ಬೆಳ್ತಂಗಡಿ: ದೇಶದ ಆರ್ಥಿಕ ಅಭಿವೃದ್ಧಿ ಸಹಕಾರ ಕ್ಷೇತ್ರದಿಂದ ಮಾತ್ರ ಸಾಧ್ಯ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬೇಂಕಿನ ಅಧ್ಯಕ್ಷ ಡಾl ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.
ಅವರು ಅಳದಂಗಡಿ ಪ್ರಾ.ಕೃ.ಸ.ಸಂಘದ ಆಶ್ರಯದಲ್ಲಿ , "ಯುವಜನ, ಮಹಿಳಾ ಸಬಲ ವರ್ಗ ಮತ್ತು ಆರೋಗ್ಯಕ್ಕಾಗಿ ಸಹಕಾರ ಸಂಸ್ಥೆ" ಎಂಬ ವಿಷಯದಲ್ಲಿ ಅಳದಂಗಡಿ ಶ್ರೀ ಗುರು ಸಭಾಭವನದಲ್ಲಿ ನಡೆದ 69 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
118 ವರ್ಷ ಇತಿಹಾಸವಿರುವ ಸಹಕಾರಿ ರಂಗ ನಿಲ್ಲದೆ ಇನ್ನಷ್ಟು ವಿಸ್ತರಣೆಯಾಗುತ್ತಿದೆ. ವಾಣಿಜ್ಯ ಬೇಂಕುಗಳು ಕಾಣೆಯಾಗುತ್ತಿವೆ. ಇರುವ ಬ್ಯಾಂಕುಗಳಲ್ಲಿ ಸಾಮಾನ್ಯ ರೈತನಿಗೆ ಗೌರವವನ್ನೇ ನೀಡದಿರುವುದು ಕಾಣುತ್ತಿದ್ದೇವೆ. ಬಂದವರಿಗೆ ಕುಳಿತುಕೊಳ್ಳಲು ಕುರ್ಚಿ ಬಿಡಿ ಸ್ಟೂಲು ಕೂಡ ಕೊಡುವುದಿಲ್ಲ. ಅಲ್ಲಿ ಅನ್ಯ ಭಾಷಿಕ ಸಿಬ್ಬಂದಿಗಳಿಂದ ಹಳ್ಳಿಯ ಮಹಿಳೆಯರು ಅಸಮಾಧಾನಿತರಾಗುತ್ತಿದ್ದಾರೆ. ಸಹಕಾರಿ ಬ್ಯಾಂಕುಗಳಲ್ಲಿ ಇಂತಹ ವಿಚಾರಗಳು ಕಾಣಸಿಗುವುದಿಲ್ಲ ಎಂದರು.
ಸಹಕಾರಿ ಸೇವೆ ಎಲ್ಲರಿಗೂ ಸಿಗಬೇಕು ಎಂಬುದನ್ನು ಉತ್ತೇಜಿಸುವ ಉದ್ದೇಶದಿಂದ ಸಪ್ತಾಹ ನಡೆಸಲಾಗುತ್ತಿದೆ. ಜಿಲ್ಲೆಯ ಸಹಕಾರಿ ಸಂಘಗಳಲ್ಲಿ ಶೇ.100 ರಷ್ಟು ಕೃಷಿ ಸಾಲ ವಸೂಲಾತಿ ಆಗಿರುವುದು ಹೆಮ್ಮೆಯ ಸಂಗತಿ. ನಾರಿಶಕ್ತಿ- ಸಹಕಾರ ಶಕ್ತಿ ಸೇರಿದಲ್ಲಿ ಅದ್ಭುತವನ್ನೇ ಸಾಧಿಸಬಹುದಾಗಿದೆ. ಅಳದಂಗಡಿ ಸಹಕಾರಿ ಸಂಘದ ಸಿಬ್ಬಂದಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿರುವುದನ್ನು ಗಮನಿಸಿದ್ದೇನೆ ಎಂದರು.
ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ರಾವ್ ಅವರು ಯುವಜನ, ಮಹಿಳಾ ಸಬಲ ವರ್ಗ ಮತ್ತು ಆರೋಗ್ಯಕ್ಕಾಗಿ ಸಹಕಾರ ಸಂಸ್ಥೆ ಎಂಬ ವಿಚಾರದಲ್ಲಿ ಉಪನ್ಯಾಸ ನೀಡಿದರು.
ಅಧ್ಯಕ್ಷತೆಯನ್ನು ಅಳದಂಗಡಿ ಪ್ರಾ.ಕೃ.ಪ.ಸಹಕಾರ ಸಂಘದ ಅಧ್ಯಕ್ಷ ಶಿವ ಭಟ್ ವಹಿಸಿದ್ದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ದ.ಕ.ಜಿಲ್ಲಾ ಸ.ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ಪಿ.ಸುಚರಿತ ಶೆಟ್ಟಿ, ನಿರ್ದೇಶಕ ಪದ್ಮನಾಭ ಅರ್ಕಜೆ, ದ.ಕ.ಜಿ.ಕೇ.ಸ.ಬ್ಯಾಂಕಿನ ನಿರ್ದೇಶಕ ಚಿತ್ತರಂಜನ್ ಬೋಳಾರ್, ಗ್ರಾ.ಪಂ.ಅಧ್ಯಕ್ಷೆ ಸೌಮ್ಯಾ ಹರಿಪ್ರಸಾದ್, ದ.ಕ.ಸ.ಯೂನಿಯನ್ ನಿರ್ದೇಶಕಿ ಸಾವಿತ್ರಿ ರೈ, ಬೆಳ್ತಂಗಡಿ ಪ್ರಾ.ಸ.ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸೋಮನಾಥ ಬಂಗೇರ , ಸಹಕಾರ ಅಭಿವೃದ್ಧಿ ಅಧಿಕಾರಿ ಬಿ.ವಿ.ಪ್ರತಿಮಾ, ಸಹಕಾರಿ ಯೂನಿಯನ್ ಅಧ್ಯಕ್ಷ ಸತೀಶ್ ಕೆ. ಅಳದಂಗಡಿ ಸಹಕಾರಿ ಸಂಘದ ಸ್ಥಾಪಕಲ್ಲಿ ಓರ್ವರಾದ ರವಿರಾಜ ಹೆಗ್ಡೆ, ಮು.ಕಾ.ನಿ.ಅ.ಮೀರಾ, ತಾಲೂಕಿನ ಸಹಕಾರಿ ಸಂಘಗಳ ಅಧ್ಯಕ್ಷರುಗಳು, ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.
ಡಾl ಎಂ.ಎನ್.ಆರ್.ಅವರನ್ನು ಸಮ್ಮಾನಿಸಲಾಯಿತು. ಅಳದಂಗಡಿ ಸಹಕಾರಿ ಸಂಘದ ಮಾಜಿ ಅಧ್ಯಕ್ಷ, ಉಪಾಧ್ಯಕ್ಷರುಗಳನ್ನು, ಪ್ರಗತಿಪರ ಕೃಷಿಕ ಬಾಬು ಪೂಜಾರಿ, ಜಾನಪದ ಕಲಾವಿದೆ ಶಾರದಾ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ಸ್ವಾಗತಿಸಿದರು. ನಿರ್ದೇಶಕಿ ಗುಲಾಬಿ ಎಮ್.ಎನ್. ವಂದಿಸಿದರು. ಶಿರ್ಲಾಲು ಸಹಕಾರಿ ಸಂಘದ ಮಾಜಿ ಕಾರ್ಯನಿರ್ವಹಣಾಧಿಕಾರಿ ನಿತ್ಯಾನಂದ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಇದಕ್ಕೂ ಮೊದಲು ಶಾಸಕ ಹರೀಶ್ ಪೂಂಜ ಸಹಕಾರಿ ಧ್ವಜಾರೋಹಣ ನೆರವೇರಿಸಿದರು. ದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಬಿ.ನಿರಂಜನ್ ಸಹಕಾರ ಜಾಥಾ ಉದ್ಘಾಟಿಸಿದರು.
------
ಕೇಂದ್ರ ಸರಕಾರ ಪ್ರಥಮ ಬಾರಿಗೆ ಸಹಕಾರ ಸಚಿವಾಲಯವನ್ನು ಪ್ರಾರಂಭಿಸಿದೆ. ರಾಜ್ಯ ಸರಕಾರ 24 ಲಕ್ಷ ಕೋಟಿ ರೂ.ಗಳನ್ನು ಸಹಕಾರ ರಂಗಕ್ಕೆ ನೀಡಿದ್ದು ಇದರಿಂದ ರಾಜ್ಯದ 32 ಲಕ್ಷ ಜನರು ಇದರ ಪ್ರಯೋಜನ ಪಡೆದಿದ್ದಾರೆ. ರೈತರ ಮಕ್ಕಳ ಶಿಕ್ಷಣಕ್ಕೆ ವಿಶೇಷ ಸವಲತ್ತನ್ನು ನೀಡಲಾಗಿದೆ. ಯಶಸ್ವಿನಿಯನ್ನು ಮತ್ತೆ ಪ್ರಾರಂಭಿಸಲಾಗಿದೆ -- ಪ್ರತಾಪಸಿಂಹ ನಾಯಕ್
MLC