ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ 46 ಗ್ರಾ.ಪಂನ 624 ಸದಸ್ಯ ಸ್ಥಾನಗಳಿಗೆ ಈಗಾಗಲೇ ಚುನಾವಣೆ ನಡೆದಿದ್ದು ಡಿ.30(ನಾಳೆ) ಮತ ಎಣಿಕೆ ಎಸ್.ಡಿ.ಎಂ ಕಾಲೇಜು ಉಜಿರೆಯಲ್ಲಿ ನಡೆಯಲಿದೆ. ಇದರ ಅಂಗವಾಗಿ ಇಂದು ಪ.ಪೂ ಕಾಲೇಜಿನ ಸಭಾಂಗಣದಲ್ಲಿ ಮತ ಎಣಿಕೆ ಅಧಿಕಾರಿ-ಸಿಬ್ಬಂದಿಗಳಿಗೆ ತರಬೇತಿ ನಡೆಯಿತು.
ಉಜಿರೆ ಎಸ್‌ಡಿಎಂ ಪದವಿಪೂರ್ವ ಕಾಲೇಜಿನ ಎರಡು ವಿಭಾಗಗಳಲ್ಲಿರುವ ರೂಮ್‌ನಲ್ಲಿ 1432 ಮಂದಿಯ ಭವಿಷ್ಯ ಭದ್ರವಾಗಿದೆ.
ಡಿ.30 ರಂದು ಬೆಳಿಗ್ಗೆ 7.30 ಕ್ಕೆ ತಹಶಿಲ್ದಾರ್, ಸಹಾಯಕ ಆಯುಕ್ತರು, ಪೋಲೀಸ್ ವೃತ್ತ ನಿರೀಕ್ಷಕರ ಸಮ್ಮುಖದಲ್ಲಿ ಸ್ಟ್ರಾಂಕ್ ರೂಮ್ ತೆರೆಯಲಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಆರಂಭಗೊಳ್ಳಲಿದ್ದು ಒಟ್ಟು ಮೂರು ಸುತ್ತಿನ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಎಲ್ಲಾ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಈಗಾಗಲೇ ಎಸ್‌ಡಿಎಂ ಪ.ಪೂ ಕಾಲೇಜಿನಲ್ಲಿ 25ಗ್ರಾ.ಪಂಗಳ ಮತ ಎಣಿಕೆಗಾಗಿ 9 ಕೊಠಡಿಯಲ್ಲಿ 36 ಮೇಜುಗಳನ್ನು ಸಿದ್ಧಪಡಿಸಲಾಗಿದೆ. ಪದವಿ ಕಾಲೇಜಿನಲ್ಲಿ 21ಗ್ರಾ.ಪಂಗಳ ಮತ ಎಣಿಕೆಗಾಗಿ 8ಕೊಠಡಿಯಲ್ಲಿ 32ಸೇರಿ ಒಟ್ಟು 68 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ.
ಒಟ್ಟು 204 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 7ತಂಡವನ್ನು ರಿಸರ್ವ್ ಮಾಡಲಾಗಿದೆ. ಏಕಕಾಲದಲ್ಲಿ 46 ಗ್ರಾ.ಪಂಗಳ ಮತ ಎಣಿಕೆ ನಡೆಯಲಿದೆ.
ಅಭ್ಯರ್ಥಿಗಳು ಅಥವಾ ಅವರು ಸೂಚಿಸಿದ ಎಣಿಕೆ ಏಜೆಂಟ್ ಅವರಿಗೆ ಹೊರತುಪಡಿಸಿ ಬೇರೆ ಯಾರಿಗೂ ಮತ ಎಣಿಕೆ ಸ್ಥಳಕ್ಕೆ ಪ್ರವೇಶಕ್ಕೆ ಅವಕಾಶವಿಲ್ಲ. ಮತ ಎಣಿಕೆ ಪೂರ್ವಭಾವಿಯಾಗಿ ಮತ ಎಣಿಕೆ ಸಿಬ್ಬಂದಿಗಳಿಗೆ ಮಂಗಳವಾರ ತರಬೇತಿ ಕಾರ್ಯಕ್ರಮ ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ನಡೆಯಿತು.
ತಹಶಿಲ್ದಾರ್ ಮಹೇಶ್ ಜಿ., ತಾ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್, ನೋಡೆಲ್ ಅಧಿಕಾರಿ ಧರಣೇಂದ್ರ ಕೆ ಜೈನ್, ಉಪಸ್ಥಿತರಿದ್ದರು.