ಬೆಳ್ತಂಗಡಿ; ಉಜಿರೆಯಲ್ಲಿ ಜನವರಿ 8-9 ರಂದು ಎರಡು ದಿನಗಳ ಕಾಲ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಮೂರನೇ ರಾಜ್ಯ ಮಟ್ಟದ ಅಧಿವೇಶನ ನಡೆಯಲಿದ್ದು ಭರದ ಸಿದ್ಧತೆ ನಡೆಯುತ್ತಿದೆ ಎಂದು ಸ್ವಾಗತ ಸಮಿತಿಯ ಸಂಚಾಲಕ ಡಾ. ಎಂ. ಎನ್ ರವಿ ಅವರು ತಿಳಿಸಿದರು.
ಬೆಳ್ತಂಗಡಿ ನಗರದ ವಾರ್ತಾ ಭವನದಲ್ಲಿ ಶುಕ್ರವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ ನೀಡಿದರು.
ಉಜಿರೆ ಜನಾರ್ದನ ದೇವಸ್ಥಾನದ ಬಳಿ ಇರುವ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯುವ ಈ ಸಮ್ಮೇಳನವು "ನುಡಿ ಸಾಮ್ರಾಜ್ಯದಲ್ಲಿ ಸ್ವರಾಜ್ಯ" ಪರಿಕಲ್ಪನೆಯಡಿ ನಡೆಯಲಿದೆ. ವಿವಿಧ ಗೋಷ್ಠಿಗಳು, ಕವಿ ಸಮ್ಮೇಳನ, ಪುಸ್ತಕ ಪ್ರದರ್ಶನ ಮತ್ತು ಮಾರಾಟ, ವಸ್ತು ಪ್ರದರ್ಶನ ಮಳಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಯವರು ಜ.8 ರಂದು ಬೆಳಗ್ಗೆ ಅಧಿವೇಶನ ಉದ್ಘಾಟಿಸಲಿದ್ದಾರೆ.ಸಾಹಿತಿ ಡಾ. ನಾ. ಮೊಗಸಾಲೆ ಸಮ್ೆ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಉಪಾಧ್ಯಕ್ಷ ಹರಿಪ್ರಕಾಶ್ ಕೋಣೆಮನೆ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ವಸ್ತು ಪ್ರದರ್ಶನವನ್ನು ರೆಡ್‌ಕ್ರಾಸ್ ಸೊಸೈಟಿ ಜಿಲ್ಲಾ ಅಧ್ಯಕ್ಷ ಸಿ.ಎ ಶಾಂತಾರಾಮ ಶೆಟ್ಟಿ ಉದ್ಘಾಟಿಸಲಿದ್ದಾರೆ. ಅಪರಾಹ್ನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ರಾಜ್ಯ ಸಹಕಾರ್ಯದರ್ಶಿ ಕ.ವೆಂ. ನಾಗರಾಜ ಪುಸ್ತಕ ಪ್ರಕಟಣೆ ಬಗ್ಗೆ ಮಾಹಿತಿ ನೀಡಲಿದ್ದಾರೆ.
ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ ಸಮ್ಮೇಳನ ಕುರಿತು ಅವಲೋಕನ ಮಾತುಗಳನ್ನಾಡಲಿದ್ದಾರೆ. ರಾಜ್ಯಾಧ್ಯಕ್ಷ ಪ್ರೊ. ಪ್ರೇಮ ಶಂಕರ ಸಮ್ಮೇಳನದ ಕುರಿತು ಅವಲೋಕನಾ ಮಾತುಗಳನ್ನಾಡಲಿದ್ದಾರೆ.
ಸಂಜೆಯ ಕಾರ್ಯಕ್ರಮದಲ್ಲಿ ಸಾಹಿತ್ಯ ಪರಿಚಾರಕ ಹರ್ಷವರ್ಧನ "ಶೀಲವಂತ ಸಾಹಿತ್ಯದಲ್ಲಿ ಮೊದಲನೇ ಸ್ವಾತಂತ್ರ್ಯ ಹೋರಾಟ", ಅಂಕಣಕಾರ ರೋಹಿತ್ ಚಕ್ರತೀರ್ಥ "ಸಾಹಿತ್ಯದಲ್ಲಿ ಕ್ರಾಂತಿ ಸೂರ್ಯ" ಕುರಿತು ಉಪನ್ಯಾಸ ನೀಡಲಿದ್ದಾರೆ. ವಿಮರ್ಶಕಿ ಡಾ. ಎನ್.ಆರ್. ಲಲಿತಾಂಬ ಅವಲೋಕನಗೈಯ್ಯಲಿದ್ದಾರೆ.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವಾ ಉದ್ಘಾಟಿಸಲಿದ್ದಾರೆ.
ಜ.8 ರಂದು ಬೆಳಗ್ಗೆ ಸಮನ್ವಯ ಕವಿ ಸಮ್ಮಿಲನದಲ್ಲಿ ಸೂರ್ಯ ಹೆಬ್ಬಾರ್ ಬೆಂಗಳೂರು, ಸುಜಾತಾ ಹೆಗಡೆ ಉಮ್ಮಚಿಗಿ, ಅನಿತಾ ಪೂಜಾರಿ ಮುಂಬೈ, ತನ್ಮಯಿ ಪ್ರೇಮ ಕುಮಾರ್ ಚಿಕ್ಕಮಗಳೂರು, ವೆಂಕಟೇಶ ನಾಯಕ ಮಂಗಳೂರು, ವಿದ್ಯಾಶ್ರೀ ಅಡೂರು ಮುಂಡಾಜೆ, ಸೋಮಶೇಖರ ಕೆ ತುಮಕೂರು, ಪೂರ್ಣಇಮಾ ಸುರೇಶ ಹಿರಿಯಡ್ಕ, ಹೃತ್ಪೂರ್ವಕ ಕೋರ್ನ ಕೊಡಗು, ಚಿನ್ಮಯಿ ಬೆಂಗಳೂರು, ಸುಭಾಷಿಣಿ ಬೆಳ್ತಂಗಡಿ, ಅಣ್ಣಪ್ಪ ಅರಬಗಟ್ಟೆ ತೀರ್ಥಹಳ್ಳಿ, ಮಾಣಿಮಾಡ ಜಾನಕೀ ಮಾಚಯ್ಯ ಮಡಿಕೇರಿ, ಸುಷ್ಮಾ ಗುರುಪುತ್ರ ಗೋಕಾಕ, ಡಾ.ಸ್ನೇಹಾ ಫಾತರಪೇಕರ ಅಂಕೋಲಾ, ವೀರೇಶ ಬಿ ಅಜ್ಜಣ್ಣನವರ್ ಹರಿಹರ, ಡಾ.ಮೀನಾಕ್ಷಿ ರಾಮಚಂದ್ರ ಮಂಗಳೂರು, ಮತ್ತು ಪರಿಣಿತ ರವಿ ಎರ್ನಾಕುಲಂ ಕವನ ವಾಚಿಸಲಿದ್ದಾರೆ.
ಅಂಕಣಕಾರ ಡಾ. ರೋಹಿಣಾಕ್ಷ ಶಿರ್ಲಾಲು "ಲಾವಣಿಗಳಲ್ಲಿ ಸ್ವರಾಜ್ಯ ಕ್ರಾಂತಿ", ಇಂಗ್ಲೀಷ್ ಉಪನ್ಯಾಸಕಿ ಪವಿತ್ರಾ ಮೃತ್ಯುಂಜಯಸ್ವಾಮಿ "ಕನ್ನಡ ನುಡಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿಯರು" ಕುರಿತು ವಿಚಾರ ಮಂಡಿಸಲಿದ್ದಾರೆ. ಅಂಕಣಕಾರ ಪ್ರಭಾಕರ ಕಾರಂತ ಅವಲೋಕನಗೈಯ್ಯಲಿದ್ದಾರೆ.
ಮೈಸೂರು ಆಕಾಶವಾಣಿಯ ದಿವಾಕರ ಹೆಗಡೆ ಸಮಾರೋಪ ಭಾಷಣ ಮಾಡುವರು. ಅಖಿಲ ಭಾರತ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಪ್ರೋ.ಪ್ರೇಮಶಂಕರ ಮತ್ತು ಸಾಹಿತಿ ಡಾ.ನಾ.ಮೊಗಸಾಲೆ ಉಪಸ್ಥಿತರಿರುವರು. ಸಮಸ್ತ ಭಾರತೀಯ ಭಾಷೆಗಳ ನಡುವೆ ಸೌಹಾರ್ದ ಭಾವವನ್ನು ಜಾಗೃತಗೊಳಿಸುವ ಧ್ಯೇಯೋದ್ದೇಶದೊಂದಿಗೆ ಈ ಸಮ್ಮೇಳನ ಮೇಳೈಸಲಿದೆ ಎಂದರು.
ಸಾಹಿತ್ಯಾಭಿಮಾನಿ ಪ್ರತಿನಿಧಿಗಳಿಗೆ ಊಟೋಪಚಾರ, ವಸತಿ ಹಾಗೂ ವಾಹನ ಪಾರ್ಕಿಂಗ್ ವ್ಯವಸ್ಥೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಜ. 8 ರಂದು ಸಂಜೆ 6.30 ರಿಂದ ಮೂರು ಗಂಟೆ ಅವಧಿಗೆ ಮೂಡಬಿದಿರೆಯ ಆಳ್ವಾಸ್ ಕಾಲೇಜು ವಿದ್ಯಾರ್ಥಿಗಳು ಹಾಗೂ ರಾಜ್ಯಾದ್ಯಂತ ಕಲಾವಿದರಿಂದ ಸಾಂಸ್ಕೃತಿಕ ವೈವಿದ್ಯ ಏರ್ಪಾಡಾಗಿದೆ. ಕರೋನಾ ಹಿನ್ನೆಲೆಯಲ್ಲಿ ಸರಕಾರದ ಮಾರ್ಗಸೂಚಿಗಳನ್ನು ಸಂಪೂರ್ಣ ಅಳವಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸ್ವಾಗತ ಸಮಿತಿಯ ಉಪಾಧ್ಯಕ್ಷ ಶರತ್‌ಕೃಷ್ಣ ಪಡುವೆಟ್ನಾಯ, ಮಾಧ್ಯಮ ಸಮಿತಿ ಸಂಚಾಲಕ ಡಾ. ಭಾಸ್ಕರ ಹೆಗಡೆ ಪೂರಕ ಮಾಹಿತಿ ನೀಡಿ, ಸಹಕಾರ ಕೋರಿದರು.
ಸಮಿತಿ ಕಾರ್ಯದರ್ಶಿ ಕೆ ಪ್ರಕಾಶ್ ನಾರಾಯಣ್ ಚಾರ್ಮಾಡಿ, ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ರಮೇಶ್ ಮಯ್ಯ, ಮತ್ತು ಕೋಶಾಧಿಕಾರಿ ಕೇಶವ ಭಟ್ ಅತ್ತಾಜೆ ಉಪಸ್ಥಿತರಿದ್ದರು.