Posts

ಬೆಳ್ತಂಗಡಿಯಲ್ಲಿ ಪಿಪಿಇ ಕಿಟ್ ಧರಿಸಿ ಮತಚಲಾಯಿಸಿದ 14 ಮಂದಿ ಕೋವಿಡ್ ದೃಢೀಕೃತರು

1 min read

ಬೆಳ್ತಂಗಡಿ; ಬೆಳ್ತಂಗಡಿ ತಾಲೂಕಿನ 46 ಗ್ರಾಮ‌ ಪಂಚಾಯತ್ ಗಳಿಗೆ ರವಿವಾರ ಏಕಕಾಲದಲ್ಲಿ ಚುನಾವಣೆ ನಡೆದಿದ್ದು ಎಲ್ಲ ಮತದಾರರ ಭಿವಿಷ್ಯ ಅಡಗಿದ ಮತಪಟ್ಟಿಗೆ ಈಗ ಉಜಿರೆ ಎಸ್.ಡಿ.ಎಂ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳ ಸ್ಟ್ರಾಂಗ್ ರೂಮ್ ‌ನಲ್ಲಿ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಇಡಲಾಗಿದೆ. ಇದರಲ್ಲಿ ತಾಲೂಕಿನಲ್ಲಿ‌ ಚುನಾವಣೆ ನಡೆದ 79 ಗ್ರಾಮಗಳ  624 ಮಂದಿಯ ಭವಿಷ್ಯ ಅಡಗಿದೆ.

ಈ ಮಧ್ಯೆ ತಾಲೂಕಿನಲ್ಲಿರುವ 37 ಮಂದಿ ಕೋವಿಡ್ ದೃಢೀಕೃತರ ಪೈಕಿ ರವಿವಾರ 14 ಮಂದಿ, ಆರೋಗ್ಯ ಇಲಾಖೆ ನೀಡಿದ ಪಿಪಿಇ ಕಿಟ್ ಧರಿಸಿ ಮತಕೇಂದ್ರಕ್ಕೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರೆ ಇನ್ನುಳಿದವರು ಬೇರೆ ಬೇರೆ ಕಾರಣ ನೀಡಿ ಜಾರಿಕೊಂಡಿದ್ದಾರೆ.

ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ ನೆರಿಯದಿಂದ 2 ಮಂದಿ, ಮುಂಡಾಜೆಯಿಂದ 2, ಪಡಂಗಡಿ 4, ಉಜಿರೆ 2, ನಾರಾವಿ 2,  ಮತ್ತು ಕಣಿಯೂರಿನಿಂದ 3 ಮಂದಿ ಮತಕೇಂದ್ರಕ್ಕೆ ಬಂದು ತಮ್ಮ ಹಕ್ಕು ಚಲಾಯಿಸಿದರು.

ರಾಜ್ಯ ಚುನಾವಣಾ ಆಯೋಗ ಸೂಚಿಸಿದಂತೆ ಕೋವಿಡ್ ದೃಢೀಕೃತರು ಇದ್ದಲ್ಲಿ ಅವರಿಗೆ ಮತದಾನ ದಿನದ ಕೊನೆಯ ಒಂದು ಗಂಟೆ ಎಂದರೆ 4 ರಿಂದ 5 ಗಂಟೆಯ ಮಧ್ಯೆ ಅವರವರ ಮತಕೇಂದ್ರಕ್ಕೇ ಆಗಮಿಸಿ ಮತ ನೀಡುವ ಅವಕಾಶ ಕಲ್ಪಿಸಲಾಗಿತ್ತು. ಅಂತೆಯೇ ಆರೋಗ್ಯ ಇಲಾಖೆ ಅವರಿಗೆ ಮೊದಲೇ ಪಿಪಿಇ ಕಿಟ್ ವಿತರಿಸಿ ಸೂಕ್ತ ಮಾರ್ಗದರ್ಶನ ನೀಡಿತ್ತು. ಅದನ್ನು ಬೆಳ್ತಂಗಡಿ ತಾಲೂಕಿನಲ್ಲಿ 14 ಮಂದಿ ಸದ್ಬಳಸಿಕೊಂಡಿದ್ದು, ಉಳಿದವರು ವ್ಯವಸ್ಥೆ ಒದಗಿಸಿಕೊಟ್ಟರೂ ಅದನ್ನು ಬಳಸಿಕೊಂಡಿಲ್ಲ‌ ಎಂಬುದು ವಿಷಾದಕರ ಸಂಗತಿ.

ಮತಕೇಂದ್ರಕ್ಕೆ ಅವರು ಬರುವಲ್ಲಿ ಇಚ್ಚಿತರಾಗಿದ್ದರೆ ಅವರಿಗೆ ಬೇಕಾದ ಪ್ರಯಾಣ ವ್ಯವಸ್ಥೆ ಅವರು ಬಯಸಿದರೆ ಅವರನ್ನು ಸರಕಾರಿ ಆಂಬುಲೆನ್ಸ್‌ ನಲ್ಲೇ  ಕರೆತರುವ ಜವಾಬ್ದಾರಿ ಆರೋಗ್ಯ ಇಲಾಖೆಗೆ ನೀಡಲಾಗಿತ್ತು.  ಅಥವಾ ಅವರೇ ಖಾಸಗಿ ವಾಹನದಲ್ಲಿ ಬರುವುದಾದರೆ ಅದಕ್ಕೂ ಅವಕಾಶ ಕಲ್ಪಿಸಲಾಗಿತ್ತು. ಬೆಳ್ತಂಗಡಿಯ ಮಟ್ಟಿಗೆ ಎಲ್ಲ 14 ಮಂದಿ ಕೂಡ ತಮ್ಮ ವತಿಯಿಂದಲೇ  ವಾಹನದಲ್ಲಿ ಆಗಮಿಸಿ ಮತ ಚಲಾಯಿಸಿದ್ದಾರೆ.

ಮತಹಾಕದೇ ಇರುವವರಿಗೆ ನೀಡಲಾದ ಕಿಟ್ ಗಳು ಸರಕಾರಿ ಸೊತ್ತಾಗಿದ್ದು, ಅವರಿಗೆ ಅದನ್ನು ಸರಬರಾಜು ಮಾಡಿದ ಆಯಾಯಾ ತಾಲೂಕು ಆರೋಗ್ಯಾಧಿಕಾರಿಗಳು ಅವುಗಳನ್ನು ಮರಳಿಪಡೆದು ಜಮೆ ಮಾಡಬೇಕಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಅಲ್ಲಿನ ಟಿಹೆಚ್‌ಒ ಡಾ‌.‌ಕಲಾಮಧು ಶೆಟ್ಟಿ ಅವರು ಇದಕ್ಕೆ ಜವಾಬ್ದಾರರಾಗುತ್ತಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ಬಾಯಾರಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 31 ಮಂದಿಯಿಂದ ಪಿಪಿಇ ಕಿಟ್ ಧರಿಸಿ ಮತದಾನ; 

ಜಿಲ್ಲೆಯಲ್ಲಿ ಮೊದಲ‌ ಹಂತದ ಚುನಾವಣೆಯಲ್ಲಿ ಬಂಟ್ವಾಳದಲ್ಲಿ 27 ಮಂದಿ‌ ಪಿಪಿಇ ಕಿಟ್ ಧರಿಸಿ ಮತಹಾಕಿದ್ದರು. ಎರಡನೇ ಹಂತದಲ್ಲಿ ರವಿವಾರ ಬೆಳ್ತಂಗಡಿ ತಾಲೂಕಿನ 6 ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 14 ಮಂದಿ ಹಕ್ಕು ಚಲಾಯಿಸಿದ್ದಾರೆ.

ಕಡಬ ತಾಲೂಕಿನಲ್ಲಿ 12 ಮಂದಿ, ಪುತ್ತೂರಿನಲ್ಲಿ ಒಬ್ಬರು ಮತ ಹಾಕಿದ್ದಾರೆ. ಸುಳ್ಯದಲ್ಲಿ ಒಬ್ಬರು ಮಾತ್ರ ದೃಢೀಕೃತರು ಇದ್ದು ಅವರು ಕೊನೇ ಗಳಿಗೆಯಲ್ಲಿ ಕಿಟ್ ಧರಿಸಿ ಹೋಗಲು ಭಯಪಟ್ಟು ನಿರಾಕರಿಸಿದ್ದರಿಂದ ಅವರಿಗೆ ಹಕ್ಕುಚಲಾಯಿಸಲು ಅಸಾಧ್ಯವಾಗಿದೆ.

ಡಾ.‌ರಾಮಕೃಷ್ಣ ಬಾಯಾರಿ(ಡಿಹೆಚ್‌ಒ- ಜಿಲ್ಲಾ ಆರೋಗ್ಯಾಧಿಕಾರಿ)

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

You may like these posts

Post a Comment