ಬೆಳ್ತಂಗಡಿ: ಕೊರೊನಾ ಎರಡನೇ ಅಲೆಯ ಭಯದ ನಡುವೆ ಜನರಲ್ಲಿ ಪರಿವರ್ತನೆ ಮೂಡುವ ಕೆಲಸ ರಾಜು ಬಿ.ಹೆಚ್ ಅವರ ಈ ಪರಿವರ್ತನೆ ಕಿರುಚಿತ್ರ ದಿಂದ ಆಗಲಿ. ಹೆಸರೇ ಉತ್ತಮವಾಗಿರುವಂತೆ ಚಿತ್ರದ ಆಶಯವೂ ಚೆನ್ನಾಗಿದ್ದು ತಂಡದ ಆಶಯ ಈಡೇರಲಿ ಎಂದು ಸುದ್ದಿ ಬಿಡುಗಡೆ ಪ್ರಧಾನ ಸಂಪಾದಕ ಡಾ.ಯು.ಪಿ ಶಿವಾನಂದ ಹೇಳಿದರು.
ಕೊರೋನ ಸೋಂಕಿನ ಜನಜಾಗೃತಿಗಾಗಿ ಜಿ.ಕೆ ರಿಯಲ್ ಇಮೇಜಸ್ ಬೆಂಗಳೂರು ಇವರ ಸಹಕಾರದೊಂದಿಗೆ ರಾಜೀವ್ ಬಿ.ಹೆಚ್ ಬೆಳ್ತಂಗಡಿ ಇವರ ಪರಿಕಲ್ಪನೆ ಹಾಗೂ ನಿರ್ದೇಶನದಲ್ಲಿ ಹೊರತಂದ ಕನ್ನಡ ಕಿರುಚಿತ್ರ `ಪರಿವರ್ತನೆ’ ಇದನ್ನು ಸುದ್ದಿ ಮೀಡಿಯಾ ಸ್ಟುಡಿಯೋ ದಲ್ಲಿ ಡಿ.24 ರಂದು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಅತಿಥಿಗಳಾಗಿದ್ದ ಸುದ್ದಿ ಪತ್ರಿಕೆಯ ವ್ಯವಸ್ಥಾಪಕ ಮಂಜುನಾಥ ರೈ ಮಾತನಾಡಿ, ರಾಜು ಬಿ.ಹೆಚ್ ಅವರು ಚಿಕ್ಕಂದಿನಿಂದಲೇ ಪ್ರತಿಭೆ ಮೈಗೂಡಿಸಿಕೊಂಡವರು. ಅವರ ಇಂತಹಾ ಸಾಧನೆ ಮುಂದುವರಿಯಲಿ ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞಿ ಮಾತನಾಡಿ, ಪರಿವರ್ತನೆ ಚಿತ್ರದ ಬಿಡುಗಡೆಗೊಳಿಸಿದ ಡಾ. ಯು.ಪಿ ಶಿವಾನಂದ ಅವರು ಗ್ರಾಮೀಣ ಪತ್ರಿಕೋದ್ಯಮದಲ್ಲಿ ಪರಿವರ್ತನೆ ತಂದು ದಂತಕತೆ ಎನಿಸಿದವರು. ಕೊರೊನಾ ನಮ್ಮ ಜೀವನ ಶೈಲಿಯಲ್ಲೂ ಪರಿವರ್ತನೆ ತಂದಿದೆ. ವೈದ್ಯರ ಸಲಹೆಗೆ ಅಪಹಾಸ್ಯ ಮಾಡಿದವರು ಕೋವಿಡ್ ಸಮಸ್ಯೆಗೆ ಒಳಗಾಗಿದ್ದಾರೆ. ಜಾಗರೂಕತೆ ಅಗತ್ಯ ಎಂದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಸಿಸ್ಟರ್ ಮಾತನಾಡಿ, ಕೋವಿಡ್ ಕೇವಲ ಹೆಸರಾಗಿ ಮಾತ್ರ ನಮ್ಮ ನಡುವೆ ಉಳಿದು ಅದರ ಪರಿಣಾಮ ಅಳಿದುಹೋಗಲಿ ಎಂದರು.
ತಾ. ಆರೋಗ್ಯಾಧಿಕಾರಿ ಕಚೇರಿಯ ಕಾರ್ಯಕ್ರಮ ನಿರ್ವಾಹಕ ಅಜಯ್ ಕಲ್ಲೆಗ ಮಾತನಾಡಿ, ಕೊರೊನಾ ದಾಳಿಯ ಬಗ್ಗೆ ಇನ್ನಷ್ಟು ಜಾಗೃತಿ ಮೂಡಲು ಈ ಕಿರುಚಿತ್ರ ಕಾರಣವಾಗಲಿ ಎಂದರು.
ಚಿತ್ರದ ನಿರ್ದೇಶಕ ಕಲಾವಿದ ಬಿ.ಹೆಚ್ ರಾಜು ಪ್ರಸ್ತಾವಿಕವಾಗಿ ಮಾತನಾಡಿ, ಈ ಚಿತ್ರವನ್ನು ಜಿ.ಕೆ ರೀಯಲ್ ಇಮೇಜಸ್ ಬೆಂಗಳೂರು ನಿರ್ಮಾಣ ಮಾಡಿದ್ದು, ಕಲಾವಿದರಾದ ಪ್ರಕಾಶ್ ಸವಣಾಲು, ಮಾ. ಪ್ರಣೀತ್ ರಾಜ್, ದೃತಿ ಬೆಳ್ತಂಗಡಿ, ಮಾ. ಶ್ರವಣ್ ಜಯಂತ್ ಬಂಗಾಡಿ, ಸುರೇಂದ್ರ ಸಂಜಯನಗರ ಅಭಿನಯಿಸಿದ್ದಾರೆ. ಮಿತ್ರ ಜಿ.ಕೃಷ್ಣ ಬೆಳ್ತಂಗಡಿ
ಛಾಯಾಗ್ರಹಣ ಮಾಡಿದ್ದು, ಆರ್ಯನ್ ಮುಕ್ತರಾಜು ಬೆಂಗಳೂರು ಸಂಕಲನ, ಪ್ರಭಾಕರ ಪ್ರಭು ಚಿತ್ರಕಥೆ ಸಂಭಾಷಣೆಗೆ ಸಹಕರಿಸಿದ್ದಾರೆ. ಬೆಂಗಳೂರಿನ ರೀಲ್ಸ್ ಬರಗೂರು ಸ್ಟುಡಿಯೋದಲ್ಲಿ ಧ್ವನಿ ಮುದ್ರಣ ಮಾಡಲಾಗಿದೆ ಎಂದು ತಿಳಿಸಿದರು.
ಸಂಧ್ಯಾಶ್ರೀ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.