ಬೆಳ್ತಂಗಡಿ: ಇಲ್ಲಿಯ ಬಂಗಾಡಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದು, ಸೆಂಟ್ರಿಂಗ್ ಕೆಲಸಕ್ಕೆ ಹೋಗುತ್ತಿದ್ದ ಬಿಹಾರ ಮೂಲದ ಚಂದನ್(35.ವ) ಎಂಬವರು ತನ್ನ ಬಾಡಿಗೆ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವೇಳೆ ಅವರು ಮೊಣಕಾಲೂರಿದ ಸ್ಥಿತಿಯಲ್ಲಿ ನೇಣಿಗೆ ಶರಣಾದುದು ಹೇಗೆ ಎಂಬ ಅನುಮಾನ ಈಗ ವ್ಯಾಪಕವಾಗಿದೆ.
ಸದ್ರಿ ಘಟನೆ ಡಿ.1 ರಾತ್ರಿಯಿಂದ ಡಿ.2 ರ ಬೆಳಗ್ಗಿನ ಮಧ್ಯವೇಳೆಯಲ್ಲಿ ನಡೆದಿದೆ.
ಹಲವು ವರ್ಷಗಳ ಹಿಂದೊಮ್ಮೆ ಬಂಗಾಡಿ ಪರಿಸರದಲ್ಲಿ ಕೂಲಿ ಕೆಲಸ ನಿರ್ವಹಿಸುತ್ತಿದ್ದ ಚಂದನ್, ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದರು. ಹಾಗೆ ಊರಿಗೆ ಮರಳಿದ್ದ ಅವರು ಸುಮಾರು 10 ತಿಂಗಳ ಹಿಂದೆ ಪತ್ನಿ ಮತ್ತು ಮಕ್ಕಳನ್ನು ಊರಿನಲ್ಲೇ ಬಿಟ್ಟು ಮರಳಿ ಬಂಗಾಡಿಗೆ ಬಂದಿದ್ದರು. ವಿಶ್ವನಾಥ ಗೌಡ ಅವರ ಬಿಡಾರದಲ್ಲಿ ವಾಸ್ತವ್ಯವಿದ್ದ ಚಂದನ್ ಇದೀಗ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಕೇಬಲ್ ಒಂದರ ಸಹಾಯದಿಂದ ಕೊರಳಿಗೆ ನೇಣು ಹಾಕಿಕೊಂಡಂತಿದ್ದ ಚಂದನ್ ಅವರ ದೇಹ ಸಂಪೂರ್ಣ ಮೊಣಕಾಲುವರೆಗೆ ಮಡಚಿದ ಸ್ಥಿತಿಯಲ್ಲಿ, ಅಂದರೆ ಹೆಚ್ಚೂ ಕಮ್ಮಿ ಕುಳಿತುಕೊಂಡ ರೀತಿಯಲ್ಲಿ ಪತ್ತೆಯಾದುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಡಿ.2 ಬೆಳಿಗ್ಗೆ ಚಂದನ್ ಕೋಣೆಯ ಬಾಗಿಲು ಸ್ವಲ್ಪ ತೆರೆದುಕೊಂಡಂತಿದ್ದು, ಒಳಗೆ ಹೋಗಿ ನೋಡಿದ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಈ ಬಗ್ಗೆ ವಿಶ್ವನಾಥ ಅವರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹವನ್ನು ನೇಣಿನಿಂದ ಇಳಿಸಿ ಇದೀಗ ಮರಣೋತ್ತರ ಪರೀಕ್ಷೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ.
ಫೋನಿನಲ್ಲಿ ಮಾತನಾಡುತ್ತಿದ್ದುದು ಯಾರ ಬಳಿ?
ಮೃತ ಚಂದನ್ ಕಳೆದ ರಾತ್ರಿ ಸೇರಿದಂತೆ ಬಹುತೇಕ ವೇಳೆ ಪೋನಿನಲ್ಲೇ ಸಂಭಾಷಣೆ ನಡೆಸುತ್ತಿರುತ್ತಾರೆ ಎಂಬುದು ಅವರನ್ನು ಸಮೀಪದಿಂದ ಬಲ್ಲವರ ಅಭಿಪ್ರಾಯ. ಇದು ಅನುಮಾನ ಹುಟ್ಟುಹಾಕಿದೆ. ಇದೀಗ ಅವರ ಮೊಬೈಲ್ ಫೋನ್ ಪೊಲೀಸರ ವಶದಲ್ಲಿದ್ದು ಅದರ ಕರೆಯ ಮಾಹಿತಿಗಳು ಪೊಲೀಸರು ಪರಿಶೀಲಿಸಬೇಕಿದೆ.
ಇತ್ತ ಎಲ್ಲರೊಂದಿಗೂ ಅನ್ಯೋನ್ಯವಾಗಿದ್ದ ಅವರು ಇದೀಗ ಯಾವ ಕಾರಣಕ್ಕಾಗಿ ಈ ಕೃತ್ಯವೆಸಗಿದ್ದಾರೆ ಎಂಬುದನ್ನು ಪೊಲೀಸರು ತನಿಖೆ ನಡೆಸಿ ಬಹಿರಂಗಗೊಳಿಸಬೇಕು ಎಂದು ಜನ ಆಗ್ರಹಿಸಿದ್ದಾರೆ.