ಬೆಳ್ತಂಗಡಿ; ಬೆಳ್ತಂಗಡಿಯ ಮಾಜಿ ಶಾಸಕ ಕೆ ವಸಂತ ಅವರು ಕ್ಷೇತ್ರದಲ್ಲಿ 5 ಬಾರಿ ಶಾಸಕರಾಗಿ ಜನಸೇವೆ ಸಲ್ಲಿಸಿದ್ದು ಅವರ ಸುಧೀರ್ಘ 50. ವರ್ಷಗಳ ಸಾರ್ವಜನಿಕ ಬದುಕಿನ ಬಗೆಗೆ ಲೇಖಕ ಅರವಿಂದ ಚೊಕ್ಕಾಡಿ ಅವರು ರಚಿಸಿದ, ಜೈ ಪ್ರಕಾಶನ ಸಂಸ್ಥೆ ಬೆಳ್ತಂಗಡಿ ಹೊರತರುವ "ವಸಂತ ವಿನ್ಯಾಸ" ಪುಸ್ತಕ ಅನಾವರಣ ಕಾರ್ಯಕ್ರಮ ಡಿ.4 ರಂದು ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸಭಾಭವನದಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ, ನಿವೃತ್ತ ಅರಣ್ಯಾಧಿಕಾರಿ ಪದ್ಮನಾಭ ಮಾಣಿಂಜ ಹೇಳಿದರು.
ಬೆಳ್ತಂಗಡಿ ಪತ್ರಿಕಾಭವನದಲ್ಲಿ ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಕಾರ್ಯಕ್ರಮದ ಮಾಹಿತಿ ನೀಡಿದರು.
ಈ ಸಮಾರಂಭದ ಅಧ್ಯಕ್ಷತೆ ವಹಿಸಲಿರುವ ವಿಧಾನ ಸಭೆಯ ಪ್ರತಿಪಕ್ಷದ ನಾಯಕರು, ಮಾಜಿ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಅವರು ಪುಸ್ತಕ ಬಿಡುಗಡೆಯನ್ನೂ ನಡೆಸಿಕೊಡಲಿದ್ದಾರೆ.
ಪುಸ್ತಕ ಪರಿಚಯವನ್ನು ಮಾಜಿ ಶಾಸಕರು ವಾಗ್ಮಿಗಳಾದ ವೈ.ಎಸ್.ವಿ ದತ್ತ ನಡೆಸಿಕೊಡಲಿದ್ದಾರೆ.ಮುಖ್ಯ ಅಭ್ಯಾಗತರಾಗಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಂಟ್ವಾಳದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ ಭಾಗಿಯಾಗಲಿದ್ದಾರೆ. ಸಮಾರಂಭದ ಕೇಂದ್ರ ಬಿಂದು, ಮಾಜಿ ಶಾಸಕ ವಸಂತ ಬಂಗೇರ ಉಪಸ್ಥಿತರಿರಲಿದ್ದಾರೆ.
ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ ಶ್ರೀನಾಥ್ ಶುಭಾಸಂಸನೆಗೈಯ್ಯಲಿದ್ದಾರೆ. ಪುಸ್ತಕದ ಲೇಖಕರು, ಶಿಕ್ಷಕರಾದ ಅರವಿಂದ ಚೊಕ್ಕಾಡಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ ಎಂದರು.
ಕಾರ್ಯಕ್ರಮದ ಬಗ್ಗೆ ಮಾತನಾಡಿದ ಜೈ ಪ್ರಕಾಶನ ಸಂಸ್ಥೆಯ ಸಂಪಾದಕ ದೇವಿಪ್ರಸಾದ್ ಅವರು, ಈ ಕಾರ್ಯಕ್ರಮ ಸಂಪೂರ್ಣ ಸಾಹಿತ್ಯ ಆಧಾರಿತ ಕಾರ್ಯಕ್ರಮ. ಈ ಪುಸ್ತಕದಲ್ಲಿ ಬಂಗೇರರ ಪಕ್ಷ ರಾಜಕೀಯದ ವಿಚಾರಗಳಿಲ್ಲ. ವಸಂತ ಬಂಗೇರರ ಸಾರ್ವಜನಿಕ ಜೀವನದ ಸಾಧನೆಗಳ ಬಗೆಗಿನ ಸಮಗ್ರ ಚಿತ್ರಣ ಇದೆ. ಈ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಸಾಹಿತ್ಯಾಭಿಮಾನಿಗಳು, ವಸಂತ ಬಂಗೇರರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಸಂಚಾಲಕರುಗಳಾದ ಶೇಖರ್ ಲಾಯಿಲ, ಕೆ ನೇಮಿರಾಜ್ ಕಿಲ್ಲೂರು ಮತ್ತು ಜಯರಾಮಯ್ಯ ಉಪಸ್ಥಿತರಿದ್ದರು