ಬೆಳ್ತಂಗಡಿ: ತುಮಕೂರಿನ ಕುಚ್ಚಂಗಿ ಕೆರೆಯಲ್ಲಿ ಅಮಾನುಷವಾಗಿ ಕೊಲೆಯಾಗಿದ್ದ ಬೆಳ್ತಂಗಡಿ ತಾಲೂಕಿನ ಮೂರು ಮಂದಿಯ ಮೃತದೇಹ 7 ದಿನಗಳ ಬಳಿಕ ಮಾ.29 ರಂದು ಹುಟ್ಟೂರಿಗೆ ಆಗಮಿಸಿತು. ಸಂಪೂರ್ಣ ಸುಟ್ಟು ಕರಕಲಾಗಿದ್ದ ಮೃತದೇಹಗಳ ಗುರುತುಪತ್ತೆಗಾಗಿ ಮೃತರ ಇಬ್ಬರು ಮಕ್ಕಳು ಮತ್ತು ಮತ್ತೋರ್ವರ ತಂದೆಯನ್ನು ನ್ಯಾಯಾಧೀಶರ ಸಮ್ಮುಖ ಡಿಎನ್‌ಎ ಪರೀಕ್ಷೆಗೊಳಪಡಿಸಿ ಗುರುತು ಪತ್ತೆಯಾದ ಬಳಿಕ ಕುಟುಂಬಕ್ಕೆ ದೇಹ ಹಸ್ತಾಂತರಿಸಲಾಯಿತು.
ಕಾನೂನು ಕಟ್ಟಳೆ ಪ್ರಕಾರ ನ್ಯಾಯಾಧೀಶರ ಸಮ್ಮುಖದಲ್ಲಿ ಎರಡು ದಿನಗಳ ಹಿಂದೆ ಡಿಎನ್‌ಎ ಪರೀಕ್ಷೆ ಗೆ ರಕ್ತದ ಮಾದರಿ ಸಂಗ್ರಹಿಸಲಾಯಿತು. ರಕ್ತ ಸಂಬಂಧಿಗಳೇ ಇದನ್ನು ನಡೆಸಿಕೊಡಬೇಕಾಗಿರುವುದರಿಂದ ಶಾಹುಲ್ ಹಮೀದ್ ಅವರ ಪುತ್ರ ಮುಹಮ್ಮದ್ ಅಲ್ಫಾಝ್, ಇಸಾಕ್ ಅವರ ಏಕೈಕ ಪುತ್ರಿ ಅಫ್ರೀನಾ, ಹಾಗೂ ಸಿದ್ದೀಕ್ ಅವರ ತಂದೆಯೇ ಸ್ವತಃ ನ್ಯಾಯಾಧೀಶರ ಮುಂದೆ ಹಾಜರಾಗಿದ್ದು ಸಹಕರಿಸಿದರು.
ಮೃತರ ಪೈಕಿ ಶಾಹುಲ್ ಹಮೀದ್ ಮತ್ತು ಇಸಾಕ್ ಅವರ ಪಾರ್ಥಿವ ಶರೀರವನ್ನು ಉಜಿರೆ ಹಳೆಪೇಟೆ ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ನ ದಫನ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದರೆ, ಮುಝಮ್ಮಿಲ್ ಯಾನೆ ಸಿದ್ದೀಕ್ ಅವರ ಮೃತದೇಹವನ್ನು ಶಿರ್ಲಾಲು ಮಸ್ಜಿದ್ ದಫನ ಭೂಮಿಯಲ್ಲಿ ಅಂತ್ಯ ಸಂಸ್ಕಾರ ಕೈಗೊಳ್ಳಲಾಯಿತು.
ಅಕ್ಕಪಕ್ಕದಲ್ಲಿ ದಫನ;
ಮುಸ್ಲಿಂ ಸಂಪ್ರದಾಯದಂತೆ ಪಾರ್ಥಿವ ಶರೀರವನ್ನು ದಫನ ಮಾಡಲು ಉಜಿರೆ ಮಸ್ಜಿದ್ ದಫನ ಭೂಮಿಯಲ್ಲಿ ಇಸಾಕ್ ಮತ್ತು ಶಾಹುಲ್ ಹಮೀದ್ ಅವರಿಗೆ ಅಕ್ಕಪಕ್ಕದಲ್ಲೇ ಗುಂಡಿ(ಕಬರ್)ತೋಡಲಾಗಿತ್ತು. ಇಸಾಕ್ ಅವರು ಮೂಲತಃ ಉಜಿರೆ ಕೇಂದ್ರ ಜುಮ್ಮಾ ಮಸ್ಜಿದ್ ವ್ಯಾಪ್ತಿಯವರೇ ಆಗಿದ್ದುದರಿಂದ ಅವರ ಅಂತ್ಯ ಸಂಸ್ಕಾರವನ್ನು ಉಜಿರೆಯಲ್ಲೇ ನೆರವೇರಿಸಲಾಯಿತು.
ಎನ್‌ಎಂಸಿ ಆಂಬುಲೆನ್ಸ್ ಮೂಲಕ ಮೃತದೇಹಗಳನ್ನು ಬೆಳಿಗ್ಗೆ7. ಗಂಟೆಗೆ ಉಜಿರೆಗೆ ತರುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಜನ ಸಾಂಪ್ರದಾಯಿಕ ವಾಗಿ ಅಂತಿಮದರ್ಶನ ಪಡೆದು ಬಳಿಕ ಪಾರ್ಥಿವ ಶರೀರದ ಕೊನೇಯ ನಮಾಝ್ ನಲ್ಲಿ(ಮಯ್ಯತ್ ನಮಾಝ್) ಭಾಗಿಯಾದರು. ಮಹಿಳೆಯರೂ ಕೂಡ ಅಧಿಕ ಸಂಖ್ಯೆಯಲ್ಲಿ ಮಸ್ಜಿದ್ ಆವರಣದಲ್ಲಿ ಜಮಾವಣೆ ಗೊಂಡಿದ್ದರು.
ತುಮಕೂರಿನ ಕುಚ್ಚಂಗಿ ಕೆರೆಯಲ್ಲಿ ನಿಧಿ ಆಸೆಗೆ ಮಾ.22 ರಂದು ಬೆಳ್ತಂಗಡಿಯ ಮೂವರನ್ನು ಕೊಲೆ ಮಾಡಿ ಕಾರಿನಲ್ಲಿ ಬೆಂಕಿ ಹಚ್ಚಿ ಕೊಲೆ ಮಾಡಲಾಗಿತ್ತು. ಮೃತರ ಪೈಕಿ ಶಾಹುಲ್ ಹಮೀದ್ ಅವರು ಪತ್ನಿ, ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ. ಇಸಾಕ್ ಅವರು ಪತ್ನಿ, ಏಕೈಕ ಪುತ್ರಿ ಮತ್ತು ಮೊಮ್ಮಗುವನ್ನು ಅಗಲಿದ್ದಾರೆ. ಸಿದ್ದೀಕ್ ಅವರ ಪತ್ನಿ ಮತ್ತು ಮಗು ಎರಡು ವರ್ಷಗಳ ಹಿಂದೆ ಉಪ್ಪಿನಂಗಡಿ ಬಸ್ಟ್ಯಾಂಡ್ ನಲ್ಲಿ ಕೆಎಸ್‌ಆರ್‌ಟಿಸಿ ಬಸ್ಸಿನಡಿಗೆ ಬಿದ್ದು ಮೃತಪಟ್ಟಿದ್ದು, ಇದೀಗ ಇನ್ನೋರ್ವ ಪುತ್ರ ಹಾಗೂ ತಂದೆಯನ್ನು ಅಗಲಿದ್ದಾರೆ.
ಮೃತದೇಹ ಹಸ್ತಾಂತರ ಹೇಗಾಯಿತು;
ಮೃತದೇಹ ಪಡೆದುಕೊಳ್ಳುವ ಕಾನೂನು ಪ್ರಕ್ರೀಯೆಗಾಗಿ ಇತ್ತ ಉಜಿರೆಯಿಂದ ಮೃತರ ಬಂಧುಗಳಾದ ಆಸಿಫ್ ರೋಶನ್, ಶಾಹುಲ್ ಹಮೀದ್ ಅವರ ಸಹೋದರ ಅಬ್ದುಲ್ ರಹಿಮಾನ್ (ಪುತ್ತ) ಮತ್ತು ಝಮೀರ್, ಇಸಾಕ್ ಅವರ ಸಹೋದರರಾದ ತಲ್ಹತ್ ಕಾಸಿಂ ಮತ್ತು ಶಬೀರ್, ಹಾಗೂ ಅಶ್ಫಾನ್ ಅವರು ದಿನಗಳ ಹಿಂದೆಯೇ ತುಮಕೂರಿಗೆ ತೆರಳಿದ್ದರು.
