ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲಾ ಬಹುಜನ ಸಮಾಜ ಪಾರ್ಟಿಯ ಅಧ್ಯಕ್ಷರೂ , ಸಾಮಾಜಿಕ ಚಳುವಳಿಗಳಲ್ಲಿ ಮುಂಚೂಣಿ ನಾಯಕರಾಗಿದ್ದ ದಾಸಪ್ಪ ಎಡಪದವು ಅವರ ಅಕಾಲಿಕ ನಿಧನಕ್ಕೆ ಕರ್ನಾಟಕ ಬಹುಜನ ಸಮಾಜ ಪಾರ್ಟಿ ಹಾಗೂ ದ.ಕ ಬಹುಜನ ಸಮಾಜ ಪಾರ್ಟಿ ಹಾಗೂ ವೈಯಕ್ತಿಕ ನೆಲೆಯಲ್ಲಿ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದೆ ಎಂದು ತಾಲೂಕು ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಲವು ದಶಕಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುಜನ ಸಮಾಜ ಪಾರ್ಟಿಯನ್ನು ಕಟ್ಟಿ ಬೆಳೆಸುವಲ್ಲಿ ನಿಸ್ವಾರ್ಥವಾಗಿ ತನ್ನ ಇಡೀ ಕುಟುಂಬವನ್ನು ತೊಡಗಿಸಿ ಶ್ರಮಿಸಿದ್ದ ದಾಸಪ್ಪರ ಆಗಲಿಕೆ ಪಕ್ಷಕ್ಕೆ ಹಾಗೂ ಸಾಮಾಜಿಕ ಚಳುವಳಿಗೆ ಅಪಾರ ನಷ್ಟವೇ ಸರಿ. ಈ ನಷ್ಟವನ್ನು ಪಕ್ಷ ಹಾಗೂ ಸಾಮಾಜಿಕ ಚಳುವಳಿಗಳು ಇನ್ನೂ ಮುಂದಿನ ದಿನಗಳಲ್ಲಿ ಭರಿಸಿಕೊಳ್ಳುವುದು ಅಸಾಧ್ಯ. ದಶಕಗಳ ಕಾಲ ನಿರಂತರವಾಗಿ ಓಡಾಡಿ ಪಕ್ಷವನ್ನು ಜಿಲ್ಲೆಯಲ್ಲಿ ಬೆಳೆಸಲು ಶ್ರಮಿಸಿದ ಕಾರಣಕ್ಕೆ ಅಪಾರ ಕಾರ್ಯಕರ್ತರು ಅಭಿಮಾನಿಗಳು ತಯಾರಾದರು. ಜಿಲ್ಲೆಯಲ್ಲಿ ಪಕ್ಷಕ್ಕೆ ಒಂದು ಅಡಿಪಾಯವನ್ನು ಹಾಕಿಕೊಡುವಲ್ಲಿ ದಾಸಪ್ಪರ ಕೊಡುಗೆ ಅಪಾರವಾಗಿದೆ. ಅಂಬೇಡ್ಕರ್ ಸಿದ್ದಾಂತಿಯಾಗಿದ್ದು ಜಿಲ್ಲೆಯಲ್ಲಿ ಅಂಬೇಡ್ಕರ್ ವಿಚಾರಗಳನ್ನು ಜನಸಾಮಾನ್ಯರಿಗೆ ಹರಡುವಲ್ಲಿ ನಿರಂತರವಾಗಿ ಶ್ರಮಿಸಿದ್ದಾರೆ. ಅದರಲ್ಲೂ ತುಳುನಾಡಿನ ಮೂಲನಿವಾಸಿಗಳ ಸಂಸ್ಕೃತಿ ಹಾಗೂ ಇತಿಹಾಸದ ಬಗ್ಗೆ ಅಪಾರ ಒಳನೋಟಗಳನ್ನು ಹೊಂದಿದ್ದ ಅವರು, ಈ ಹಿನ್ನೆಲೆಯಲ್ಲೇ ಕಾನದ ಕಟದ, ಸತ್ಯ ಸಾರಮಾನಿ ಸಾಂಸ್ಕೃತಿಕ ವೀರರುಗಳ ಬಗ್ಗೆ ಜನ ಜಾಗೃತಿಯನ್ನು ಮಾಡಿ ಜನರಲ್ಲಿ ಸ್ವಾಭಿಮಾನ ಉಂಟಾಗುವಂತೆ ಶ್ರಮಿಸಿದ್ದರು.
ಈ ಸಂಬಂಧಿತವಾಗಿ ಪಾಜೆಗುಡ್ಡೆ ಹಾಗೂ ಅಲೇರಿ ಅಂತಹ ಕಾನದ ಕಟದರಿಗೆ ಸಂಬಂಧಿಸಿದ ಐತಿಹಾಸಿಕ ಜಾಗಗಳು ಜನ ಪ್ರಚಾರಕ್ಕೆ ಹಾಗೂ ಮೂಂಚೂಣಿಗೆ ಬರಲು ದಾಸಪ್ಪರು ಮೂಲ ಕಾರಣಕರ್ತರು ಎಂಬುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಹೀಗೆ ನಿರಂತರವಾಗಿ ಸಮಾಜದ ಅಭಿವೃದ್ಧಿಗಾಗಿ ನಿಸ್ವಾರ್ಥವಾಗಿ ನಿರಂತರ ಹೋರಾಡಿದ್ದ ದಾಸಪ್ಪ ಎಡಪದವು ಅವರನ್ನು ಅವರ ಕುಟುಂಬ, ಅಪಾರ ಬಂಧು ಮಿತ್ರರು, ಅಭಿಮಾನಿಗಳು ಕಾರ್ಯಕರ್ತರು ಕಳಕೊಂಡಿದ್ದಾರೆ. ಅದರಲ್ಲೂ ದಾಸಪ್ಪ ಅವರನ್ನು ಕಳೆದುಕೊಂಡಿರುವ ಅವರ ಕುಟುಂಬಕ್ಕೆ ಅವರ ಅಗಲಿಕೆ ಭರಿಸುವ ಶಕ್ತಿ ಸಿಗಲಿ ಎಂಬುದಾಗಿ ಈ ಮೂಲತ ಆಶಿಸುತ್ತೇವೆ ಎಂದು ಪ್ರಾರ್ಥಿಸುತ್ತೇವೆ ಎಂದಿದ್ದಾರೆ.
ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ, ಜಾಕೀರ್ ಹುಸೇನ್ , ರಾಜ್ಯ ಕಾರ್ಯದರ್ಶಿ ಗಳಾದ ವೆಲಾಯುದನ್, ಜಾಕೀರ್ ಆಲಿಖಾನ್ ಹಾಗೂ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಕೆ.ಟಿ ರಾಮಕೃಷ್ಣನ್, ರಾಜ್ಯ ಕಾರ್ಯದರ್ಶಿ ಕಾಂತಪ್ಪ ಅಲಂಗಾರ್ ಹಾಗೂ ರಾಜ್ಯದ ನಾಯಕರುಗಳು, ಜಿಲ್ಲೆಯ ಬೆಳ್ತಂಗಡಿ, ಬಂಟ್ವಾಳ, ಮೂಡಬಿದ್ರೆ, ಸುಳ್ಯ, ಪುತ್ತೂರು, ಮಂಗಳೂರು ತಾಲೂಕಿನ ಪಕ್ಷದ ಪದಾಧಿಕಾರಿಗಳು, ದಲಿತ ಪರ ಸಂಘಟನೆಗಳ ನಾಯಕರುಗಳು ಅಂತಿಮ ದರ್ಶನ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ.