ಬೆಳ್ತಂಗಡಿ: ನಿವೃತ್ತ ಶಿಕ್ಷಕ ಕಲಾವಿದ ಸಂಘಟಕ ಬಹುಮುಖ ಪ್ರತಿಭೆಯ ಕೆ (ಕಿಳಿಂಗಾರು ) ಚಂದ್ರಶೇಖರ ಭಟ್ ಆದೂರು (೮೪) ಮಂಗಳವಾರ ಸ್ವಗೃಹದಲ್ಲಿ ನಿಧನರಾದರು .
ಕಾಸರಗೋಡಿನ ಮಂಗಲ್ಪಾಡಿ, ಅಡೂರು, ಆದೂರು, ಪಾಂಡಿ ಸೇರಿದಂತೆ ವಿವಿಧ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕ, ಮುಖ್ಯ ಶಿಕ್ಷಕ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ಅಪಾರ ವಿದ್ಯಾರ್ಥಿ ವೃಂದವನ್ನು ಹೊಂದಿದ್ದರು . ಉತ್ತಮ ವಾಗ್ಮಿಗಳಾಗಿದ್ದ ಚಂದ್ರಶೇಖರ್ ಭಟ್ ಅವರು ಉತ್ತಮ ನಿರೂಪಕರಾಗಿಯೂ ಮಿಂಚಿದ್ದರು .
ಕಾರ್ತಿಕೇಯ ಕಲಾನಿಲಯದ ಸ್ಥಾಪಕರಲ್ಲೊಬ್ಬರಾದ ಇವರು ನಾಟಕಗಳಲ್ಲಿ ಮುಖ್ಯ ಪಾತ್ರಧಾರಿಗಳಾಗಿ ವೈಯಕ್ತಿಕ ಪ್ರತಿಭೆಗೆ ಮನ್ನಣೆ ಪಡೆದಿದ್ದರು .ಯಕ್ಷಗಾನದಲ್ಲಿ ವೇಷ ವೈವಿಧ್ಯತೆಗಳಿಂದ ಹೆಸರು ಗಳಿಸಿದವರು .ಔದ್ಯೋಗಿಕ ಕ್ಷೇತ್ರದಲ್ಲಿ ಎಳೆಯರನ್ನು ಕಲೆ ಹಾಕಿ ಅಲ್ಲಿಯೂ ಯಕ್ಷಗಾನ ಸಂಘಗಳನ್ನು ರೂಪಿಸಿ ಪ್ರಬಂಧ ಕಥೆ ಕವಿತೆಗಳನ್ನು ಬರೆದು ಸಾಹಿತ್ಯ ಕ್ಷೇತ್ರದಲ್ಲೂ ಗುರುತಿಸಲ್ಪಟ್ಟಿದ್ದರು .ಕನ್ನಡ ,ತುಳು ,ಮಲಯಾಳಂ ಭಾಷಾ ಯಕ್ಷಗಾನ ಹಾಗೂ ನಾಟಕಗಳಲ್ಲಿ ಮುಖ್ಯ ಪಾತ್ರಧಾರಿಯಾಗಿ ಮಿಂಚಿ ಅಪಾರ ಜನಮನ್ನಣೆಗೆ ಪಾತ್ರರಾಗಿದ್ದರು .
ಕೇರಳ ರಾಜ್ಯದುದ್ದಕ್ಕೂ ಅನೇಕ ಪ್ರದರ್ಶನಗಳನ್ನು ನೀಡಿ ಕೇರಳದ ಅಭಿಮಾನಿಗಳನ್ನು ಹೊಂದಿದ್ದ ಅಪ್ರತಿಮ ಕಲಾವಿದರಾಗಿದ್ದರು .ಮಲ್ಲಾವರ ಶ್ರೀ ಪಂಚಲಿಂಗೇಶ್ವರ ಯಕ್ಷಗಾನ ಕಲಾ ಮಂಡಳಿಯ ಸ್ಥಾಪಕ ಸದಸ್ಯರಾಗಿ ಉತ್ತಮ ಸೇವೆ ಸಲ್ಲಿಸಿದ್ದರು .ಉತ್ತಮ ವಿಮರ್ಶಾ ಲೇಖನಗಳನ್ನು ಬರೆಯುತ್ತಿದ್ದ ಇವರ ಲೇಖನ ಬರಹಗಳನ್ನು ಆಹ್ವಾನಿಸಿ ಹಲವು ಮಾಸಿಕ ಪಾಕ್ಷಿಕ ದೈನಿಕ ಪತ್ರಿಕೆಗಳು ಪ್ರಕಟಿಸಿವೆ .ಅಖಿಲ ಭಾರತ ಎಪ್ಪತ್ತೊಂದನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರ ಪ್ರಬಂಧಕ್ಕೆ ರಾಷ್ಟ್ರೀಯ ಬಹುಮಾನವು ಲಭಿಸಿದೆ .
ಓರ್ವ ಪುತ್ರ ಈರ್ವರು ಪುತ್ರಿಯರು ಸಹಿತ ಬಂಧು ವರ್ಗವನ್ನು ಅಗಲಿದ್ದಾರೆ .
ಸನ್ಮಾನ ಪ್ರಶಸ್ತಿ : ಹವ್ಯಕ ಸಂಘಟನೆಗಳು ಕೊಡಮಾಡುವ ಪ್ರಶಸ್ತಿಯೂ ಸೇರಿದಂತೆ , ಯಕ್ಷತೂಣೀರ ಸಂಪ್ರತಿಷ್ಠಾನದ ಗೌರವ ಸನ್ಮಾನ , ಮಲ್ಲವರ ಶ್ರೀ ಪಂಚಲಿಂಗೇಶ್ವರ ಯಕ್ಷಗಾನ ಕಲಾ ಮಂಡಳಿಯ ವತಿಯಿಂದ ಹುಟ್ಟೂರ ಸನ್ಮಾನ ಹೀಗೆ ಹತ್ತು ಹಲವು ಸನ್ಮಾನ ಪ್ರಶಸ್ತಿಗಳು ಲಭಿಸಿವೆ .
ಹವ್ಯಕ ಮುಖಂಡರಾದ ಬಾಲ್ಯ ಶಂಕರ ಭಟ್ , ದಡ್ಡು ಬಾಲಕೃಷ್ಣ ಭಟ್ ,ಕೊಂಕಣಾಜೆ ರಮೇಶ್ ಭಟ್ , ಡಾ. ಕೃಷ್ಣ ರಾಜ್ ಕೆ, ಹೊಸಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕರುಣಾಕರ ,ಸದಸ್ಯರಾದ ಜಗದೀಶ್ ಹೆಗ್ಡೆ , ಹರಿಪ್ರಸಾದ್ ಪಿ , ಪೆರಾಡಿ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕ ಸೀತಾರಾಮ ರೈ , ಉದ್ಯಮಿ ಶಶಿಧರ್ ಅಲ್ಸೆ , ನಿವೃತ್ತ ತಹಶೀಲ್ದಾರ್ ಅಚ್ಯುತ ,ಆಳ್ವಾಸ್ ಸಂಸ್ಥೆಯ ಮೋಹನ್ ಬೋಪಯ್ಯ ಸೇರಿದಂತೆ ಅನೇಕ ಗಣ್ಯರು ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.