ಧರ್ಮಸ್ಥಳ ಠಾಣೆಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್‌ಪಿ
ಬೆಳ್ತಂಗಡಿ; ಶಾಸಕ ಪೂಂಜಾ ಅವರ ಮನೆಗೆ ಅವರನ್ನು ನಿಯಮಾನುಸಾರ ವಿಚಾರಣೆಗೆ ಅಂತ ಕರೆ ತರಲು ನಾವು ಮೂರು ಮಂದಿ ಪೊಲೀಸರನ್ನು ಮಾತ್ರ ಕಳಿಸಿದ್ವಿ. ಆದರೆ ಅಲ್ಲಿ ಇದ್ದಕ್ಕಿದ್ದಂತೆ ಜನ ಜಮಾಯಿಸಲು ಆರಂಭಿಸಿದ್ದರಿಂದ ಕಾನೂನು ಸುವ್ಯವಸ್ಥೆಗೆ ದಕ್ಕೆ ಬಾರದಿರಲಿ ಎಂದು ಹೆಚ್ಚುವರಿ ಪೊಲೀಸರನ್ನು ಕಳಿಸಿಕೊಟ್ಟಿದ್ದೇವೆ ಎಂದು ಎಸ್.ಪಿ ರಿಷ್ಯಂತ್ ಅವರು ಸ್ಪಷ್ಟನೆ ನೀಡಿದ್ದಾರೆ.
ಧರ್ಮಸ್ಥಳ ಠಾಣೆಯಲ್ಲಿ ಸೋಮವಾರ ಮಾದ್ಯಮ ದವರನ್ನುದ್ದೇಶಿಸಿ ಮಾತನಾಡಿದ ಅವರು, ಶಾಸಕರ ಮನೆಯಲ್ಲಿ ಆಗಿರುವ ಘಟನೆ ಹಾಗೂ ಆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಆಗಿರುವ ಚರ್ಚೆಗಳಿಗೆ ಉತ್ತರ ನೀಡಿದರು.
ಸ್ಥಳದಲ್ಲಿದ್ದ ವಕೀಲರುಗಳು ಪೊಲೀಸರಿಗೆ ಬುದ್ದಿ ಕಲಿಸಿದರು ಎಂದೂ ಕೆಲವೆಡೆ ಬಂದಿರುವುದನ್ನು ನೋಡಿದ್ದು, ಸ್ಥಳದಲ್ಲಿದ್ದ ಜನಪ್ರತಿನಿಧಿಗಳು ನಮ್ಮಲ್ಲಿ ವಿನಂತಿಸಿಕೊಂಡಂತೆ , ಶಾಸಕರ ಮನೆಯ ಕಿರಿದಾದ ದಾರಿಯಲ್ಲಿ ಈಗಾಗಲೇ ಜನ ಜಮಾಯಿಸಿದ್ದಾರೆ. ಅದರ ಮಧ್ಯೆ ಶಾಸಕರನ್ನು ಠಾಣೆಗೆ ಕರೆದುಕೊಂಡು ಬರಲು ಕಷ್ಟ ಸಾದ್ಯವಾಗಬಹುದು. ಆದ್ದರಿಂದ ನಾವು ನಮ್ಮ ಕಾರ್ಯಕರ್ತರನ್ನು ವಾಪಾಸು ಮರಳಲು ಸೂಚಿಸುತ್ತೇವೆ. ನೀವೂ ನಿಮ್ಮ ಪೊಲೀಸ್ ಸಿಬ್ಬಂದಿಗಳನ್ನು ವಾಪಾಸು ಕರೆಸಿಕೊಳ್ಳಿ ಎಂದಿದ್ದಕ್ಕೆ ಆ ರೀತಿ ಕ್ರಮ ಕೈಗೊಂಡಿದ್ದೇವೆ.
ಆ ಬಳಿಕ ಶಾಸಕರನ್ನು ನಾವು ಠಾಣೆಗೆ ವಿಚಾರಣೆಗೆ ಕರೆತಂದು ಜಾಮೀನು ನೀಡಿ ಕಳಿಸಿಕೊಟ್ಟಿದ್ದೇವೆ ಎಂದು ಎಸ್.ಪಿ ಅವರು ವಿವರಣೆ ನೀಡಿದರು.
ಮೊದಲ ಕೇಸಿನಲ್ಲಿ ಶಾಸಕರಿಗೆ ನಿಯಮಾನುಸಾರ ನೋಟೀಸು ನೀಡಿದ್ದೇವೆ. ಎರಡನೇ ಕೇಸಿನಲ್ಲಿ ಠಾಣೆಯಲ್ಲೇ ಜಾಮೀನು ನೀಡಿದ್ದೇವೆ.
ಮೊದಲ ಕೇಸಿನ ನೋಟೀಸಿನ ನಿಯಮ ಉಲ್ಲಂಘನೆ ಮಾಡಿದರೆ ಬಂಧಿಸಿ ಕೋರ್ಟಿಗೆ ಹಾಜರುಪಡಿಸಬೇಕು ಎಂದಿದೆ. ಅದನ್ನು ಬೇಕಾದರೂ ನಾವು ಮಾಡುತ್ತೇವೆ ಎಂದರು.
ಕಾನೂನಿನಡಿ ಎಲ್ಲರೂ ಸಮಾನರು. ಮೂರು ಜನ ಪೊಲೀಸರು ಹೋದರೆ ಸಾವಿರ ಜನ ಸೇರಿಸಿ ನೋಟೀಸೇ ನೀಡಬಾರದು ಅಂತ, ಎರಡು ಸಾವಿರ ಜನ ಸೇರಿಸಿದರೆ ವಿಚಾರಣೆನೇ ಮಾಡಬಾರದು ಅಂತ,
ಐದು ಸಾವಿರ ಜನ ಸೇರಿಸಿ ಕೇಸೇ ಮಾಡಬಾರದು ಅಂತಾಗುತ್ತದೆ. ಜನ ಸೇರಿದ ಆಧಾರದ ಮೇಲೆ ಕೇಸು ಬದಲಾಗಲ್ಲ. ತಪ್ಪು ಮಾಡಿದರೆ ಕೇಸು ಆಗಿಯೇ ಆಗುತ್ತದೆ. ಕಾನೂನು ಎಂದರೆ ಲಕ್ಷ ಜನ ಸೇರಿಸಿದ್ರೂ ಅದೇ ಕಾನೂನು ಎಂದರು.
ಅಕ್ರಮ ಗಣಿಗಾರಿಕೆ ಆಗಿರುವ ಜಾಗ ಸರಕಾರಿನೋ ಖಾಸಗೀನೋ ಎಂದು ವಿಚಾರಣೆ ನಡೆಯುತ್ತಿದೆ. ಒಂದು ವೇಳೆ ಖಾಸಗಿಯಾಗಿದ್ದರೆ ಅವರೂ ಬಂಧಿಸಲ್ಪಡುತ್ತಾರೆ. ತಹಶಿಲ್ದಾರ್ ಅವರು ದಾಳಿ ಮಾಡಿದಾಗ ಅಲ್ಲಿನ ಕಾರ್ಮಿಕರು ಯಾರು ಕ್ವಾರಿ ನಡೆಸುತ್ತಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅದರ ಆಧಾರದಲ್ಲೇ ನಮಗೆ ತಹಶಿಲ್ದಾರ್ ಕಡೆಯಿಂದ ದೂರು ಬಂದಿದೆ. ಆ ಹಿನ್ನೆಲೆಯಲ್ಲಿ ನಾವು ಒಬ್ಬ ಆರೋಪಿಯನ್ನು ಬಂಧಿಸಿದ್ದೇವೆ. ಮತ್ತೋರ್ವರ ಬಗ್ಗೆ ಮಾಹಿತಿ ನೀಡಲು, ಅವರು ತಪ್ಪಿಸಿಕೊಳ್ಳುವ ಸಾಧ್ಯತೆ ಇರೂದರಿಂದ ಅದನ್ನು ಬಹಿರಂಗಪಡಿಸುವಂತಿಲ್ಲ ಎಂದರು.