ಬೆಳ್ತಂಗಡಿ; ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಭವಿಷ್ಯದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕತ್ತರಿ ಹಾಕುವ ನೀತಿಯಾಗಿದ್ದು ಈ ವ್ಯವಸ್ಥೆಯನ್ನು ಜಾರಿಗೊಳಿಸುವ ತೀರ್ಮಾನವನ್ನು ಭಾರತ ಸರಕಾರ ಕೈಗೊಂಡಿದ್ದು, ಇದನ್ನು ತಕ್ಷಣಾ ಹಿಂಪಡೆಯಬೇಕೆಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ಜಿಲ್ಲಾ ಸಮಿತಿ ವತಿಯಿಂದ ತಹಶೀಲ್ದಾರ್ ಕಛೇರಿಗೆ ಮಾರ್ಚ್ ನಡೆಸಿತು.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ ಜಿಲ್ಲಾ ನಾಯಕಿ ಗೌಸಿಯಾ ಮಂಗಳೂರು ಮಾತನಾಡಿ, ಹೊಸ ಶಿಕ್ಷಣ ನೀತಿಯನ್ನು ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಚರ್ಚೆ ನಡೆಸದೆ, ತರಾತುರಿಯಲ್ಲಿ ಹಿಂಬಾಗಿಲಿನ ಮೂಲಕ ಜಾರಿಗೊಳಿಸಲು ಸರಕಾರವು ಹೊರಟಿದೆ. ಇದು ಭಾರತದ ಒಕ್ಕೂಟ ವ್ಯವಸ್ಥೆ ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಇದು ಶೈಕ್ಷಣಿಕ ಕ್ಷೇತ್ರವನ್ನು ಸಂಪೂರ್ಣವಾಗಿ ಕೇಸರೀಕರಣಗೊಳಿಸುವ ಮತ್ತು ಖಾಸಗೀಕರಣಗೊಳಿಸುವ ಹುನ್ನಾರ ವಾಗಿದೆ, ಹಾಗೂ ಹೊಸ ಶಿಕ್ಷಣ ನೀತಿಯ ಅಡಿಯಲ್ಲಿ 3 ವರ್ಷ ಇರುವ ಪದವಿಯನ್ನು 4 ವರ್ಷಕ್ಕೆ ಏರಿಸಿದ್ದು, ಒಂದು ವರ್ಷ ಪದವಿ ಕಲಿತರೂ ಪ್ರಮಾಣ ಪತ್ರ ನೀಡುವಂತಹ ಈ ನೀತಿಯಿಂದ ಮೌಲ್ಯಯುತ ಶಿಕ್ಷಣಕ್ಕೆ ತೊಂದರೆಯಾಗಲಿದೆ, ಮತ್ತು ನಿರುದ್ಯೋಗ ಸಮಸ್ಯೆ ಇನ್ನೂ ಹೆಚ್ಚಾಗಲಿದೆ. ಆದ್ದರಿಂದ ರಾಜ್ಯದಲ್ಲಿ ಜಾರಿ ಮಾಡುತ್ತಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಕ್ಷಣ ಹಿಂಪಡೆಯಬೇಕೆಂದು ಆಗ್ರಹಿಸಿದರು.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ. ಜಿಲ್ಲಾ ಮುಖಂಡ ರಿಯಾಜ್ ಅಂಕತಡ್ಕ ಮಾತನಾಡಿ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ವಿರುದ್ಧ ಮೊದಲ ಧ್ವನಿ ಕ್ಯಾಂಪಸ್ ಫ್ರಂಟ್ ಎತ್ತಿದೆ. ಇದುವರೆಗೆ ದೇಶಾಧ್ಯಂತ ಹಲವಾರು ಹೋರಾಟಗಳನ್ನು ಮಾಡಿದೆ. ಮುಂದೆಯೂ ನಾವು ಜಿಲ್ಲಾ ಕೇಂದ್ರಗಳಲ್ಲಿ ಹೋರಾಡ ಮಾಡಲಿದ್ದೇವೆ" ಎಂದರು.
ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ಜಿಲ್ಲಾಧ್ಯಕ್ಷ ಯಾಸೀನ್ ಬಂಗೇರಕಟ್ಟೆ "ಎನ್‌ಇಪಿ ಯು ಒಂದು ಸಿದ್ಧಾಂತದಿಂದ ಕೂಡಿದೆ. ಇದರ ವಿರುದ್ಧ ಕ್ಯಾಂಪಸ್ ಫ್ರಂಟ್ ಕೊನೆಯ ಸದಸ್ಯ ಇರುವವರೆಗೂ ವಿರೋಧಿಸಿಯೇ ತೀರುವೆವು". ಎಂದು ಹೇಳಿ ಸಂಘಟನೆಯ ನಿಲುವನ್ನು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ಜಿಲ್ಲಾ ಕಾರ್ಯದರ್ಶಿ ಶಹೀರ್ ಪಾಂಡವರಕಲ್ಲು, ಜಿಲ್ಲಾ ಕೋಶಾಧಿಕಾರಿ ಝಾಹೀದ್ ಸುನ್ನತ್ ಕೆರೆ, ಜಿಲ್ಲಾ ನಾಯಕರಾದ ಸಹಝಾದ್, ಫೈಝಲ್ ಬಂಗೇರಕಟ್ಟೆ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.ನಗರದ ಬೀದಿಯಲ್ಲಿ ಪ್ರತಿಭಟನಾ ಮೆರವಣಿಗೆ ಕೈಗೊಂಡರು.