ಬೆಳ್ತಂಗಡಿ; ನನ್ನ ವಿವಾಹವು ಗೋಳಿಯಂಗಡಿ ನಿವಾಸಿ, ಧರ್ಮಗುರು ಸಿರಾಜುದ್ದೀನ್ ಝುಹುರಿ ಎಂಬವರ ಜೊತೆ ತಂದೆ-ತಾಯಿ, ಹಿರಿಯರ ಸಮ್ಮುಖದಲ್ಲೇ ನಡೆದಿದ್ದು ನೆಮ್ಮದಿಯ ದಾಂಪತ್ಯ ಜೀವನ ನಡೆಸಿಕೊಂಡು ಬರುತ್ತಿದ್ದೇವೆ. ಅದಾಗ್ಯೂ ನನ್ನ ಪತಿಯವರು ನಡೆಸುತ್ತಿರುವ ಮಜ್‌ಮಉ ಸ್ಸಆದ ಸಂಸ್ಥೆಗೆ ಧಕ್ಕೆ ತಂದು ಮುಚ್ಚಿಸುವ ಹುನ್ನಾರದಿಂದ ಅಥವಾ ನಮ್ಮ ಏಳಿಗೆ ಸಹಿಸದೆ ಅಸೂಯೆಯಿಂದ ನನ್ನ ಹಾಗೂ ನನ್ನ ಪತಿಯ ಫೋಟೋ ಬಳಸಿ ಇಲ್ಲಸಲ್ಲದ ಆಪಾದನೆ ಮಾಡಿ ಪಾಕ್ಷಿಕ ಪತ್ರಿಕೆಯಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ವರದಿ ಬಿತ್ತರಿಸಿದ್ದು, ಅದರ ವಿರುದ್ಧ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದೇನೆ ಎಂದು ಸಿರಾಜುದ್ದೀನ್ ಝುಹುರಿ ಅವರ ಧರ್ಮಪತ್ನಿ ಸಂಸಿಯಾ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ನ.2 ರಂದು ಬೆಳ್ತಂಗಡಿ ಸುವರ್ಣ ಆರ್ಕೆಡ್‌ನಲ್ಲಿ ಕರೆಯಲಾಗಿದ್ದ ಮಾಧ್ಯಮ ಗೋಷ್ಠಿಯಲ್ಲಿ ಅವರು ವಿವರಣೆ ನೀಡಿದರು.
ನಾನು ಬೆಳ್ತಂಗಡಿಯ ಖಾಸಾಗಿ ಕಾಲೇಜಿನಲ್ಲಿ ಪದವಿ ಓದುತ್ತಿದ್ದೇನೆ. ನಾನು ಮತ್ತು ನನ್ನ ಪತಿ ಅನ್ಯೋನ್ಯವಾಗಿ ಜೀವಿಸುತ್ತಿದ್ದೇವೆ. ಆದರೆ ನನ್ನ ಫೋಟೊವನ್ನು ಪತ್ರಿಕೆಯಲ್ಲಿ ಬಳಸಿ ಆಶ್ಲೀಲವಾಗಿ ಬರೆದಿರುವುದಲ್ಲದೆ ನನ್ನ ಪತಿಯನ್ನು ಕಾಮುಕ ಎಂಬುದಾಗಿ ನಿಂದಿಸಿರುತ್ತಾರೆ. ನನ್ನ ಪತಿ ನನ್ನನ್ನು ರಾತ್ರೋರಾತ್ರಿ ಕರೆದೊಯ್ದು ಮದುವೆಯಾಗಿರುತ್ತಾನೆ ಎಂಬುದಾಗಿ ಸುಳ್ಳು ವಾರ್ತೆಯನ್ನು ಬಿತ್ತರಿಸಿರುತ್ತಾರೆ. ಈ ಪತ್ರಿಕೆಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಇದರಿಂದಾಗಿ ನನ್ನ ಮಾನಕ್ಕೆ ಹಾನಿಯಾಗಿರುತ್ತದೆ. ನಾನು ಒಬ್ಬಳು ಮಹಿಳೆ ಎನ್ನುವುದನ್ನು ಮರೆತು ನನ್ನ ಘನತೆಗೆ ದಕ್ಕೆ ತಂದಿರುತ್ತಾರೆ. ವಿದ್ಯಾರ್ಥಿನಿಯಾದ ನನ್ನ ಘನತೆಗೆ ಕುಂದುಂಟಾಗುವ ರೀತಿಯಲ್ಲಿ ಪೋಟೊವನ್ನು ಬಳಸಿ ಆಶ್ಲೀಲ ಬರಹಗಳನ್ನು ಬರೆದು ಪ್ರಕಟಿಸಿರುವುದರಿಂದ ನನ್ನ ವೈಯುಕ್ತಿಕ ಬದುಕಿಗೆ ಇದರಿಂದ ಘಾಸಿಯಾಗಿರುತ್ತದೆ.
ಇದಲ್ಲದೆ ನನ್ನ ಸ್ನೇಹಿತರು, ಕುಟುಬಂದವರು ಈ ಪತ್ರಿಕೆಯಲ್ಲಿ ಪ್ರಕಟವಾದ ಆಶ್ಲೀಲ ಬರಹಗಳನ್ನು ನೋಡಿ ನನಗೆ ಕರೆ ಮಾಡಿ ಪದೇ ಪದೇ ವಿಚಾರಿಸುತ್ತಿರುವುದರಿಂದ ನನಗೆ ಮಾನಸಿಕ ನೆಮ್ಮದಿ ಇಲ್ಲದಂತಾಗಿರುತ್ತದೆ. ಸಮಾಜದಲ್ಲಿ ಜನ ನನ್ನನ್ನು ಸಂಶಯದ ದೃಷ್ಠಿಯಿಂದ ನೋಡುವಂತಾಗಿದ್ದು ನಾನು ತಲೆ ಎತ್ತಿ ಬದುಕಲಾರದ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ.
ಆದುದರಿಂದ ಇಂತಹಾ ವರದಿ ಪ್ರಕಟಿಸುವ ಮೂಲಕ ನನ್ನ ಘನತೆಗೆ ದಕ್ಕೆ ತಂದ ಪತ್ರಿಕೆ, ಅದರ ಸಂಪಾದಕರು, ಮುದ್ರಕರ ವಿರುದ್ಧ ಹಾಗೂ ಜಾಲತಾಣದಲ್ಲಿ ಅದನ್ನು ಹಂಚುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ನನಗೆ ನ್ಯಾಯ ದೊರಕಿಸಿಕೊಡಬೇಕು ಎಂದು ನಾನು ಈಗಾಗಲೇ ಎಸ್‌ಪಿ ಅವರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರ ಪತಿ ಸಿರಾಜುದ್ದೀನ್ ಝುಹುರಿ, ನಾನು ಒಂದೂವರೆ ವರ್ಷದಿಂದ ಧಾರ್ಮಿಕ ಲೌಖಿಕ ಸಮನ್ವಯ ಶಿಕ್ಷಣ ನೀಡುವ ಸಂಸ್ಥೆಯೊಂದನ್ನು ನಡೆಸುತ್ತಿದ್ದು ಅದರಲ್ಲಿ15 ರಿಂದ 20 ಮಕ್ಕಳು ಕಲಿಯುತ್ತಿದ್ದಾರೆ. ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅದರ ಏಳಿಗೆ ಸಹಿಸದೆ ಈ ರೀತಿ ಅಪಪ್ರಚಾರ ಆರಂಭಿಸಿದ್ದಾರೆ. ಅದಲ್ಲದೆ ಇಸ್ಲಾಂ ನೀಡಿದ ಧಾರ್ಮಿಕ ಅವಕಾಶದ ಆಧಾರದಲ್ಲಿ ನಾನು ವಿವಾಹವಾಗಿದ್ದು ಅತ್ಯಂತ ಪ್ರೀತಿ ಮತ್ತು ಸಹಬಾಳ್ವೆ ಯಿಂದ ನಡೆಯುತ್ತಿದ್ದೇವೆ. ಈ ಮಧ್ಯೆ ನಮ್ಮ ಕುಟುಂಬವನ್ನು ಒಡೆಯುವ ಹುನ್ನಾರ ನಡೆಸಿ ಈ ರೀತಿ ಅಪಪ್ರಚಾರದ ಹಾದಿ ಹಿಡಿಯಲಾಗಿದೆ. ಒಂದು ಹೆಣ್ಣಿನ ಗೌರವಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಸುಳ್ಳಾಪಾದನೆ ಮಾಡಿದ್ದಾರೆ. ಇದರಲ್ಲಿ ಹೈದರ್ ಹಾಜಿ ಮತ್ತು ಅಶ್ರಫ್ ಕಲ್ಲೇರಿ ಎಂಬವರ ಮೇಲೆ ನಮಗೆ ಬಲವಾದ ಸಂದೇಹವಿದ್ದು ಅವರ ಹೆಸರು ನಮೂದಿಸಿಯೇ ಪೊಲೀಸ್ ದೂರು ನೀಡಿದ್ದೇವೆ ಎಂದು ವಿವರಿಸಿದರು.
ದಂಪತಿಯನ್ನು ಕೊಲೆ ನಡೆಸಲು ಪ್ರಯತ್ನಿಸಿರುವ ಬಗ್ಗೆಯೂ ಎಸ್.ಪಿ ಗೆ ಪತ್ಯೇಕ ದೂರು
ನಾನು ಮತ್ತು ನನ್ನ ಪತಿ ಸಿರಾಜುದ್ದೀನ್ ಝುಹುರಿ ಅವರು ಪರಸ್ಪರ ಅನ್ಯೋನ್ಯತೆಯಿಂದ ಜೀವಿಸುತ್ತಿದ್ದು ಈ ಮಧ್ಯೆ
ನಮ್ಮ ದಾಂಪತ್ಯ ಜೀವನದಲ್ಲಿ ಕಳಂಕ ತಂದು ನಮ್ಮಿಬ್ಬರನ್ನು ವಿಚ್ಛೇದನ ಮಾಡಲು ಪ್ರಯತ್ನಿಸುವ ಮೂಲಕ ನನ್ನ ಪೋಷಕರಿಗೆ 10 ಲಕ್ಷ ರೂಪಾಯಿ ಪರಿಹಾರ ತೆಗೆದು ಕೊಡುತ್ತೇವೆ ಎಂದು ನಂಬಿಸಿ ನನ್ನ ಇಚ್ಛೆಗೆ ವಿರುದ್ಧವಾಗಿ ನಿರ್ಬಂಧದ ವಿಚ್ಛೇದನಕ್ಕೆ ಪ್ರಯತ್ನಿಸುತ್ತಿರುವ ಅಶ್ರಫ್ ಕಲ್ಲೇರಿ ಮತ್ತು ಹೈದರ್ ಹಾಜಿ ಮತ್ತು ಇನ್ನಿತರ ಮುಖಂಡರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಸಿಯಾ ಎಸ್.ಪಿ ಅವರಿಗೆ ಪ್ರತ್ಯೇಕ ದೂರು ನೀಡಿದ್ದಾಗಿ ಪತ್ರಿಕಾಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿದರು.
ಜೊತೆಗೆ ನನಗೆ ಮತ್ತು ನನ್ನ ಪತಿಗೆ ಹೈದರ್ ಹಾಜಿಯೊಂದಿಗೆ ಒಂದು ಅಪರಿಚತರ ವ್ಯಕ್ತಿ ಕೊಲೆ ಸಂಚು ಹಾಕುವುದನ್ನು ಫೋನ್ ಕರೆಯ ಮೂಲಕ ಮಾತನಾಡಿರುವುದು ನನ್ನ ಗಮನಕ್ಕೆ ಬಂದಿದೆ. ಇದರ ಹಿಂದೆ ಇರುವ ಶಕ್ತಿಗಳ ಬಗ್ಗೆ ಸೂಕ್ತ ತನಿಖೆ ನಡೆಸಬೇಕಾಗಿದೆ.
ಈ ಎಲ್ಲಾ ಬೆಳವಣಿಗೆಯಿಂದ ನನ್ನ ಮತ್ತು ನನ್ನ ಪತಿಯ ಪ್ರಾಣಕ್ಕೆ ಅಪಾಯ ಇದೆ. ಒಂದು ವೇಳೆ ಜೀವಾಪಾಯವಾದರೆ ಅದಕ್ಕೆ ಈ ಮೇಲಿನವರೇ ಕಾರಣಕರ್ತರಾಗಿರುತ್ತಾರೆ ಎಂದು ಎಸ್.ಪಿ ಗೆ ತಿಳಿಸಿರುತ್ತೇವೆ ಎಂದಿದ್ದಾರೆ.