಿ ಒಂದೂವರೆ ಕಿ.ಮೀ ಓಡಿ ಬಂದಿದ್ದರೆಂಬ ರೋಚಕ ಕಥೆಯೂ ಇದೀಗ ಬಹಿರಂಗವಾಗಿದೆ.
3 ಗಂಟೆಗೆ ಅಲರಾಂ ಇಟ್ಟಿದ್ದ ಅಪಹರಣಕಾರರು ಸುಸ್ತಾಗಿ ಸ್ವಲ್ಪ ಮಲಗಿ ಬಿಟ್ಟಿದ್ದರು!
ಹಿಂದಿನ ದಿನ ಉಜಿರೆಯಿಂದ ಇಂಡಿಕಾ ಕಾರಿನಲ್ಲಿ ಹೊರಟಿದ್ದ ಅಪಹರಣಕಾರರು ಮರುದಿನ ರಾತ್ರಿ 9.30 ರ ವರೆಗೂ ವಿಶ್ರಾಂತಿ ಇಲ್ಲದೆ ನಿರಂತರ ಪ್ರಯಾಣ ಬೆಳೆಸಿದ್ದರಿಂದ ತುಂಬಾ ಸುಸ್ತಾಗಿದ್ದರು.
ಆದರೂ ಬೆಳ್ಳಂಬೆಳಗ್ಗೆ 3 ಗಂಟೆಗೆ ಅಲರಾಂ ಇಟ್ಟು ಮಲಗಿದ್ದವರು ಬೆಳಕು ಹರಿಯುವ ಮುನ್ನ ಸ್ಥಳ ಬದಲಾಯಿಸುವ ನಿರ್ದಾರಕ್ಕೆ ಬಂದಿದ್ದರು. ಆದರೆ ಅಧಿಕ ಸುಸ್ತಾಗಿದ್ದುದರಿಂದ ಸ್ವಲ್ಪ ಹೊತ್ತು ಮತ್ತೆ ಮಲಗಿಬಿಟ್ಟಿದ್ದರು. ಅಲ್ಲದೇ ಇರುತ್ತಿದ್ದರೆ ಅವರು ಆಂಧ್ರ ಗಡಿ ದಾಟಿ ಪಕ್ಕದ ರಾಜ್ಯಕ್ಕೆ ಎಂಟ್ರಿಕೊಟ್ಟಾಗುತ್ತಿತ್ತು. ಒಂದುವೇಳೆ ಹಾಗಾಗುತ್ತಿದ್ದರೆ ಕಥೆ ಆಘಾತಕಾರಿ ಘಟ್ಟಕ್ಕೆ ತಲುಪುತ್ತಿತ್ತೆಂದು ಪೊಲೀಸರು ಹೇಳುತ್ತಾರೆ.
ಹತ್ತು ರಾಜ್ಯ ಸುತ್ತಿದ ಅಜಯ್ ಶೆಟ್ಟಿ ರ್ಯಾಲಿ ಕ್ಷೇತ್ರದ ಸೆಲೆಬ್ರಿಟಿ;
ಕಾರ್ಯಾಚರಣೆ ಯಲ್ಲಿ ಪೊಲೀಸರನ್ನು ಕನಿಷ್ಟ ಸಮಯದಲ್ಲಿ ಸ್ಥಳಕ್ಕೆ ಮುಟ್ಟಿಸಿರುವ ಅಜಯ್ ಶೆಟ್ಟಿ ಉಜಿರೆಯ ಹೆಸರಾಂತ ಉದ್ಯಮಿ, ಸಮಾಜ ಸೇವಕ ರಾಮಚಂದ್ರ ಶೆಟ್ಟಿ ಮತ್ತು ಹೇಮಾವತಿ ಆರ್ ಶೆಟ್ಟಿ ದಂಪತಿ ಪುತ್ರ. ಕೃಷಿಕರಾಗಿರುವ ಅಜಯ್ ಅವರದ್ದು ಆಫ್ ರೋಡ್ ರಿಯಾಲಿಯಲ್ಲಿ ಎತ್ತಿದ ಕೈ. ಈಗಾಗಲೇ ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಕೇರಳ, ಗೋವಾ, ಆಂದ್ರಪ್ರದೇಶದ, ತೆಲಂಗಾಣ, ಪಂಜಾಬ್, ಹರಿಯಾಣ, ಮಹಾರಾಷ್ಟ್ರ, ಅರುಣಾಚಲ್ ಪ್ರದೇಶ ಮೊದಲಾದೆಡೆ ರಿಯಾಲಿಯಲ್ಲಿ ಭಾಗವಹಿಸಿ 220 ಟ್ರೋಫಿಗಳನ್ನು ಪಡೆದಿದ್ದಾರೆ.
ಇದು ಅವರ ಫ್ಯಾಸನ್. ಅಜಯ್ ಶೆಟ್ಟಿ ಅವರು ಈ ಪೊಲೀಸ್ ಕಾರ್ಯಾಚರಣೆಯಲ್ಲಿ ಸ್ಥಳಕ್ಕೆ ತಲುಪಿದ್ದೂ ಮಾತ್ರವಲ್ಲದೆ ಕಟ್ಟುಮಸ್ತಾಗಿರುವ ಅವರು ನೇರವಾಗಿ ಪೊಲೀಸರ ಜೊತೆ ಆರೋಪಿಗಳ ಪತ್ತೆಯಲ್ಲೂ ಪಾಲುದಾರರಾಗಿದ್ದಾರೆ.
ಒಟ್ಟಿನಲ್ಲಿ ಒಂದು ಸಂಘಟಿತ ಪ್ರಯತ್ನ ಮತ್ತು ಚಾಣಾಕ್ಷ ನಡೆಯಿಂದ ಬಹುದೊಡ್ಡ ಅಪಾಯವೊಂದು ತಪ್ಪಿದ್ದು,ಮಗು ಮತ್ತೆ ಕುಟುಂಬದ ಮಡಿಲು ಸೇರಿದಂತಾಗಿರುವುದು ಮಾತ್ರಒಂದು ರೋಚಕ ಕಥೆ.