ಬೆಳ್ತಂಗಡಿ; ಧರ್ಮಸ್ಥಳ ಕ್ಷೇತ್ರ ಪ್ರಾಚೀನವಾದರೂ ಐತಿಹಾಸಿಕವಾಗಿದೆ. ಧಾರ್ಮಿಕ ಕೇಂದ್ರವಾಗಿರುವ ಧರ್ಮಸ್ಥಳ ಆರ್ಥಿಕ ಪ್ರಗತಿಯ ಯೋಜನೆಗಳನ್ನು ತಂದಿರುವುದು ಅದ್ವಿತೀಯ. ಮಂದಿರದ ಪರಂಪರೆಯನ್ನು ಉನ್ನತೀಮರಿಸಲಾಗಿದ್ದು, ದೇಶ ವ್ಯಾಪಿ ಮತ್ತು ವಿಶ್ವ ವ್ಯಾಪಿ ಯಾಗಬೇಕಾಗಿದೆ ಎಂದು ಕರ್ನಾಟಕದ ಘನತೆವೆತ್ತ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ನಡೆಯುತ್ತಿರುವ ಲಕ್ಷ ದೀಪೋತ್ಸವ ಸಂಭ್ರಮದಂಗವಾಗಿ ಅಮೃತವರ್ಷಿಣಿ ಸಭಾಂಗಣದಲ್ಲಿ ಗುರುವಾರ ನಡೆದ ಸರ್ವ ಧರ್ಮ ಸಮ್ಮೇಳನದ 89ನೇಯ ಅಧಿವೇಶನವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಂದು ಧರ್ಮಗಳಲ್ಲೂ ಪ್ರೇಮದ ತತ್ವ ಇದೆ.ಎಲ್ಲರೂ ಸುಖೀಗಳಾಗಬೇಕು ಹಾಗೂ ನಿರೋಗಿಗಳಾಗಬೇಕು ಎಂಬುದೇ ನಮ್ಮ ಪೂರ್ವಜರ ಆಶಯವಾಗಿತ್ತು. ಈ ರೀತಿಯ ಸಮ್ಮೇಳನ ದೇಶ ವ್ಯಾಪಿ, ವಿಶ್ವ ವ್ಯಾಪಿ ನಡೆಯಲಿ ಎಂದರು.
ಶ್ರೀ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಯವರು ಸ್ವಾಗತಿಸಿ ಮಾತನಾಡಿ, ಧರ್ಮ ಮತ್ತು ಸೇವೆಗಳು ಜೊತೆಜೊತೆಯಾಗಿ ಸಾಗಬೇಕು ಎಂಬ ಆಶಯದಂತೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ ಪರಂಪರೆಯನ್ನು ಪಾಲಿಸುತ್ತಾ ಯಾವುದೇ ಸಂಕುಚಿತ ಭಾವನೆಗಳಿಗೆ ನಿರ್ಭಂಧಿಸದೆ ಲೌಕಿಕ ಹಾಗೂ ಪಾರಮಾರ್ಥಿಕ ಎರಡೂ ದಿಕ್ಕುಗಳಲ್ಲಿ ಕ್ಷೇತ್ರದ ಕಾರ್ಯಗಳುನಡೆಯುತ್ತಿದೆ.
ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಐದು ಲಕ್ಷ ಸ್ವಸಹಾಯ ಸಂಘಗಳ ಮೂಲಕ ಐವತ್ತು ಲಕ್ಷ ಕುಟುಂಬಗಳು ಸೇರ್ಪಡೆಯಾಗಿದ್ದಾರೆ. ಸ್ವ ಸಹಾಯ ಸಂಘಗಳ ಮೂಲಕ ಬ್ಯಾಂಕುಗಳಿಂದ 14ಸಾವಿರ ಕೋಟಿ ಹಣವನ್ನು ವ್ಯವಹಾರಕ್ಕೆ ನೀಡಲಾಗಿದೆ.20 ಲಕ್ಷ ಮಂದಿ ಜೀವನ ಮಧುರ ಪಾಲಿಸಿಯ ಮೂಲಕ ವಿಮಾರಕ್ಷೆಯನ್ನು ಮಾಡಿಕೊಂಡಿದ್ದಾರೆ. ಧರ್ಮೋತ್ಥಾನ ಟ್ರಸ್ಟ್ ಮೂಲಕ 843 ದೇವಾಲಯಗಳ ಪುನರ್ ನಿರ್ಮಾಣ14 ಕೋಟಿ ರೂಪಾಯಿ ನೀಡಲಾಗಿದೆ, ರುಡ್ ಸೆಟ್ ಮೂಲಕ 585 ತರಬೇತಿ ಕೇಂದ್ರಗಳಲ್ಲಿ ಇದುವರೆಗೆ 5 ಲಕ್ಷಕ್ಕೂ ಹೆಚ್ಚು ಯುವಕ ಯುವತಿಯರಿಗೆ ಸ್ವ ಉದ್ಯೋಗ ತರಬೇತಿ ನೀಡಲಾಗಿದೆ. ಶಾಂತಿವನ ಸೇರಿದಂತೆ ಹಲವು ಕಾರ್ಯಕ್ರಮಗಳು ಕ್ಷೇತ್ರದ ವತಿಯಿಂದ ನಡೆಯುತ್ತಿದೆ ಎಂದರು. ನಾಗರಿಕ ಸಮಾಜವೆಂದರೆ ಅಲ್ಲಿ ಕಲೆ ಸಂಸ್ಕೃತಿ, ಆಧ್ಯಾತ್ಮಿಕ, ಆರ್ಥಿಕ ಹೀಗೆ ಸಮಕಾಲೀನ ಸಮಾಜದ ಆಗು ಹೋಗುಗಳಿಗೆ ಲಯಬದ್ಧವಾಗಿ ಸ್ಪಂದಿಸಿ ಧಾರ್ಮಿಕ ವಿಚಾರಗಳ ವಿವರಗಳೊಂದಿಗೆ ವಿವೇಕ, ಕ್ಷಮೆ, ಸಹಾನುಭೂತಿ, ಶ್ರದ್ಧೆ, ಸತ್ಯಗಳನ್ನು ಒಳಗೊಂಡ ನಡೆತೆಯ ನಾಗರಿಕತೆಯು ಧರ್ಮದ ಮೂಲ ಜೀವದ್ರವ್ಯವಾಗಿದೆ ಎಂದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಎಸ್ ವ್ಯಾಸ ಯೋಗ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ರಾಮಚಂದ್ರ ಜಿ ಭಟ್ಟ ಅವರು ಮಾತನಾಡಿ, ಧರ್ಮ ಎನ್ನುವುದು ಸರ್ವರಿಗಾಗಿ. ಧರ್ಮದಲ್ಲಿ ಸರ್ವವೂ ಇದೆ. ಆದರೆ ಸರ್ವವೂ ಧರ್ಮ ಅಲ್ಲ. ಧರ್ಮ ನಮ್ಮ ಪಾಪವನ್ನು ತೊಳೆಯುತ್ತದೆ. ಧರ್ಮದ ಹೆಸರಿಟ್ಟು ಮತ ಪಂತಗಳ ಹೆಸರಿನಲ್ಲಿ ಹೊಂಡ ತೋಡಿಕೊಂಡರೆ ಅದು ಧರ್ಮವಾಗಲು ಸಾಧ್ಯವಿಲ್ಲ ಎಂದರು.
ಧಾರ್ಮಿಕ ಉಪನ್ಯಾಸ ಮಾಲಿಕೆಯಲ್ಲಿ ಸಾಗರದ ಸಾಹಿತಿಗಳು ಮತ್ತು ಪ್ರಾಧ್ಯಾಪಕ ಸರ್ಫಾಜ್ ಚಂಧ್ರಗುತ್ತಿ ಅವರು "ಭಾರತೀಯ ಧರ್ಮಗಳು' ಎಂಬ ವಿಷಯದ ಬಗ್ಗೆ, ಜೈನ ಮಾನಸ ಗಂಗೋತ್ರಿಯ ಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಎಂ.ಎಸ್ ಪದ್ಮ ಅವರು 'ಜೈನ ಧರ್ಮದ ಮೌಲಿಕತೆ ಮತ್ತು ಮಹತ್ವ' ಎಂಬ ವಿಷಯದ ಬಗ್ಗೆ ಮತ್ತು ಶಿವಮೊಗ್ಗ ಕ್ರೈಸ್ತ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಫಾ. ವೀರೇಶ್ ವಿ ಮೊರಾಸ್ ಅವರು 'ಧರ್ಮ ಮತ್ತು ಸಾಮಾಜಿಕ ಸ್ವಾಸ್ಥ್ಯ" ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಉಪನ್ಯಾಸಕ ಡಾ.ಬಿ. ಎ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಗೂ ರಾಷ್ಟ್ರ ಗೀತೆ ಹಾಡಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು, ಉದ್ಘಾಟಕ ಬೆಂಗಳೂರು ಎಸ್ ವ್ಯಾಸ ಯೋಗ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ರಾಮಚಂದ್ರ ಜಿ ಭಟ್ಟ ಅವರನ್ನು ಕ್ಷೇತ್ರದ ವತಿಯಿಂದ ಸನ್ಮಾನಿಸಲಾಯಿತು. ಉದ್ಘಾಟಕರ ಸನ್ಮಾನ ಪತ್ರವನ್ನು ಉಪನ್ಯಾಸಕ ಸುನಿಲ್ ಪಂಡಿತ್ ಮತ್ತು ಶ್ರದ್ಧಾ ಅಮಿತ್ ಬೆಂಗಳೂರು ವಾಚಿಸಿದರು.
ಉಪನ್ಯಾಸಕರನ್ನು ಧರ್ಮಸ್ಥಳ ಕ್ಷೇತ್ರದ ಅ ಪರವಾಗಿ ಡಿ ಸುರೇಂದ್ರ ಕುಮಾರ್ ಸನ್ಮಾನಿಸಿ ಗೌರವಿಸಿದರು. ಧರ್ಮಸ್ಥಳ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಉಮೇಶ್ ಕುರ್ಮಾಣಿ ವಂದನಾರ್ಪಣೆಗೈದರು.