ಬೆಳ್ತಂಗಡಿ; ಪತಿ ನಿಧನದ ನಂತರ ಬೇರೆಯವರಿಗೆ ಮೇಲುಸ್ತುವಾರಿ ನೋಡಿಕೊಳ್ಳಲು ನೀಡಿದ ಜಾಗದೊಳಗೆ ಅಕ್ರಮವಾಗಿ ಪ್ರವೇಶಿಸಿದ ವ್ತಕ್ತಿಯೊಬ್ಬರು ಜಾಗದೊಳಗಿದ್ದ ಮೂರು ಬೆಲೆಬಾಳುವ ಹಲಸಿನ ಮರಗಳನ್ನು ಕಡಿದು ಸಾಗಿಸಿದ ಘಟನೆ ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ.
ಈ ಬಗ್ಗೆ ಜಾಗದ ಮಾಲಿಕರು ಧರ್ಮಸ್ಥಳ ಪೊಲೀಸರಿಗೆ ಮತ್ತು ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ ವಿದ್ಯಮಾನವೂ ನಡೆದಿದೆ.
ಪ್ರಸ್ತುತ ಕುಂಬ್ಲೆಯ ಪುತ್ರನ ಮನೆಯಲ್ಲಿ ನೆಲೆಸಿರುವ, ದಿ. ಪಿ.ಕೆ ಸೋಮನ್ ಅವರ ಪತ್ನಿ ಸರೋಜನಿ ಎಂಬವರೇ ದೂರು ನೀಡಿದವರು. ಉಜಿರೆ ನಿವಾಸಿ ವಿಶ್ವನಾಥ ಎಂಬವರೇ ಕೃತ್ಯವೆಸಗಿದವರು ಎಂದು ಸರೋಜಿನಿ ದೂರಿನಲ್ಲಿ ಆರೋಪಿಸಿದ್ದಾರೆ.
ಸರೋಜಿನ ಅವರು ದೂರಿನಲ್ಲಿ ತಿಳಿಸುವಂತೆ, ನನ್ನ ಪತಿಯು ಕಳೆದ ವರ್ಷ ಕೋವಿಡ್‌ನಿಂದ ಮೃತರಾಗಿದ್ದು, ನಾನು ಸದ್ಯಕ್ಕೆ ಪುತ್ರನ ಮನೆಯಲ್ಲಿ ವಾಸವಿದ್ದೇನೆ. ಪತಿಯ ಜೀವಿತ ಕಾಲದಲ್ಲೇ ನಮ್ಮ ರಬ್ಬರ್ ಟ್ಯಾಪಿಂಗ್ ನೋಡಿಕೊಳ್ಳಲು ವಿಜಯನ್ ಎಂಬವರನ್ನು ನೇಮಿಸಿದ್ದು ಅದರಲ್ಲಿ ಬರುತ್ತಿದ್ದ ಆದಾಯದಲ್ಲಿ ಸಂಬಳ ನೀಡುತ್ತಿದ್ದರು. ನಾನು ಯಾವತ್ತಾದರೂ ಒಮ್ಮೆ ಹೋಗಿ ಜಾಗವನ್ನು ಪರಿಶೀಲಿಸಿ ಬರುತ್ತಿದ್ದೆ. ಈ ಮಧ್ಯೆ ಇತ್ತೀಚೆಗೆ ವಿಜಯನ್ ಎಂಬವರನ್ನು ಬೆದರಿಸಿದ ವಿಶ್ವನಾಥ ಎಂಬವರು ನಮ್ಮ ಭಾಗದಲ್ಲಿರುವ ರಬ್ಬರ್ ಮರಗಳನ್ನು ಇನ್ನೊಬ್ಬರಿಗೆ ಟಾಪಿಂಗ್ ವಹಿಸಿಕೊಟ್ಟು ಲಕ್ಷಾಂತರ ರೂ. ಪಡೆದುಕೊಂಡಿದ್ದಾರೆ. ಅಲ್ಲದೆ ಅಂದಾಜು 4-5 ಲಕ್ಷ ರೂ ಬೆಲೆಬರಬಹುದಾದ ಮೂರುನಾಲ್ಕು ಹಲಸಿನ ಮರಗಳನ್ನು ಕಡಿದು ಸಾಗಿಸಿದ್ದಾರೆ. ಈ ಸಂದರ್ಭದಲ್ಲಿ ತೋಟದ 10 ಅಡಿಕೆ ಮರಗಳಿಗೂ ಹಾನಿಯಾಗಿದೆ. ಸದ್ರಿ ವ್ಯಕ್ತಿಯು ಅವರದೇ ಸ್ವತಃ ಜಾಗ ಎಂಬಂತೆ ವರ್ತಿಸಿ ವ್ಯವಹರಿಸಿರುವುದು ಇದರಿಂದ ನನಗೆ ಅನ್ಯಾಯವಾಗಿರುತ್ತದೆ. ಆದ್ದರಿಂದ ಅವರ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಕೊಡಬೇಕೆಂದು ಆಗ್ರಹಿಸಿದ್ದಾರೆ.