ಬೆಳ್ತಂಗಡಿ; ಮಡಂತ್ಯಾರಿನ ಹೊಟೇಲ್ ನಲ್ಲಿ ಚಹಾ ಸೇವಿಸುವ ವೇಳೆ ಟೇಬಲ್ ಮೇಲೆ ಇಟ್ಟಿದ್ದ ಎರಡು ಲಕ್ಷ ರೂ. ನಗದು ಕಟ್ಟನ್ನು ಮರೆತುಹೋಗಿದ್ದ ಮೊತ್ತವನ್ನು ಪ್ರಾಮಾಣಿಕವಾಗಿ ಮರಳಿಸಿದ ಹೊಟೇಲ್ ಉದ್ಯಮಿಯ ಪ್ರಾಮಾಣಿಕತೆ ಸರ್ವರ ಮೆಚ್ಚುಗೆಗೆ ಪಾತ್ರವಾಗಿದೆ.
ಮಡಂತ್ಯಾರಿನ ಹೊಟೇಲ್ ಕೃಷ್ಣ ಇದರ ಮಾಲಕ ಕೃಷ್ಣ ಅವರು ಈ ಪ್ರಾಮಾಣಿಕತೆ ಮೆರೆದವರು.
ಸುಳ್ಯದ ಅಡಿಕೆ ವ್ಯಾಪಾರಿ ನೌಫಲ್ ಅವರು ಬೆಳ್ತಂಗಡಿ ತಾಲೂಕಿಗೆ ವ್ಯಾಪಾರಕ್ಕೆಂದು ಬಂದವರು ಎಂದಿನಂತೆ ಚಹಾ ಸೇವಿಸಿ ತೆರಳುವ ವೇಳೆ ನಗದು ಇದ್ದ ಚೀಲ ಮರೆತುಬಿಟ್ಟಿದ್ದರು. ಗ್ರಾಹಕರು ಹೋದ ಬಳಿಕ ನಗದು ಇದ್ದ ಕಟ್ಟು ಗಮನಿಸಿದ ಕೃಷ್ಣ ಅವರು ಸ್ಥಳೀಯ ಅಡಿಕೆ ವ್ಯಾಪಾರಿ ಪ್ರಶಾಂತ್ ಶೆಟ್ಟಿ ಮತ್ತು ಎಂ.ಆರ್ ಸುಪಾರಿ ಮಾಲಕ ಹೈದರ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.
ಈ ವೇಳೆ ಉಪ್ಪಿನಂಗಡಿ ತಲುಪಿದ್ದ ವ್ಯಾಪಾರಿ ನೌಫಲ್ ಅವರಿಗೆ ಇಲ್ಲಿ ನಗದು ಕಟ್ಟು ಬಿಟ್ಟಿರುವುದು ಗಮನಕ್ಕೆ ಬಂದಿತ್ತು. ಅವರೂ ಹೈದರ್ ಅವರನ್ನು ಸಂಪರ್ಕಿಸಿ ವಿಚಾರ ತಿಳಿಸಿದ್ದು, ಮತ್ತೆ ಅವರನ್ನು ಮಡಂತ್ಯಾರಿಗೆ ಕರೆಸಿಕೊಂಡು ಅವರ ನಗದಿನ ಕಟ್ಟನ್ನು ಕೃಷ್ಣ ಅವರು ಹಸ್ತಾಂತರಿಸಿದರು. ಈ ವೇಳೆ ಪ್ರಶಾಂತ್ ಶೆಟ್ಟಿ, ಹೈದರ್, ಗಣೇಶ್ ಉಪಸ್ಥಿತರಿದ್ದರು.