'ಕನಸಿನಮನೆ' ಮೋಹನ್ ಕುಮಾರ್ ಅವರ ವಿಶಿಷ್ಟ ಕಲ್ಪನೆಯಲ್ಲಿ ಮೂಡಿ ಬಂದಿದೆ ಅನ್ನಪೂರ್ಣೇಶ್ವರಿ ಗುಡಿ*
*ಬೆಳ್ತಂಗಡಿ: ಅಂದು ಉಜಿರೆಯಲ್ಲಿ ನಡೆದಿದ್ದ ವಿಶ್ವ ತುಳು ಸಮ್ಮೇಳನ ಮುಗಿದ ಬಳಿಕ ಎಲ್ಲರ ಮನದಲ್ಲೂ ಅಚ್ಚಳಿಯದೇ ಉಳಿದ ನೆನಪೆಂದರೆ ಹೇಮಾವತಿ ವಿ. ಹೆಗ್ಗಡೆಯವರ ಪರಿಕಲ್ಪನೆಯಡಿ ಮೂಡಿಬಂದಿದ್ದ "ತುಳುಗ್ರಾಮ". ಅಂತೆಯೇ ಈ ಬಾರಿ ನಡೆಯುವ ಉಜಿರೆ ಶ್ರೀ ಜನಾರ್ದನ ದೇವರ ಬ್ರಹ್ಮಕಲಶೋತ್ಸವದ ಬಳಿಕ ಎಲ್ಲರ ಮನದಲ್ಲೂ ಉಳಿಯುವ ಒಂದು ನೆನಪಾಗಲಿದೆ ಅನ್ನ ಪ್ರಸಾದಕ್ಕಾಗಿ ವಿಭಿನ್ನವಾಗಿ ರೂಪಿಸಿದ "ಸುಪ್ರಸಾದ" ಅರಮನೆ ಮತ್ತು ಅನ್ನಪೂರ್ಣೇಶ್ವರಿ ಗುಡಿ*
ಉಜಿರೆ ಶ್ರೀ ಜನಾರ್ದನ ದೇವರ ಮೂರನೇ ಅತೀ ದೊಡ್ಡ ಐತಿಹಾಸಿಕ ಬ್ರಹ್ಮಕಲಶೋತ್ಸವವು ಮಾ.2 ರಿಂದ ಮೊದಲ್ಗೊಂಡು ಮಾ.11 ರ ವರೆಗೆ ನಡೆಯಲಿದೆ. ರಾಜಗೋಪುರ ಉದ್ಘಾಟನೆ, ಬ್ರಹ್ಮರಥ ಮತ್ತು ಪುಷ್ಪರಥ ಸಮರ್ಪಣೆ ಇವೇ ಈ ಬಾರಿಯ ಬ್ರಹ್ಮಕಲಶೋತ್ಸವದ ಜೊತೆಗೆ ಮಿಳಿತಗೊಂಡಿರುವ ವಿಶೇಷತೆಗಳು.
ಕ್ಷೇತ್ರದಲ್ಲಿ ಸನಾತನ ಹಿಂದೂ ಧಾರ್ಮಿಕ ಪರಂಪರೆಯಂತೆ 12 ವರ್ಷಗಳಿಗೊಮ್ಮೆ ನಡೆಯುವ
ಶ್ರೀ ದೇವರ ಅಷ್ಟ ಬಂಧ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದಷ್ಟೇ ಮಹತ್ವದ ಇನ್ನೊಂದು ವಿಚಾರವೆಂದರೆ ಅನ್ನ ಪ್ರಸಾದ ಸಮರ್ಪಣೆ. ಅದನ್ನು ಅಷ್ಟೇ ಭಕ್ತಿ ಭಾವದಿಂದ ನೆರವೇರಿಸಬೇಕು ಎಂಬ ಪರಿಕಲ್ಪನೆಯೊಂದಿಗೆ ಅದಕ್ಕಾಗಿಯೇ ದೇವಳದ ಕೇಳಗಿನ ಕೃಷ್ಣಾನುಗ್ರಹ ಸಭಾಂಗಣದ ಪಕ್ಕದ ಮೈದಾನವನ್ನು "ಅರಮನೆಯ" ರೂಪದಲ್ಲಿ ಶೃಂಗರಿಸಿ ವಿಶೇಷ ಆಕರ್ಷಣೀಯ ತಾಣವಾಗಿಸಲಾಗಿದೆ.
ಸೇವೆ, ಸಮರ್ಪಣೆ, ಹಾಗೂ ಕ್ರಿಯಾಶೀಲತೆಗೇ ಹೆಸರುವಾಸಿಯಾಗಿರುವ, ತಾಲೂಕಿನಲ್ಲಿ ನೈಜ ಅರ್ಥದಲ್ಲಿ ಹಲವರ ಬದುಕು ಕಟ್ಟಿದ 'ಲಕ್ಷ್ಮೀಗ್ರೂಪ್ಸ್'ನ ಮೋಹನ್ ಕುಮಾರ್ ಅವರ ನೇತೃತ್ವದಲ್ಲಿ ಈ ಕಾರ್ಯ ಅತ್ಯಂತ ಶ್ರದ್ಧೆ ಮತ್ತು ಆಸ್ತೆಯಿಂದ ಪೂರ್ಣಗೊಂಡಿದೆ.
*25 ಸಾವಿರ ಚದರ ಅಡಿಯ ವಿಶಾಲ ಅನ್ನಮಂಟಪ "ಸುಪ್ರಸಾದ":*
'ಸುಪ್ರಸಾದ' ಎಂಬ ಹೆಸರಿನಲ್ಲಿ 25 ಸಾವಿರ ಚದರ ಅಡಿ ವಿಶಾಲತೆಯಲ್ಲಿ ಅನ್ನಮಂಟಪ ನಿರ್ಮಾಣಗೊಂಡಿದೆ.
ಒಟ್ಟು ಬ್ರಹ್ಮಕಲಶೋತ್ಸವ ಚಪ್ಪರಕ್ಕಾಗಿ ಯುವ ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ ಅವರ ತೋಟದಿಂದ 3000 ಅಡಿಕೆ ಮರಗಳನ್ನು ತರಲಾಗಿದ್ದು ಈ ಪೈಕಿ 750 ಅಡಿಕೆ ಮರದ ಕಂಬಗಳು ಅಡುಗೆ ಮಂಟಪಕ್ಕೆ ಬಳಸಲಾಗಿದೆ. ಅದರದ್ದೇ ಗರಿ (ಸೋಗೆ)ಯ ಮೇಲ್ಚಾವಣಿ, ಅದರ ಕೆಳಗೆ ಶುಭ್ರವಾದ ಶ್ವೇತವರ್ಣದ ಮೇಲ್ಕಟ್ಟು, ಸಾವಿರ ಕಂಬದ ಬಸದಿ ಹೋಲುವ 100 ರಷ್ಟು ಫೈಬರ್ ಡಿಸೈನ್ಡ್ ಕಂಬಗಳು, ನೆಲಕ್ಕೆ ಒಂದಿಂಚೂ ಬಿಡದೆ ಹಸಿರು ಮ್ಯಾಟ್ ಅಳವಡಿಕೆ ಇತ್ಯಾಧಿ ಕಾಮಗಾರಿ ಕೈಗೊಳ್ಳಲಾಗಿದೆ. ಪ್ರವೇಶ ದ್ವಾರವಂತೂ ಕೇದಾರನಾಥ, ಅಯೋಧ್ಯೆಯ ಶ್ರೀ ರಾಮ ಮಂದಿರವನ್ನೇ ಹೋಲುವ ರೀತಿಯಲ್ಲಿ ಶಿಲಾಮಯ ವರ್ಣದೊಂದಿಗೆ ಆಕರ್ಷಣೀಯವಾಗಿದೆ. ಇಕ್ಕೆಲಗಳಲ್ಲಿ ಎರಡು ಆನೆಯ ಪ್ರತಿರೂಪಗಳು, ಮುಖ ಮಂಟಪದ ಮೇಲೆ ಬೃಹದಾಕಾರದ ಶಿವನ ಮೂರ್ತಿ, ಪ್ರತೀ ಮುಗುಳಿಯ ಮೇಲೂ ಭಗವಧ್ವಜ ಇವುಗಳು ಒಂದು ಧಾರ್ಮಿಕ ಸಂವೇದನೆಯನ್ನೇ ಸೃಷ್ಟಿಸಿದೆ. ಒಳ ಪ್ರವೇಶಿಸುತ್ತಿರುವಂತೆಯೇ ಯಕ್ಷಗಾನ ವೇಶದ ಪ್ರತಿಕೃತಿಗಳು ನಮ್ಮನ್ನು ಸ್ವಾಗತಿಸುತ್ತವೆ. ಅನ್ನ ಛತ್ರದ ಮಧ್ಯದಲ್ಲಿ ಸಾಕ್ಷಾತ್ ಅನ್ನಪೂರ್ಣೇಶ್ವರಿ ದೇವಿಯ ಗುಡಿಯನ್ನೇ ಹೋಲುವ ತಾತ್ಕಾಲಿಕ ಗುಡಿ ಅದ್ಭುತವಾಗಿ ಮೂಡಿಬಂದಿದೆ. ಇದರ ಸುತ್ತಲಿನ ಕಂಬಗಳು ಮತ್ತು ಗುಡಿಯ ನಾಲ್ಕೂ ಗೋಡೆಗಳು ಮೇಲ್ನೋಟಕ್ಕೆ ನೈಜ ಶಿಲೆಯಂತೆ ಗೋಚರಿಸುತ್ತದೆ. ಸಾಗುವಾನಿ ಮರದ ಬಣ್ಣದಲ್ಲಿ ಗರ್ಭಗುಡಿಯ ಬಾಗಿಲಿನ ವರ್ಣವಿದ್ದು ಗುಡಿಯ ಒಳಗೆ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಮೂರ್ತಿ ಹೋಲುವ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಸ್ವಯಂಚಾಲಿತವಾಗಿ ಗುಡಿಯ ಬಾಗಿಲು ತೆರೆದುಕೊಳ್ಳುವ ವೇಳೆ ಶ್ರೀ ದೇವಿಯ ಮೂರ್ತಿಗೆ ದೀಪ ಇಟ್ಟು ಅದು ಉರಿಯುತ್ತಿರುವಂತೆ ಏರ್ಪಾಟು ಮಾಡಲಾಗಿದೆ. ಫೈಬರ್ ಕಂಬಗಳನ್ನು ಲಕ್ಷ್ಮೀ ಕನಸಿನ ಮನೆ ಇಂಡಸ್ಟ್ರಿಯಲ್ಲಿ ಇದಕ್ಕಾಗಿಯೇ ಮೂರು ತಿಂಗಳ ಹಿಂದೆಯೇ ತಯಾರಿಸಲಾಗಿದೆ.
*ಶ್ರಮಾದಾನದ ಮೂಲಕವೇ ಬಹುತೇಕ ಕೆಲಸ;*
ಕೊಳಂಬೆ ಪ್ರಕೃತಿ ದುರಂತ, ಸಾಮೂಹಿಕ ನೇಜಿ ನಾಟಿ ಕಾರ್ಯಕ್ರಮ, ಕೋವಿಡ್ ವಾರಿಯರ್ಸ್ ಸೇವೆ, ಸರಕಾರಿ ಶಾಲೆಗೆ ಪುನರುಜ್ಜೀವನ ಇತ್ಯಾಧಿ ಮಾದರಿ ಶ್ರಮಾದಾನ ಪರಿಕಲ್ಪನೆಯ ಮೂಲಕ ಸೇವಾ ಕಾರ್ಯಕ್ಕೆ ನವಭಾಷ್ಯ ಬರೆದಿರುವ "ಬದುಕು ಕಟ್ಟೋಣ ಬನ್ನಿ" ತಂಡದ ಕಾರ್ಯಕರ್ತರೇ ಬಹುತೇಕ ಶ್ರಮಾದಾನದ ಮೂಲಕ ಇಷ್ಟೊಂದು ದೊಡ್ಡ ಇನ್ನೊಂದು ಅದ್ಭುತ ಮಾದರಿ ರೂಪಿಸಿದ್ದಾರೆ. ಆರಂಭದಲ್ಲಿ
ಕೇವಲ 8 ಮಂದಿ ಸಿಬ್ಬಂದಿಗಳು ಬೆಳಗ್ಗೆ 8ರಿಂದ ರಾತ್ರಿ 10 ರ ವರೆಗೆ ದಣಿವು ಲೆಕ್ಕಿಸದೆ ಕೆಲಸವಹಿಸಿ ಅಷ್ಟು ದೊಡ್ಡ ಚಪ್ಪರ ಎಬ್ಬಿಸಿ ನಿಲ್ಲಿಸಿದ್ದಾರೆ. ಬಳಿಕ ಹತ್ತಾರು ಮಂದಿ ಸೇರಿಕೊಂಡು ಇತರ ಎಲ್ಲಾ ಕೆಲಸಕಾರ್ಯಗಳನ್ನು ನೆರವೇರಿಸಿದ್ದಾರೆ. ಕೆಲವು ಬಾಡಿಗೆ ಸೊತ್ತುಗಳನ್ನೂ ತಂದು ಕಾರ್ಯಕರ್ತರ ಅನುಭವಗಳನ್ನು ಸೇರಿಸಿಕೊಂಡು ಎಲ್ಲವನ್ನು ಹಾಗೂ ಎಲ್ಲರನ್ನೂ ಒಳಗೊಂಡು ಈ ಮಹತ್ ಕಾರ್ಯ ಮಾಡಲಾಗಿದೆ.
*ಅನ್ನಛತ್ರದಲ್ಲಿ 16 ಕೌಂಟರ್ ಗಳು, 3 ಸಾವಿರ ಜನಕ್ಕೆ ಏಕಕಾಲದಲ್ಲಿ ಅನ್ನಪ್ರಸಾದ:*
210 ಅಡಿ ಉದ್ದ, 135 ಅಡಿ ಅಗಲದ ವಿಶಾಲ ಅನ್ನ ಛತ್ರ, 160 ಅಡಿ ಉದ್ದ, 80 ಅಡಿ ಅಗಲದ ಪಾಕಶಾಲೆಯ ವಿಶಾಲತೆಯ ಈ ನಿರ್ಮಾಣದಲ್ಲಿ, ಇಕ್ಕೆಲಗಳಲ್ಲಿ 8+8 ರಂತೆ 16 ಕೌಂಟರ್ ಗಳಲ್ಲಿ ಏಕಕಾಲಕ್ಕೆ ಅನ್ನಪ್ರಸಾದ ವಿತರಣೆ ನಡೆಯಲಿದೆ. ಅದಕ್ಕಾಗಿ 125 ಜನ ಬಡಿಸುವ ಕಾರ್ಯಕರ್ತರು ಸನ್ನದ್ದವಾಗಿದ್ದಾರೆ. 60 ಮಂದಿ ಅನ್ನ ತಂದು ಕೊಡುವವರು ಇರುತ್ತಾರೆ. ಮಧ್ಯಾಹ್ನ 12.00 ಗಂಟೆಯಿಂದ 3.30 ರ ವರೆಗೆ, ಸಂಜೆ 7.00 ಗಂಟೆಯಿಂದ ರಾತ್ರಿ 10.00ರ ವರೆಗೆ ಅನ್ನದಾನ ನಡೆಯುತ್ತದೆ. ಮತ್ತೆ ಸ್ವಚ್ಛತೆಗಾಗಿ ಸಮಯ ಮೀಸಲಿಡಲಾಗಿದೆ. ನಿರಂತರ 10 ದಿನಗಳಲ್ಲಿ ಛತ್ರ ಕಾರ್ಯನಿರ್ವಹಿಸಲಿರುವುದರಿಂದ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ರಾತ್ರಿ10.00 ರ ನಂತರದ ಕೆಲಸಕ್ಕೆ 150 ಮಂದಿಯ ಕನಸಿನ ಮನೆಯ ತಂಡ ರಚಿಸಲಾಗಿದೆ. ಕೈ ತೊಳೆಯಲು 50 ನಳ್ಳಿಗಳನ್ನು ಸಿಮೆಂಟ್ ಇಟ್ಟಿಗೆಗಳು, ಕಾಂಕ್ರೀಟ್ ನೆಲಹಾಸು ಬಳಸಿ ಶಾಶ್ವತ ಎಂಬ ರೀತಿಯಲ್ಲೇ ಸಿದ್ಧಪಡಿಸಲಾಗಿದೆ.
*ಅನ್ನ ಪ್ರಸಾದ ದುರ್ವ್ಯಯಕ್ಕೆ ಅವಕಾಶವೇ ಇಲ್ಲ;*
ಹಸಿದವನ ಹೊಟ್ಟೆ ಮತ್ತು ಮನ ತಣಿಸಲು ಹಾಗೂ ಶ್ರೀ ದೇವರ ಪ್ರಸಾದ ರೂಪದಲ್ಲಿ ವಿತರಣೆಯಾಗುವ ಅನ್ನ ಪ್ರಸಾದವನ್ನು ಪ್ರತೀಯೊಬ್ಬರೂ ಅವರಿಗೆಷ್ಟು ಬೇಕೋ ಅಷ್ಟು ಮಾತ್ರ ಕೇಳಿಪಡೆದುಕೊಂಡು ಒಂದು ಅಗಳೂ ಕೂಡ ಹಾಳಾಗದಂತೆ ಪೂರ್ಣ ಉಂಡು ಸ್ವಚ್ಛತೆ ಮತ್ತು ಅಷ್ಟೇ ಶಿಸ್ತಿನಿಂದ ಒಂದು ಕಡೆ ಪ್ಲೇಟೆ ಪೇರಿಸಿಟ್ಟು ಕೈ ತೊಳೆದು ನಿರ್ಗಮಿಸಬಹುದು.
ಪುಟಾಣಿ ಪ್ರತಿಭಾ ವೇದಿಕೆಯಲ್ಲಿ "ಕಲಾ ಝೇಂಕಾರ" ವೈಭವ;
ಅನ್ನದ ಅರಮನೆಯ ಹೊರಗೆ ಬಯಲು ರಂಗಮಂದಿರವೊಂದನ್ನು ನಿರ್ಮಿಸಲಾಗಿದ್ದು ಇದರಲ್ಲಿ ಸರಸ್ವತಿ ಆರಾಧನೆಯ ಭಾಗವಾಗಿ 9 ವರ್ಷ ವಯೋಮಾನಕ್ಕಿಂತ ಕೆಳಗಿನ, ತಾಲೂಕಿನ ಪ್ರತಿಭಾನ್ವಿತ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ "ಕಲಾ ಝೇಂಕಾರ" ಸಾಂಸ್ಕೃತಿಕ ವೈಭವ ನೀಡಲು ಮುಕ್ತ ಅವಕಾಶ ವ್ಯವಸ್ಥೆಯನ್ನೂ ಮಾಡಲಾಗಿದೆ.
*ಧರ್ಮಸ್ಥಳ ಕ್ಷೇತ್ರ, ಧರ್ಮಾಧಿಕಾರಿ ಡಾ.ಹೆಗ್ಗಡೆಯವರು, ಹರ್ಷೇಂದ್ರ ಕುಮಾರ್ ಅವರೇ ಪ್ರೇರಣೆ; ಮೋಹನ್ ಕುಮಾರ್*
ಇದೆಲ್ಲಾ ಕೆಲಸ ಕಾರ್ಯಗಳಿಗೆ ಹೊಸ ರೂಪ ಕೊಡುವಲ್ಲಿ ನಮಗೆಲ್ಲಾ ಶ್ರೀ ಕ್ಷೇತ್ರ ಧರ್ಮಸ್ಥಳವೇ ಮೂಲ ಪ್ರೇರಣೆ. ಅಲ್ಲಿ ಇಂತಹಾ ಕಾರ್ಯಗಳು ನಿತ್ಯ ನಿರಂತರ ನಡೆಯುವುದರಿಂದಾಗಿ ಅದನ್ನು ಸಮೀಪದಿಂದ ಕಂಡು, ಕೆಲವೊಮ್ಮೆ ಭಾಗವಹಿಸಿ ಅನುಭವ ಪಡೆದುಕೊಂಡದ್ದರಿಂದ ಇವುಗಳು ಸಾಧ್ಯವಾಗಿದೆ. ಕ್ಷೇತ್ರದ ಧರ್ಮಾಧಿಕಾರಿ, ಪೂಜ್ಯ ಖಾವಂದರಾದ ಡಾ. ಡಿ ವೀರೇಂದ್ರ ಹೆಗ್ಗಡೆಯವರು, ಸಣ್ಣ ದಣಿಗಳಾದ ಡಿ ಹರ್ಷೇಂದ್ರ ಕುಮಾರ್ ಅವರೇ ನಮಗೆ ಸ್ಪೂರ್ತಿ. ಸಣ್ಣ ಧನಿಗಳು ನನಗೆ ಪಿ.ಟಿ ಮಾಸ್ಟರ್, ಉಪನ್ಯಾಸಕರು ಮತ್ತು ಪ್ರಾಂಶುಪಾಲರೂ ಎಲ್ಲವೂ ಅವರೇ ಆಗಿದ್ದಾರೆ ಎಂದು, ಈ ಸುಂದರ ಪರಿಕಲ್ಪನೆಯ ನಿರ್ಮಾತೃ ಮೋಹನ್ ಕುಮಾರ್ ಹೇಳುತ್ತಾರೆ. ನಾನು ಸಂಚಾಲಕನಾದರೂ ನಮ್ಮ ಸಮಿತಿಯ ಎಲ್ಲಾ ಸಹೋದ್ಯೋಗಿಗಳು, ನೂರಾರು ಮಂದಿ ಸೇವಾ ಕರ್ತರು, ರಿಕ್ಷಾ ಚಾಲಕರು, ವರ್ತಕ ಬಂಧುಗಳು ಎಲ್ಲರೂ ನಿಸ್ವಾರ್ಥ ಸೇವೆ ನೀಡಿದ ಫಲವಾಗಿ ಇದೆಲ್ಲಾ ಈ ರೂಪದಲ್ಲಿ ಮೂಡಿ ಬಂದಿದೆ. ಎಲ್ಲರನ್ನೂ ಈ ವೇಳೆ ಮನಸಾರೆ ನೆನೆದು ಕೃತಜ್ಞತೆ ಸಲ್ಲಿಸಲೇಬೇಕು. ದೇವರ ಮೇಲಿನ ಭಕ್ತಿಯಿಂದಾಗಿ ದೈವಾನುಗ್ರಹವೆಂಬಂತೆ ಈ ಅವಕಾಶ ನಮ್ಮ ಪಾಲಿಗೆ ಒದಗಿ ಬಂದಿದೆ ಎಂದರೆ ತಪ್ಪಲ್ಲ. ಪ್ರತಿಯೊಂದು ಊರಿನಲ್ಲೂ ದೇವರ ಕೆಲಸ ಆಗುವಾಗ ಅಲ್ಲೊಬ್ಬ ವ್ಯಕ್ತಿ ಇದ್ದೇ ಇರುತ್ತಾನೆ. ಅವನಿಂದ ದೇವರು ಸೇವೆ ಪಡೆದುಕೊಳ್ಳುತ್ತಾನೆ. ನನ್ನದೇನಿದ್ದರೂ ಶ್ರೀ ಜನಾರ್ದನನ ಸೇವೆ. ಅವನು ಈ ಕೆಲಸಗಳನ್ನು ನಮ್ಮ ಕೈಯಿಂದ ಮಾಡಿಸಿಕೊಂಡಿದ್ದಾನೆ ಅಷ್ಟೇ. ಆರ್ಟ್ ವರ್ಕ್ ನಲ್ಲಿ ನನ್ನ ನಿಡುಗಾಲದ ಮಿತ್ರ, ಅದ್ಭುತ ಕಲಾವಿದ ಶಿವ ಉಜಿರೆ ಅವರ ಮೂಲಕ ಕನಸುಗಳು ನನಸಾಗಿವೆ. ಇದು ಹಣದ ಮೌಲ್ಯಕ್ಕಿಂತ ಪ್ರೀತಿ ಮತ್ತು ಭಕ್ತಿಯಿಂದ ಮಾಡಿದ ಸೇವೆ. ಅದಕ್ಕೆ ಬೆಲೆಕಟ್ಟಲು ಸಾಧ್ಯವೇ ಇಲ್ಲ ಎಂದು ಮೋಹನ ಕುಮಾರ್ ಪ್ರತಿಕ್ರಿಯಿಸುತ್ತಾರೆ.
*3 ಲಕ್ಷ ಜನ ಸೇರಿದರೂ ಅನ್ನ ಪ್ರಸಾದ ತಯಾರಿಸಿಕೊಡಲು ನಾವು ಸಿದ್ಧರಾಗಿದ್ದೇವೆ; ರಾಮಚಂದ್ರ ಶೆಟ್ಟಿ*
ಸೌತಡ್ಕ, ಸುರ್ಯ, ಪಜಿರಡ್ಕ, ಇಂದಬೆಟ್ಟು, ಧರ್ಮಸ್ಥಳದ ಮಹಾ ಧರ್ಮನಡಾವಳಿ, ವಿಶ್ವ ತುಳು ಸಮ್ಮೇಳನ, ಕನ್ಯಾಡಿ ನಾಗಮಂಡಲ, ಸಂತ ಸಮಾವೇಶ ಈ ಎಲ್ಲಾ ಬೃಹತ್ ಕಾರ್ಯಕ್ರಮಗಳಲ್ಲಿ ಪಾಕಶಾಲೆಯ ಸೇವಾ ಕಾರ್ಯದ ಅನುಭವ ನನ್ನನ್ನು ಗಟ್ಟಿಗೊಳಿಸಿದೆ. ಉಜಿರೆಯಲ್ಲಿ ನನ್ನ ಪಾಲಿನ 3 ನೇ ಬ್ರಹ್ಮಕಲಶೋತ್ಸವ ಇದು. ಇದಕ್ಕೆ ಈ ಬಾರಿ 3ಲಕ್ಷ ಜನ ಬಂದರೂ ಅನ್ನ ಪ್ರಸಾದ ಒದಗಿಸಲು ನಮ್ಮ ತಂಡ ಸನ್ನದ್ಧವಾಗಿದೆ ಎಂದು ಸಮಿತಿ ಸಂಚಾಲಕ ರಾಮಚಂದ್ರ ಶೆಟ್ಟಿ ಹೇಳುತ್ತಾರೆ.
12 ಒಲೆಗಳು, ಹಾಲುಕ್ಕಿಸಲು ಸಾಂಪ್ರದಾಯಿಕವಾಗಿ ಮಣ್ಣಿನಿಂದಲೇ ನಿರ್ಮಿಸಿದ ಸೆಗಣಿ ಸಾರಿಸಿದ ಒಲೆಯಲ್ಲಿ ಮಣ್ಣಿನ ಮಡಕೆಯಲ್ಲೇ ಹಾಲುಕ್ಕಿಸುವ ವ್ಯವಸ್ಥೆ, ನನ್ನ ಮಗ ಅಜಯ್ ಶೆಟ್ಟಿ ಅವರ ಮುತುವರ್ಜಿಯಿಂದ ತಗಡಿನ ಬದಲು ಬಿದಿರಿನ ಪಾರ್ಟೇಶನ್ ಮಾಡಲಾಗಿದೆ. ಒಂದೂವರೆ ಅಡಿ ಎತ್ತರದ ಅಡಕೆ ಮರದ ಸಲಾಖೆಗಳಿಂದ ನಿರ್ಮಿಸಿದ ಅನ್ನ ತಂದಿಡುವ ವ್ಯವಸ್ಥೆ, 30 ಜನ ನುರಿತ ಪಾಕತಜ್ಞರು, 20 ಮಂದಿ ಗೋರುವವರು, 16 ಮಂದಿ ಆಚೆ ತಂದುಕೊಡುವವರು, ಸಾಕಷ್ಟು ಸ್ವಯಂ ಸೇವಕರು ಎಲ್ಲರನ್ನೂ ಅಣಿಗೊಳಿಸಿಕೊಳ್ಳಲಾಗಿದೆ.
ಅಡುಗೆಗೆ ಬೇಕಾದ ಎಲ್ಲಾ ಪಾತ್ರೆಗಳು ಧರ್ಮಸ್ಥಳದಿಂದ, ಉಜಿರೆಯ ಸೋಮಯಾಗಿಯವರ ವಿ.ಎಸ್ ಶಾಮಿಯಾನದವರಿಂದ ಹಾಗೂ ಅಗತ್ಯಬಿದ್ದಲ್ಲಿ ಕೃಷ್ಣಾನುಗ್ರಹದ ಅಡುಗೆ ಮನೆಯ ಪಾತ್ರೆಗಳೂ ಇವೆ. ತರಕಾರಿ ಹಚ್ಚಲು 30 ಮಂದಿಯನ್ನು ಗುರುತಿಸಲಾಗಿದೆ. ಈಗಿನ ಕಾಲದಲ್ಲಿ ನೆಲದಲ್ಲಿ ಪದ್ಮಾಸನ ಭಂಗಿಯಲ್ಲಿ ಕುಳಿತು ಕಾಯಿ ಹಚ್ಚುವವರು ಸಿಗುವುದು ಕಷ್ಟಸಾಧ್ಯವಾಗಿರುವುದರಿಂದ ಕುರ್ಚಿಯಲ್ಲಿ ಕುಳಿತೇ ಕೆಲಸ ಮಾಡುವ ವ್ಯವಸ್ಥೆ ಮಾಡಲಾಗಿದೆ. 20 ಮಂದಿಯನ್ನು ಪಾತ್ರೆ ತೊಳೆಯಲೆಂದೇ ನಿಯುಕ್ತಿಗೊಳಿಸಲಾಗಿದೆ. ನೀರಿಗಾಗಿ
ಶಾರದಾ ಮಂಟಪದ ಕೊಳೆವೆ ಬಾವಿಯ ಜೊತೆಗೆ ಇನ್ನೆರಡು ಹೊಸ ಕೊಳವೆ ಬಾವಿ ಕೊರೆಯಲಾಗಿದ್ದು ಸಾಕಷ್ಟು ನೀರು ದೊರಕಿದೆ. ವಿಜಯರಾಘವ ಪಡುವೆಟ್ನಾಯರ ಕಾಲದಲ್ಲಿ ಅವರು ಕಟ್ಟಿಸಿದ 40 ಸಾವಿರ ಲೀ. ಸಾಮರ್ಥ್ಯದ ನೀರಿನ ಟ್ಯಾಂಕ್ ಗೆ ಈ ಕೊಳವೆ ಬಾವಿಯಿಂದ ನೀರು ಹರಿದು ಎಲ್ಲೆಡೆಗೂ ಯಥೇಚ್ಛ ನೀರಿನ ಸರಬರಾಜು ವ್ಯವಸ್ಥೆ ಇರುತ್ತದೆ ಎಂದು ರಾಮಚಂದ್ರ ಶೆಟ್ಟಿ ಅವರು ಮಾಹಿತಿ ನೀಡಿದ್ದಾರೆ. ಪಾಕಶಾಲೆಯ ಪಕ್ಕದಲ್ಲೇ ಉಗ್ರಾಣ ವ್ಯವಸ್ಥೆ ಮಾಡಲಾಗಿದ್ದು ಹೊರೆ ಕಾಣಿಕೆ ಮತ್ತು ಖರೀದಿಯ ಮೂಲಕ ಬಂದ ವಸ್ತುಗಳನ್ನು ಇಲ್ಲಿ ಪೇರಿಸಿಡಲಾಗಿದ್ದು ಅಲ್ಲಿಂದ ನಿಯಮಿತವಾಗಿ ಪಾಕಶಾಲೆಗೆ ಒದಗಿಸುವ ಕಾರ್ಯ ನಡೆಯುತ್ತದೆ. ಎಲ್ಲದಕ್ಕೂ ಪ್ರತ್ಯೇಕ ಸಮಿತಿಗಳು, ಅನುಭವಿ ಸಂಚಾಲಕರುಗಳು ಹಾಗೂ ಸದಸ್ಯರಿದ್ದು ಎಲ್ಲರೂ ಅಹರ್ನಿಶಿ ದುಡಿಯುತ್ತಿದ್ದಾರೆ.
ಒಟ್ಟಾರೆಯಾಗಿ ಈ ಬಾರಿಯ ಉಜಿರೆ ಬ್ರಹ್ಮಕಲಶೋತ್ಸವದಲ್ಲಿ ಅನ್ನದಾನವೂ ಒಂದು ಅಮರ ಇತಿಹಾಸವಾಗಿ ದಾಖಲಾಗಲಿದೆ ಎಂಬುದಂತೂ ಸತ್ಯ.
