ಬೆಳ್ತಂಗಡಿ: ತಾಲೂಕಿನಾದ್ಯಂತ ಶಾಲೆಗಳು ಆರಂಭಗೊಂಡ ಬೆನ್ನಲ್ಲೇ ಶಿಕ್ಷಕರು ವಿವಿಧ ಬೇಡಿಕೆ ಮುಂದಿಟ್ಟು ಕಪ್ಪು ಪಟ್ಟಿ ಧರಿಸಿಕೊಂಡು ಮಕ್ಕಳೊಂದಿಗೆ ಇದ್ದು ಕರ್ತವ್ಯ ನಿರ್ವಹಿಸುವ ಮೂಲಕ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತಿದ್ದಾರೆ.
ಈಗಾಗಲೇ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಂಘದ ನಿರ್ದೇಶನದಂತೆ, ಬೆಳ್ತಂಗಡಿ ತಾಲೂಕಿನಲ್ಲಿಯೂ ತಾವು ಕರ್ತವ್ಯ ನಿರ್ವಹಿಸುತ್ತಿರುವ ಶಾಲೆಗಳಲ್ಲೇ ಕಪ್ಪು ಪಟ್ಟಿ ಧರಿಸಿಕೊಂಡು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. ಸಂಜೆ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಲೂಕು ಸಂಘದ ಅಧ್ಯಕ್ಷ ಕಿಶೋರ್ ಕುಮಾರ್ ಎಚ್.ಕೆ.,ಪ್ರಧಾನ ಕಾರ್ಯದರ್ಶಿ ಸುರೇಶ್ ಮಾಚಾರ್, ಖಜಾಂಚಿ ಲೋಕೇಶ್ ಜಿ,ಉಪಾಧ್ಯಕ್ಷರಾದ ಐರಿನ್ ಡೇಸಾ ಮತ್ತು ಕಿರಣ್ ಕುಮಾರ್ ಕೆ.ಎಸ್, ಜಿಲ್ಲಾ ಸಹಕಾರ್ಯದರ್ಶಿ ಅಮಿತಾನಂದ ಹೆಗ್ಡೆ, ಸಂಘಟನಾ ಕಾರ್ಯದರ್ಶಿ ಮಂಗಳಾ ಕೆ, ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಜಯರಾಜ್ ಜೈನ್, ಪ್ರತಿನಿಧಿಗಳಾದ ಆರತಿ ಜೈನ್, ಒಂಕಾರಮೂರ್ತಿ, ರವಿರಾಜ ಗೌಡ, ಕೋದಂಡರಾಮ ಇತರರು ಉಪಸ್ಥಿತರಿದ್ದರು.
ಮನವಿಯಲ್ಲಿ ಮುಖ್ಯವಾಗಿ ಕಳೆದ 3 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಶಿಕ್ಷಕರ ವರ್ಗಾವಣೆ ಸಮಸ್ಯೆ, ಸೇವಾವಧಿಯಲ್ಲಿ ಶಿಕ್ಷಕರು ಬಯಸುವ ಜಿಲ್ಲೆಗೆ ಒಂದು ಬಾರಿ ವರ್ಗಾವಣೆ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಸೇವಾ ಜ್ಯೇಷ್ಠತೆಯೊಂದಿಗೆ 6-8 ತರಗತಿಗಳಿಗೆ ವಿಲೀನಗೊಳಿಸಲು ವೃಂದ ಮತ್ತು ನೇಮಕಾತಿ ನಿಯಮದ ಸೂಕ್ತ ತಿದ್ದುಪಡಿ, ಮುಖ್ಯಗುರುಗಳಿಗೆ 15,20,25 ವರ್ಷಗಳ ವೇತನಬಡ್ತಿ, ನೂತನ ಪಿಂಚಣಿ ಯೋಜನೆ (ಎನ್.ಪಿ.ಎಸ್.) ರದ್ದತಿ, ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆ, ದೈಹಿಕ ಶಿಕ್ಷಣ ಶಿಕ್ಷಕರ ಸಮಸ್ಯೆ ಮತ್ತು ಹಿಂದಿ ಶಿಕ್ಷಕರ ಸಮಸ್ಯೆ ಹೀಗೆ ಇನ್ನೂ ಹಲವು ಬೇಡಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸಲು ಮನವಿ ಮಾಡಲಾಯಿತು. ಈ ಹೋರಾಟದ ಮೊದಲ ಹಂತವಾಗಿ ಈಗಾಗಲೇ ಶಿಕ್ಷಕರ ನಿಷ್ಟಾ ತರಬೇತಿಯನ್ನು ಬಹಿಷ್ಕರಿಸಲಾಗಿದ್ದು, ಇದೀಗ ಅಕ್ಟೋಬರ್ 21 ರಿಂದ 29 ರವರೆಗೆ ಕಪ್ಪು ಪಟ್ಟಿ ಧರಿಸಿ, ಶಾಲಾ ಶೈಕ್ಷಣಿಕ ಚಟುವಟಿಕೆಗಳನ್ನು ನಿರ್ವಹಿಸುತ್ತಾ ಸರ್ಕಾರದ ಗಮನ ಸೆಳೆಯಲು ತೀರ್ಮಾನಿಸಿದ್ದಾರೆ.
ಇದಕ್ಕೂ ಸರ್ಕಾರ/ಇಲಾಖೆ ಸ್ಪಂದಿಸದಿದ್ದರೆ,ಮಧ್ಯಾಹ್ನದ ಬಿಸಿಯೂಟದ ಮಾಹಿತಿಯನ್ನು ಅಪ್ ಡೇಟ್ ಮಾಡದಿರಲು, ಸ್ಯಾಟ್ಸ್ ಮಾಹಿತಿಯನ್ನು ಅಪ್ ಡೇಟ್ ಮಾಡದಿರಲು ನಿರ್ಧರಿಸಲಾಗಿದೆ. ಮುಂದಿನ ಹಂತದಲ್ಲಿ ತರಗತಿ ಬಹಿಷ್ಕಾರ ಮತ್ತು ಅಂತಿಮವಾಗಿ ಶಾಲಾ ಬಹಿಷ್ಕಾರದಂತಹ ಕಠಿಣ ತೀರ್ಮಾನಕ್ಕೆ ಬರಲು ನಿರ್ಧರಿಸಿರುವ ಬಗ್ಗೆ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಒಟ್ಟಿನಲ್ಲಿ ಕೊರೊನಾದ ಹೊಡೆತ ದಿಂದ ಶೈಕ್ಷಣಿಕ ವ್ಯವಸ್ಥೆ ಚೇತರಿಸಿಕೊಳ್ಳುತ್ತಿದಂತೆ, ಶಿಕ್ಷಕರ ಈ ಅಸಹಕಾರ ಚಳವಳಿ ವ್ಯವಸ್ಥೆ ಯ ಮೇಲೆ ಪರಿಣಾಮ ಬೀರಲಿದ್ದು, ಸರ್ಕಾರ ಎಚ್ಚೆತ್ತುಕೊಂಡು ಶಿಕ್ಷಕರ ನ್ಯಾಯಯುತ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕಿದೆ.