ಮಂಗಳೂರಿನ ಅಭಿವೃದ್ಧಿಗೆ ಪೂರಕವಾಗಿ ಫೆ.24 ಮತ್ತು ಜೂನ್ 14ರಂದು ಮಂಗಳೂರಿನಲ್ಲಿ ಬೃಹತ್ ಉದ್ಯಮ ಮೇಳ ನಡೆಸುವ ಯೋಚನೆ ಇದೆ. ಇದರಲ್ಲಿ ಹಲವಾರು ವಿದೇಶಿ ಕಂಪೆನಿಗಳು ಭಾಗವಹಿಸಲಿದ್ದಾರೆ. ಮಂಗಳೂರಿನಲ್ಲಿ ಲ್ಯಾಂಡ್ ಬ್ಯಾಂಕ್ ನಿರ್ಮಾಣ ಮಾಡುತ್ತೇವೆ. ಮಂಗಳೂರನ್ನು ಸುಂದರ ಮತ್ತು ಪಾರಂಪರಿಕೆ ನಗರವನ್ನಾಗಿ ಬೆಳೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಗರದ ಹೊಟೇಲ್ ಓಷ್ಯನ್ ಪರ್ಲ್ ನಲ್ಲಿ ನಡೆದ ಸಮಾರಂಭದಲ್ಲಿ ನ್ಯೂಸ್ ಟೈಮ್ ಕನ್ನಡ ವಾಹಿನಿಯ 5 ನೇ ವರ್ಷಾಚಾರಣೆ ಅಂಗವಾಗಿ ನ್ಯೂಸ್ ಟೈಮ್ ಕನ್ನಡ ಜೀವ ಮಾನ ಶ್ರೇಷ್ಠ ಸಾಧನ ಪ್ರಶಸ್ತಿ ಯನ್ನು ಬೆಳ್ತಂಗಡಿಯ ಸಬಿತಾ ಮೋನಿಸ್ ಗರ್ಡಾಡಿ ಹಾಗೂ ನ್ಯೂಸ್ ಟೈಮ್ ಕನ್ನಡ ಕ್ರೀಡಾ ರತ್ನ ಪ್ರಶಸ್ತಿ ಯನ್ನು ಜಗದೀಶ್ಚಂದ್ರ ಅಂಚನ್ ಸೂಟರ್ ಪೇಟೆ ಅವರಿಗೆ ಪ್ರದಾನ ಮಾಡಿ ಅವರು ಮಾತನಾಡಿದರು.
ಒಂದು ಸಾವಿರ ಕೋಟಿಯ ಪ್ಲಾಸ್ಟಿಕ್ ಪಾರ್ಕ್, ಕೋಸ್ಟಲ್ ಟ್ರೈನಿಂಗ್ ಸೆಂಟರ್ ಸದ್ಯದಲ್ಲಿಯೇ ಮಂಗಳೂರಿನಲ್ಲಿ ಕಾರ್ಯಾರಂಭ ಮಾಡಲಿದೆ. ಅಮೃತ ಮತ್ತು ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನ ಮಾಡಿ ಮಂಗಳೂರಿನ ಪರಂಪರೆ ಮತ್ತು ಸಾಂಸ್ಕೃತಿಕ ವೈಭವವನ್ನು ಉಳಿಸಿಕೊಂಡು ಸುಂದರ ನಗರವನ್ನಾಗಿ ರೂಪಿಸಲಾಗುವುದು ಎಂದು ಅವರು ಹೇಳಿದರು. ಮಾಧ್ಯಮಗಳು ಕೇವಲ ಟೀಕೆಗಾಗಿ ವಿಮರ್ಶೆ ಮಾಡಬಾರದು. ದೃಷ್ಠಿಕೋನವನ್ನು ಪರಿವರ್ತನೆ ಮಾಡಿ ಒಳ ಮನಸ್ಸಿನ ಆಧಾರದಲ್ಲಿ ಅವಲೋಕನ ಮಾಡಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ಮಂಗಳೂರನ್ನು ಸಮಗ್ರ ಅಭಿವೃದ್ಧಿ ಪಡಿಸಲಾಗುವುದೆಂದು ಹೇಳಿದರು .
ಕಾರ್ಯಕ್ರಮದಲ್ಲಿ ಕರ್ನಾಟಕ ಆಲೆಮಾರಿ ಹಾಗೂ ಅಲೆ ಆಲೆಮಾರಿ ಅಭಿವೃದ್ಧಿ ನಿಗಮ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ,ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೊಳಿಯಾರ್, ಶ್ರೀ ಅನಘ ರಿಫೈನರೀಸ್ ಪ್ರೈವೇಟ್ ಲಿಮಿಟೆಡ್ ಆಡಳಿತ ನಿರ್ದೇಶಕ ಸಾಂಬಶಿವ ರಾವ್,ಕುದುರೆಮುಖ ಕಬ್ಬಿಣ ಹಾಗೂ ಅದಿರು ಕಂಪನಿ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಎಂ ವಿ ಸುಬ್ಬರಾವ್ ,ಅದಾನಿ ಯು ಪಿ ಸಿ ಎಲ್ ಅಧ್ಯಕ್ಷ ಕಿಶೋರ್ ಆಳ್ವ, ಕೆನರಾ ಬ್ಯಾಂಕ್ ಮಹಾಪ್ರಬಂಧಕ ಯೋಗೀಶ್ ಆಚಾರ್ಯ ,ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಜಗನ್ನಾಥ್ ಶೆಟ್ಟಿ ಬಾಳ,ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ,ನ್ಯೂಸ್ ಟೈಮ್ ಕನ್ನಡ ನಿರ್ದೇಶಕ ವೆಂಕಟೇಶ್ ನಾಯಕ್,ಕಾರ್ಯ ನಿರ್ವಾಹಕ ಸಂಪಾದಕಿ ಅನುಷಾ ಭಟ್ ಉಪಸ್ಥಿತರಿದ್ದರು .
ಪತ್ರಕರ್ತ ಭಾಸ್ಕರ್ ರೈ ಕಟ್ಟಾ ಕಾರ್ಯಕ್ರಮ ನಿರೂಪಿಸಿದರು .ರೇಮಂಡ್ ಡಿ ಕುನ್ಹಾ ಹಾಗೂ ಡೊಂಬಯ್ಯ ಇಡ್ಕಿದು ಸನ್ಮಾನ ಪತ್ರ ವಾಚಿಸಿದರು.