ಬೆಳ್ತಂಗಡಿ: ಚಾರ್ಮಾಡಿ ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ವೇಳೆ ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಾಟಕ್ಕೆ ಪ್ರಯತ್ನಪಟ್ಟ ಪ್ರಕರಣವೊಂದನ್ನು ಧರ್ಮಸ್ಥಳ ಠಾಣಾ ಪೊಲೀಸರು ಭೇದಿಸಿದ್ದಾರೆ.
ಪ್ರಕರಣದ ಆರೋಪಿ ಲಾಯಿಲ ಗ್ರಾಮದ ಕಾಶಿಬೆಟ್ಟು ಫಾತಿಮಾ ಮಹಲ್ ನಿವಾಸಿ ಮುಹಮ್ಮದ್ ನಬಾನ್ (18ವ.) ಎಂಬಾತನನ್ನು ಬಂಧಿಸಿದ್ದಾರೆ.
ಆತನಿಂದ 450 ಗ್ರಾ. ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಕೃತ್ಯಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿ ಉಜಿರೆ ಗ್ರಾಮದ ಗಾಂಧಿನಗರ ನಿವಾಸಿ ಅಬ್ದುಲ್ ನಾಜಿರ್ (22ವ.) ಎಂಬಾತನು ತಲೆಮರೆಸಿಕೊಂಡಿದ್ದಾನೆ.
ಧರ್ಮಸ್ಥಳ ಠಾಣೆ ಎಸ್.ಐ ಪವನ್ ನಾಯಕ್ ಹಾಗೂ ಸಿಬಂದಿಗಳು ಚಾರ್ಮಾಡಿ ಚೆಕ್‌ಪೋಸ್ಟ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಉಜಿರೆ ಕಡೆಯಿಂದ ನೋಂದಣಿಯಾಗದ ಮೋಟಾರ್ ಸೈಕಲ್ ನಲ್ಲಿ ಪ್ರಯಾಣಿಸುತ್ತಿದ್ದ ಯುವಕನನ್ನು ತಡೆದು ವಿಚಾರಣೆ ನಡೆಸಿದಾಗ ಇಡೀ ಪ್ರಕರಣ ಬೆಳಕಿಗೆ ಬಂದಿದೆ.
ಗಾಂಜಾ ಗಿಡಗಳ ಎಲೆ, ಮೊಗ್ಗುಗಳು, ಬೀಜಗಳು ಹೀಗೆ ಬಂಧಿತನಿಂದ ವಶಪಡಿಸಿಕೊಂಡ ಸೊತ್ತಿನ ಅಂದಾಜು ಮೌಲ್ಯ 10 ಸಾವಿರ ರೂ. ಎಂದೂ, ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನದ ಅಂದಾಜು ಮೌಲ್ಯ 50 ಸಾವಿರ ರೂ. ಎಂದು ಇಲಾಖೆ ದಾಖಲಿಸಿಕೊಂಡಿದೆ.
ಈಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ತಲೆಮರೆಸಿಕೊಂಡಿರುವ ಇನ್ನೋರ್ವ ಆರೋಪಿಯನ್ನು ಬಂಧಿಸಲು ಅಗತ್ಯ ಕ್ರಮಗಳನ್ನು ಪೊಲೀಸ್ ಇಲಾಖೆ ಜರುಗಿಸಿದೆ