ಬೆಳ್ತಂಗಡಿ; ತೋಟತ್ತಾಡಿ ನೆಲ್ಲಿಗುಡ್ಡೆ ನಿವಾಸಿ ಆನಂದ ಪೂಜಾರಿಯವರ ಪುತ್ರ ಚಂದ್ರಶೇಖರ ಎಂಬವರು ಹಣಕಾಸಿನ ವಿಚಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಆತ್ಮಹತ್ಯೆಗೆ ಕಾರಣರಾದ ಆರೋಪಿಗಳಿಗೆ ಜಾಮೀನು ನಿರಾಕರಣೆಯಾದರೂ ಅವರನ್ನು ಇನ್ನೂ ಬಂಧಿಸಿಲ್ಲ.
ನ.7 ರ ವರೆಗೆ ನಾವು ಗಡುವು ನೀಡುತ್ತಿದ್ದು, ಅಂದಿನ ವರೆಗೆ ಏನೂ ಕ್ರಮ ಜರುಗದಿದ್ದಲ್ಲಿ ಪೊಲೀಸ್ ಠಾಣೆಯ ಎದುರು ಧರಣಿ ಕೂರುವುದಾಗಿ ಚಂದ್ರ ಶೇಖರ ಹೆತ್ತವರು ಮತ್ತು ಅವರ ಪರ ನ್ಯಾಯವಾದಿ ಮನೋಹರ್ ಕುಮಾರ್ ಇಳಂತಿಲ ಹೇಳಿದರು.
ಬೆಳ್ತಂಗಡಿಯಲ್ಲಿ ಶುಕ್ರವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾದ್ಯಮಕ್ಕೆ ಮಾಹಿತಿ ನೀಡಿದರು.
ಚಂದ್ರಶೇಖರ್ ಆತ್ಮಹತ್ಯೆಗೆ ಸ್ಥಳೀಯರಾದ ಸಚಿನ್, ಯೋಗೀಶ್, ನಾರಾಯಣ ಹಾಗೂ ಸುದರ್ಶನ್ ಎಂಬವರೇ ಕಾರಣವಾಗಿದ್ದು ಅವರ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ದರ್ಮಸ್ಥಳ ಪೊಲೀಸ್ ಠಾಣೆಗೆ ಈಗಾಗಲೇ ದೂರು ನೀಡಲಾಗಿದೆ. ಅವರು ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದು ಅದು ತಿರಸ್ಕೃತಗೊಂಡಿದೆ. ಆದರೂ ಆರೋಪಿಗಳನ್ನು ಇದುವರೆಗೆ ಪೊಲೀಸರು ಬಂಧಿಸದಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕುತ್ತದೆ ಎಂದರು.
ಸಮಾನ ಮನಸ್ಕರನ್ನು ಸೇರಿಸಿ ಹೋರಾಟ;
ನ.7 ರವರೆಗೆ ಕಾದು ಬಳಿಕ ನಡೆಸುವ ಹೋರಾಟದಲ್ಲಿ ಊರವರು ಹಾಗೂ ಪೋಷಕರು ಅಲ್ಲದೆ ಸಮಾನ ಮನಷ್ಕರನ್ನು ಸೇರಿಸಿಕೊಳ್ಳಲಾಗುವುದು.
ಘಟನೆ ಹಿನ್ನೆಲೆ ಏನು?
ಚಂದ್ರಶೇಖರ ಅವರನ್ನೊಳಗೊಂಡಂತೆ ೮ ಜನರು 'ಶಬರಿ ಸ್ವಸಹಾಯ ಸಂಘ' ರಚಿಸಿಕೊಂಡು ಹಣಕಾಸು ವ್ಯವಹಾರ ನಡೆಸಿಕೊಂಡು ಬರುತ್ತಿದ್ದರು. ಅವರು ಉಜಿರೆ ವಿಶ್ವಕರ್ಮ ಬ್ಯಾಂಕಿನಿಂದ ೪ ಲಕ್ಷ ಸಾಲ ಪಡೆದಿದ್ದರು. ಇದರಲ್ಲಿ ಅಮಾಯಕ ಚಂದ್ರಶೇಖರನ ಹೆಸರಿನಲ್ಲಿ ಯೋಗೀಶ್ ಎಂಬವನು ಹಣ ಪಡೆದುಕೊಂಡು ಸ್ವಸಹಾಯ ಸಂಘಕ್ಕೆ ಮರುಪಾವತಿ ಮಾಡದೆ ಮೋಸ ಮಾಡಿದ್ದ. ಈ ಮೊತ್ತವನ್ನು ಚಂದ್ರಶೇಖರನೇ ಮರುಪಾವತಿಸಬೇಕು ಎಂದು ಆರೋಪಿಗಳಾದ ಸಚಿನ್, ಯೋಗೀಶ್, ನಾರಾಯಣ, ಮತ್ತು ಸುದರ್ಶನ್ ಎಂಬವರು ಆತನಿಗೆ ಕೊಲೆ ಬೆದರಿಕೆ ಒಡ್ಡಿದ್ದರು.
ಇದರಿಂದ ಮನನೊಂದ ಚಂದ್ರಶೇಖರ ಆತ್ಮಹತ್ಯೆಗೆ ಯತ್ನಿಸಿದ್ದ. ಆತನನ್ನು ಆಸ್ಪತ್ರೆಗೆ ದಾಖಲಿಸಿ ಬದುಕಿಸಲು ಪ್ರಯತ್ನ ಮಾಡಿದರೂ ಆತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ.
ಈ ವಿಚಾರಚಾಗಿ ಚಂದ್ರಶೇಖರನಿಗೆ ನ್ಯಾಯೊದಗಿಸಬೇಕು ಎಂಬುದು ಇದೀಗ ಹೆತ್ತವರು ಮತ್ತು ಸಂಬಂಧಿಕರ ವಾದ.
ಮನೆಗೆ ಆಧಾರಸ್ಥಂಬವಾಗಿದ್ದ; ತಂದೆ ಆನಂದ ಪೂಜಾರಿ ಪ ತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೃತರ ತಂದೆ ಆನಂದ ಪೂಜಾರಿ, ನನ್ನ ಮಗ ಅಮಾಯಕನಾಗಿದ್ದು ನಮ್ಮ ಮನೆಗೆ ಆಧಾರಸ್ತಂಭವಾಗಿದ್ದ. ಈತನ ಹೆಸರಿನಲ್ಲಿ ಸ್ವಸಹಾಯ ಸಂಘದಲ್ಲಿ ಸಾಲಮಾಡಿ ಯೋಗೀಶ ಎಂಬವನು ಹಣ ಪಡೆದಿದ್ದು, ಇದನ್ನು ಮರುಪಾವತಿ ಮಾಡದೆ ಮಗನೇ ಮರುಪಾವತಿ ಮಾಡುವಂತೆ ಒತ್ತಾಯಿಸುತ್ತಿದ್ದರು. ಅಲ್ಲದೆ ಇವರೊಂದಿಗೆ ಸೇರಿ ಸಚಿನ್, ನಾರಾಯಣ, ಸುದರ್ಶನ್ ಇವರು ಕೊಲೆ ಬೆದರಿಕೆಒಡ್ಡಿದ್ದು ಇದರಿಂದ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜೀವನ್ಮರಣದಲ್ಲಿ ಮಗನನ್ನು ಒಂದು ತಿಂಗಳು ಬದುಕಿಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಟ್ಟಿದ್ದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ಇದೀಗ ಮಗನನ್ನು ಕಳೆದುಕೊಂಡಿರುಬ ನಮಗೆ ಪೊಲೀಸ್ ಇಲಾಖೆಯಿಂದ ನ್ಯಾಯ ಸಿಗುತ್ತಿಲ್ಲ. ಆರೋಪಿಗಳು ರಾಜಾರೊಷವಾಗಿ ತಿರುಗಾಡುತ್ತಿದ್ದಾರೆ. ಇವರಿಂದ ನಮಗೆ ಜೀವ ಭಯ ಸಾಧ್ಯತೆಯಿದ್ದು ನಮಗೆ ರಕ್ಷಣೆ ಬೇಕು. ನಮಗೆ ನ್ಯಾಯಸಿಗದಿದ್ದಲ್ಲಿ ಪೊಲೀಸ್ ಠಾಣೆಯೆದುರು ಧರಣಿ ಕುಳಿತುಕೊಳ್ಳಲು ನಾನು ಸಿದ್ದನಿದ್ದೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸ್ಥಳೀಯ ನಿವಾಸಿ ಸನತ್ ಕೋಟ್ಯಾನ್ ಮಾತನಾಡಿ ಚಂದ್ರಶೇಖರನ ಸಾವಿಗೆ ನ್ಯಾಯಸಿಗಬೇಕು, ಅಮಾಯಕನ ಜೀವವನ್ನು ಕಳೆದುಕೊಂಡಿದ್ದೇವೆ. ನ್ಯಾಯಕ್ಕಾಗಿ ಪೊಲೀಸ್ ಠಾಣೆ ಎದುರು ನ. ೭ರಂದು ಪ್ರತಿಭಟನೆ ನಡೆಸಲಿದ್ದು ಇದಕ್ಕೆ ಬೆಂಬಲ ನೀಡುವಂತೆ ಮಾಜಿ ಶಾಸಕ ಕೆ. ವಸಂತ ಬಂಗೇರ, ಹಿಂದೂ ಮುಖಂಡರಲ್ಲಿ, ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆ, ಯುವವಾಹಿನಿ ಘಟಕ ಬೆಳ್ತಂಗಡಿ ಹಾಗೂ ಸಮಾನ ಮನಸ್ಕರಲ್ಲಿ ಮನವಿ ಮಾಡಿದ್ದು ಭಾನುವಾರದೊಳಗೆ ಬಂಧನವಾಗದಿದ್ದಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದರು.
ಗೊಷ್ಠಿಯಲ್ಲಿ ಮೃತನ ತಾಯಿ ಪುಷ್ಪಾ, ಮೃತನ ಸಹೋದರ ವಿನಯಕುಮಾರ್, ಸ್ಥಳಿಯರಾದ ರಾಜನ್ ಮತ್ತು ಮಂಜುನಾಥ್ ಉಪಸ್ಥಿತರಿದ್ದರು.