ಬೆಳ್ತಂಗಡಿ; 2021-22 ನೇ ರೋಟರಿ ವರ್ಷ ಇದೀಗ ತಾನೇ ಕೊನೆಗೊಂಡಿರುತ್ತದೆ . ಈ ಸಾಲಿನಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ಮತ್ತು ಎಲ್ಲಾ ನಿರ್ದೇಶಕರ ತಂಡದೊಂದಿಗೆ 750 ಕ್ಕೂ ಮಿಕ್ಕಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ. ಇದರ ಮುಂದಿನ ಸಾಲಿನ ನೂತನ ಮಂಡಳಿಯ ಪದಗ್ರಹಣ ಕಾರ್ಯಕ್ರಮ ಜು.7 ರಂದು ಕಾಶಿಬೆಟ್ಟು ಅರಳಿಯ ರೋಟರಿ ಸಮುದಾಯ ಭವನದಲ್ಲಿ ಸಂಜೆ 7 ಗಂಟೆಗೆ ನಡೆಯಲಿದೆ. ನೂತನ ಆಡಳಿತ ಮಂಡಳಿ ತನ್ನ ಯೋಜನೆಗಳ ಜೊತೆಗೆ ನಡ ಸರಕಾರಿ ಪ್ರೌಢ ಶಾಲೆಗೆ 20 ಲಕ್ಷ ರೂ.ವೆಚ್ಚದಲ್ಲಿ ಗ್ರಂಥಾಲಯ ಕಟ್ಟಡ ರಚಿಸಿಕೊಡಲು ತೀರ್ಮಾನಿಸಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಶರತ್‌ಕೃಷ್ಣ ಪಡುವೆಟ್ನಾಯ ತಿಳಿಸಿದರು.
ರೋಟರಿ ಭವನದ ರಮಾನಂದ ಸಾಲಿಯಾನ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ ನೀಡಿದರು.
ಹಿರಿಯ ಪತ್ರಕರ್ತ ಆರ್.ಎನ್ ಪೂವಣಿಯವರಿಗೆ ಸನ್ಮಾನ2022-23ನೇ ಸಾಲಿನ ಅಧ್ಯಕ್ಷರಾಗಿ ಮನೋರಮಾ ಭಟ್ , ಕಾರ್ಯದರ್ಶಿಯಾಗಿ ರಕ್ಷಾ ರಾಘ್ನೇಶ್ ಹಾಗೂ ಕೋಶಾಧಿಕಾರಿಯಾಗಿ ನಾರಾಯಣ ಪೈ ಸರ್ವಾನುಮತದಿಂದ ಆಯ್ಕೆಯಾಗಿರುತ್ತಾರೆ . ನಿರ್ದೇಶಕ ಮಂಡಳಿಗೆ ಯೋಗೀಶ್ ಭಿಡೆ , ಗಾಯತ್ರಿ ದಿನೇಶ್ ,ಶ್ರವಣ್ , ಆ್ಯಂಟನಿ ಹಾಗೂ ಸಂದೇಶ್ ರಾವ್ ಆಯ್ಕೆಯಾಗಿರುತ್ತಾರೆ . ಇವರ ತಂಡದ ಪದಗ್ರಹಣ ಸಮಾರಂಭದಲ್ಲಿ ರೋಟರಿ ಜಿಲ್ಲೆ 3181 ರ 2023-24 ನೇ ಸಾಲಿನ ಚುನಾಯಿತ ಗವರ್ನರ್ ಮೈಸೂರಿನ ಉದ್ಯಮಿ ಎಚ್ . ಆರ್ . ಕೇಶವ್ ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಲಿದ್ದಾರೆ . ನಮ್ಮ ಕ್ಲಬ್ಬಿನ ಸದಸ್ಯರಾಗಿದ್ದು ವಲಯ IV ರ ಸಹಾಯಕ ಗವರ್ನರ್ ಆಗಿರುವ ನಿವೃತ್ತ ಮೇಜರ್ ಜನರಲ್ ಎಂ . ವಿ . ಭಟ್, ಹಾಗೂ ರೋನಲ್ ಲೆಫ್ಟಿನೆಂಟ್ ಶರತ್ ಕೃಷ್ಣ ಪಡ್ಡೆಟ್ನಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ವರ್ಷ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ ಧ್ಯೇಯವಾಕ್ಯ 'Imagine Rotary' ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ ಅಧ್ಯಕ್ಷರಾದ ಜೆನ್ನಿಫರ್ ಜೋನ್ಸ್ ಪರಿಕಲ್ಪನೆಯಂತೆ ದ . ಕನ್ನಡ , ಕೊಡಗು , ಮೈಸೂರು ಹಾಗೂ ಚಾಮರಾಜ ನಗರ ಗಳನ್ನೊಳಗೊಂಡ ರೋಟರಿ ಜಿಲ್ಲೆ 3181 ರ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತರ ತಂಡ ಆರೋಗ್ಯಸಿರಿ , ಜಲಸಿರಿ , ವನಸಿರಿ ಹಾಗೂ ವಿದ್ಯಾಸಿರಿ ಯೋಜನೆಗಳನ್ನು ರೂಪಿಸಿದೆ . ಈ ಯೋಜನೆಗಳಡಿಯಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಈ ವರ್ಷ ವಿವಿಧ ಇಲಾಖೆಗಳು , ಸಂಘಸಂಸ್ಥೆಗಳ ಸಹಭಾಗಿತ್ವದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ . ಮುಖ್ಯವಾಗಿ ಆರೋಗ್ಯ ತಪಾಸಣಾ ಶಿಬಿರಗಳು , ರಕ್ತದಾನ ಶಿಬಿರಗಳು ಮಕ್ಕಳ ಅಪೌಷ್ಟಿಕತೆ ನಿವಾರಣೆ , ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಮಾಹಿತಿ ಕಾರ್ಯಕ್ರಮಗಳು , ವಿದ್ಯಾರ್ಥಿ ವೇತನ , ಮೂಲ ಸೌಕರ್ಯಗಳ ಒದಗಣೆ , ಪರಿಸರ ಸಂರಕ್ಷಣೆ ಕಾರ್ಯಕ್ರಮ ಇತ್ಯಾದಿಗಳನ್ನು ವರ್ಷದುದ್ದಕ್ಕೂ ಹಮ್ಮಿಕೊಳ್ಳಲು ಯೋಜಿಸಲಾಗಿದೆ . ಬೆಂಗಳೂರಿನ ಇಂದಿರಾನಗರ ರೋಟರಿ ಕ್ಲಬ್ ಸಹಯೋಗದಲ್ಲಿ ಸರಕಾರಿ ಪ್ರೌಢಶಾಲೆ ನಡ , ಇಲ್ಲಿ ಸುಮಾರು ರೂ 20 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಗ್ರಂಥಾಲಯ ಕಟ್ಟಡವನ್ನು ರೂಪಿಸಲು ಯೋಜನೆಯನ್ನು ರೂಪಿಸಲಾಗಿದೆ . ಧರ್ಮಸ್ಥಳದ ಧರ್ಮಾಧಿಕಾರಿ ಡಾ.
ಡಿ . ವೀರೇಂದ್ರ ಹೆಗ್ಗಡೆಯವರು ನಮ್ಮ ಕ್ಲಬ್ಬಿನ ಗೌರವ ಸದಸ್ಯರಾಗಿದ್ದು, ರೋಟರಿ ಸಂಸ್ಥೆಯ ಧೈಯೋದ್ದೇಶಗಳಿಗನುಗುಣವಾಗಿ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಿದ್ದು ಈ ಎಲ್ಲಾ ಕಾರ್ಯಗಳಿಗೆ ಊರಿನ ನಾಗರಿಕರ , ಎಲ್ಲಾ ಸಂಘ ಸಂಸ್ಥೆಗಳ , ಸರಕಾರಿ ಇಲಾಖೆಗಳ , ಜನಪ್ರತಿನಿಧಿಗಳ , ಪತ್ರಿಕೆ ಹಾಗೂ ಮಾಧ್ಯಮ ಮಿತ್ರರ ಸಹಕಾರವನ್ನು ಕೋರುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಂ.ವಿ ಭಟ್, ಅಬೂಬಕ್ಕರ್, ನಿಯೋಜಿತ ಅಧ್ಯಕ್ಷೆ ಮನೋರಮಾ ಭಟ್, ನಿಯೋಜಿತ ಕಾರ್ಯದರ್ಶಿ ರಕ್ಷಾ ರಾಘ್ನೇಶ್ ಮೊದಲಾದವರು ಉಪಸ್ಥಿತರಿದ್ದರು.