ಬೆಳ್ತಂಗಡಿ : ಮನೆಯಿಂದ ತೋಟಕ್ಕೆ ಹೋಗಿದ್ದ ಕಲ್ಮಂಜ ಗ್ರಾಮದ ಕರಿಯನೆಲ ಕಂರ್ಬಿತ್ತಿಲ್ ನಿವಾಸಿ ಉದಯ ಗೌಡ ಅವರ ಸಾವಿಗೆ ವಿದ್ಯುತ್ ಅವಘಡವೇ ಕಾರಣ ಎಂದು ಧರ್ಮಸ್ಥಳ ಪೊಲೀಸರು ಪತ್ತೆಹಚ್ಚಿದ್ದಾರೆ. ಆ ಹಿನ್ನೆಲೆಯಲ್ಲಿ ಮೃತರ ಸಂಬಂಧಿ, ಉದ್ಯಮಿ ಹರೀಶ ಗೌಡ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಕರಿಯನೆಲದ ಕರ್ಬಿತ್ತಿಲ್ ನಿವಾಸಿ ಶೀನಪ್ಪ ಗೌಡ ಎಂಬವರ ಪುತ್ರ ಉದಯ ಗೌಡ(43) ಅವರು ತೋಟಕ್ಕೆ ಹೋಗುವ ದಾರಿ ಮಧ್ಯೆ ಶಿವಪ್ಪ ಗೌಡ ಎಂಬವರ ಪಾಳುಬಿದ್ದ ಗದ್ದೆಯಲ್ಲಿ ಅಸಹಜವಾಗಿ ಮೃತಪಟ್ಟಿದ್ದರು. ಈ ಬಗ್ಗೆ ಮೃತರ ಸಹೋದರ ಯೋಗೀಶ ಕೆ ಅವರು ಧರ್ಮಸ್ಥಳ ಪೊಲೀಸರಿಗೆ ನೀಡಿದ ದೂರಿನಂತೆ ಇದೀಗ ಠಾಣೆಯಲ್ಲಿ ಕಲಂ: 304 (A), 139 ಎಲೆಕ್ಟ್ರಿಸಿಟಿ ಆ್ಯಕ್ಟ್ 2003 ,ಜೊತೆಗೆ 34 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿದೆ.
ಘಟನೆ ಹೇಗೆ ನಡೆಯಿತು?
ಮೃತ ಉದಯ ಗೌಡ ಅವರ ಸಹೋದರ ಯೋಗೀಶ ಅವರು ನೀಡಿದ ದೂರಿನ ಸಾರಾಂಶದಲ್ಲಿ, ಅ.29 ರಂದು ರಾತ್ರಿ ತಾನು 9.30 ಕ್ಕೆ ರಬ್ಬರ್ ಟ್ಯಾಪಿಂಗ್ ಬಗ್ಗೆ ಮನೆಯಿಂದ ಹೊರ ಹೋದವನು 2.00 ಗಂಟೆಗೆ ಮರಳಿ ಬಂದಿದ್ದೆ. ಬೆಳಿಗ್ಗೆ 7.00 ಗಂಟೆಗೆ ಮತ್ತೆ ರಬ್ಬರ್ ಹಾಲು ಸಂಗ್ರಹಕ್ಕೆಂದು ಮನೆಯಿಂದ ತೆರಳುವ ವೇಳೆ ಅಣ್ಣ ಉದಯ ಗೌಡ ಮನೆಯಲ್ಲಿರಲಿಲ್ಲ. ಅವರು ಎಂದಿನಂತೆ ತೋಟದ ಕಡೆಗೆ ಹೋಗಿರಬಹುದು ಎಂದುಕೊಂಡಿದ್ದೆವು. ತೋಟದಲ್ಲಿದ್ದ ವೇಳೆ ನನಗೆ ನನ್ನ ಪತ್ನಿ ಕರೆಮಾಡಿ, ಅಣ್ಣ ಉದಯ ಗೌಡ ಇನ್ನೂ ಮನೆಗೆ ಬಂದಿಲ್ಲ ಎಂದು ತಿಳಿಸಿದ್ದರು. ಆದ್ದರಿಂದ ನಾನು ಮಧ್ಯಾಹ್ನ 12 ಗಂಟೆಗೆ ಮನೆಗೆ ವಾಪಾಸು ಬಂದು ಅಕ್ಕ ಪಕ್ಕದ ಸಂಬಂಧಿಗಳ ಮನೆಗೆ ಕರೆ ಮಾಡಿ ವಿಚಾರ ತಿಳಿಸಿದ್ದೆ. ಇದಾಗಿ ಹುಡುಕುವ ಯತ್ನದಲ್ಲಿರುವಂತೆ ಸಂಬಂಧಿ ಅಶೋಕ ಎಂಬವರು ಕರೆ ಮಾಡಿ, ಉದಯ ಗೌಡ ಅವರ ದೇಹ ಶಿವಪ್ಪ ಗೌಡ ಅವರ ಪಾಳುಬಿದ್ದ ಗದ್ದೆಯಲ್ಲಿ ಕವುಚಿ ಮಲಗಿದ ಸ್ಥಿತಿಯಲ್ಲಿರುವುದಾಗಿ ಮಾಹಿತಿ ನೀಡಿದರು. ನಾವೆಲ್ಲ ಅಲ್ಲಿಗೆ ಓಡಿಹೋಗಿ ನೋಡಿ ಉಪಚರಿಸಲಾಗಿ ಎರಡೂ ಕಾಲುಗಳಲ್ಲಿ ವಿದ್ಯುತ್ ಅವಘಡದಂತಹಾ ಕುರುಹು ಕಂಡು ಬಂದಿತ್ತು. ಇದು ವಿದ್ಯುತ್ ವಯರ್ ತಾಗಿಯೇ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.
ಘಟನೆ ಬಗ್ಗೆ ಕೋಲಂಕಷವಾಗಿ ತನಿಖೆ ನಡೆಸಿದ ಧರ್ಮಸ್ಥಳ ಎಸ್.ಐ ಅನಿಲ ಕುಮಾರ್ ಅವರು ಕೊನೆಗೂ ಘಟನೆಯ ಹಿನ್ನೆಲೆ ಪತ್ತೆ ಮಾಡಿದ್ದಾರೆ. ಕೃಷಿ ರಕ್ಷಣೆ ಅಥವಾ ಕಾಡುಪ್ರಾಣಿ ಭೇಟೆಗಾಗಿ ಹರೀಶ ಗೌಡ ಅವರ ಪಂಪು ಶೆಡ್ಡ್‌ನಿಂದ ಅಕ್ರಮವಾಗಿ ವಿದ್ಯುತ್ ಬಳಸಿ ಅದನ್ನು ವಯರ್ ಗೆ ಜೋಡಿಸಿಟ್ಟಿದ್ದು, ಅದನ್ನು ತೋಟಕ್ಕೆ ಹೋಗುವ ದಾರಿಮಧ್ಯೆ ಉದಯ ಗೌಡನು ಸ್ಪರ್ಶಿಸಿದ ಪರಿಣಾಮ ಈ ಸಾವು ಆಗಿದೆ ಎಂದು ಖಚಿತಪಡಿಸಿಕೊಂಡಿದ್ದಾರೆ. ಈ ಸಂಬಂಧ ಹರೀಶ ಗೌಡ ಮತ್ತಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಇದು ಹರೀಶ ಗೌಡ ಅವರಿಗೆ ಅಪಾಯದ ಅರಿವಿದ್ದರೂ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಮಾನವ ಜೀವ ಹಾನಿಗೆ ಕಾರಣವಾದ ಘಟನೆ ಎಂದು ಉಲ್ಲೇಖಿಸಲಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್ ಅವರು ಭೇಟಿನೀಡಿ ಪರಿಶೀಲಿಸಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.
ದೇರಳಕಟ್ಟೆ ಆಸ್ಪತ್ರೆಯಲ್ಲಿ ಶವಪರೀಕ್ಷೆ;
ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಉದಯ ಗೌಡ ಅವರ ಮರಣೋತ್ತರ ಪರೀಕ್ಷೆಗಾಗಿ ದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ, ಗಂಭೀರ ಪ್ರಕರಣವಾಗಿರುವುದರಿಂದ ಇದೀಗ ದೇಹವನ್ನು ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಯ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ. ಅಲ್ಲಿ ಇಂದು ಫೊರೆನ್ಸಿಕ್ ತಜ್ಞರ ಸಮ್ಮುಖ ವೀಡಿಯೋ ದಾಖಲೆಯೊಂದಿಗೆ ಪೋಸ್ಟ್ ಮಾರ್ಟಂ ನಡೆಸಲು ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ.
ಅಂತೂ ಯಾರದ್ದೋ ಬೇಜವಾಬ್ಧಾರಿತನದಿಂದಾಗಿ ಅಮಾಯಕ ಉದಯ ಗೌಡ ಅವರು ಮಾತ್ರ ಸಾವನ್ನಪ್ಪಿರುವುದು ಖೇದ ತಂದಿದೆ.
ಸರಳ ಸಜ್ಜನಿಕೆಯ ವ್ಯಕ್ತಿ ಉದಯ ಗೌಡ;
ಉದಯ ಗೌಡ ಅವರು ಕೃಷಿ ಮತ್ತು ಕೃಷಿ ಕೂಲಿ ಕಾರ್ಮಿಕರಾಗಿದ್ದು ಅತ್ಯಂತ ಸರಳ ಸಕ್ಜನಿಕೆಯವರಾಗಿದ್ದರು. ಶ್ರಮಜೀವಿಯೂ ಆಗಿದ್ದ ಅವರು ತನ್ನ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ಅಂತಹಾ ವ್ಯಕ್ಯಿ ದುರಂತಕ್ಕೆ ಸಿಲುಕಿ ಕೊನೆಯುಸಿರೆಳೆದಿರುವ ಬಗ್ಗೆ ಅವರ ಬಂಧುಮಿತ್ರರು ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ.
------
ವರದಿ: ಅಚ್ಚು ಮುಂಡಾಜೆ