ಬೆಳ್ತಂಗಡಿ; ಸ್ಪರ್ಧಾತ್ಮಕ ಪರೀಕ್ಷೆ ಅಥವಾ ಯಾವುದೇ ವಿದ್ಯಾಭ್ಯಾಸವೇ ಇರಲಿ ಅನಾವಶ್ಯಕವಾಗಿರುವುದನ್ನು ಹೆಚ್ಚು ಓದುವ ಬದಲು ಅಗತ್ಯವಿರುವುದನ್ನು ಮಾತ್ರ ನಿಖರವಾಗಿ ಓದಬೇಕು. ದ.ಕ ಜಿಲ್ಲೆಯವರು ಸರಕಾರಿ ಉದ್ಯೋಗ ಮತ್ತು ಸ್ಪರ್ಧಾತ್ಮಕ ಕ್ಷೇತ್ರಕ್ಕೆ ಕಡಿಮೆ ಹಾಜರಾಗುತ್ತಾರೆ. ಆ ನಿಟ್ಟಿನಲ್ಲಿ ಇಲ್ಲಿನ ಯುವಜನತೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನಮ್ಮ ಕಮಿಷನರೇಟ್ ವ್ಯಾಪ್ತಿಯಲ್ಲಿ ಮುಂದಿನ 15 ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಕಲಿಕಾ ಕೇಂದ್ರ ಆರಂಭ ಮಾಡಲಿದ್ದೇವೆ ಎಂದು ಮಂಗಳೂರು ಕಮಿಷನರ್ ಎನ್ ಶಶಿಕುಮಾರ್ ಹೇಳಿದರು.
ಬೆಸ್ಟ್ ಫೌಂಡೇಶನ್ ಸಂಸ್ಥೆಯ ವತಿಯಿಂದ ಬೆಳ್ತಂಗಡಿ ತಾಲೂಕಿನ ಇತಿಹಾಸದಲ್ಲೇ ಮೊದಲ ಬಾರಿಗೆ ಐಎಎಸ್, ಐಪಿಎಸ್, ಬ್ಯಾಂಕಿಂಗ್ ನಂತಹಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವತಯಾರಿ ತರಬೇತಿ ಶಿಬಿರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಬೆಳ್ತಂಗಡಿಯ ಶ್ರೀ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯಾನ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.
ಮುಂದುವರಿದು ಮಾತನಾಡಿದ ಶಶಿಕುಮಾರ್ ಅವರು, ಐಎಎಸ್, ಐಪಿಎಸ್ ತರಬೇತಿ ಎಂಬುದು ಶೋಕಿ ಅಲ್ಲ. ಯಾಕೆಂದರೆ ಅದೊಂದು ಕೋರ್ಸ್ ಅಲ್ಲ. ಈ ಪರೀಕ್ಷೆ ಎದುರಿಸಲು ಉನ್ನತ ಅಂಕಗಳೇ ಬೇಕೆಂದಿಲ್ಲ. 60-70 ಶೇಕಡಾ ಅಂಕ ಪಡೆಯುವ ಸಾಮರ್ಥ್ಯ ಇದ್ದರೆ, 6-8 ಗಂಟೆ ಓದುವ ಗುರಿ ಇದ್ದರೆ, ದೂರದರ್ಶನ, ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳುವ ಕುತೂಹಲ ಇವುಗಳು ಇದ್ದರೆ ಸಾಕಾಗುತ್ತದೆ ಎಂದರು.
ಕರಾವಳಿ ಜಿಲ್ಲೆಯಲ್ಲಿ ವಿದೇಶಿ ಉದ್ಯೋಗದ ಕಡೆಗೆ ಹೆಚ್ಚಿನವರ ಒಲವು ತೋರುತ್ತಾರೆ. ಆದರೆ ಕೋವಿಡ್ ಕಾಲಘಟ್ಟದಲ್ಲಿ ಸರಕಾರಿ ಉದ್ಯೋಗದ ಕಡೆಗೆ ಒಲವು ಜಾಸ್ತಿಯಾಗಿದೆ. ಜಿಲ್ಲೆಯವರು ಕಳೆದ 11 ವರ್ಷದಲ್ಲಿ 4% ಮಾತ್ರ ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಭಾಗವಹಿಸಿರುವುದನ್ನು ಕಂಡು ಮೇಲಧಿಕಾರಿಗಳ ಜೊತೆ ಚರ್ಚಿಸಿ ತರಬೇತಿ ಆಯೋಜನೆ ಮಾಡಿದ್ದೆವು. ಅದರಲ್ಲಿ ಉತ್ತಮ ಫಲಿತಾಂಶ ಕಂಡಿದೆ. ಒಂದುವೇಳೆ ಈ ಜಿಲ್ಲೆಯವರು ತರಬೇತಿಯ ಪ್ರಯೋಜನಪಡೆದು ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಭಾಗಿಯಾದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶದಂತೆ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹೈಕೋರ್ಟ್ ವಕೀಲರೂ ಆಗಿರುವ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಮಾತನಾಡಿ, ಯುವಜನತೆ ದೇಶದ ಆಸ್ತಿ, ಇಷ್ಟೂ ವರ್ಷಗಳ ತಾಲೂಕಿನ ಇತಿಹಾಸ ನೋಡಿದಾಗ ತಾಲೂಕಿನಿಂದ ಯಾರೊಬ್ಬರೂ ಐಎಎಸ್, ಐಪಿಎಸ್ ಆಗಿಲ್ಲ. ಆದ್ದರಿಂದ ಇದನ್ನೇ ಶಪಥ ಮಾಡಿದ್ದು, ಈ ಕೆಲಸವನ್ನು ಮುಂದಿನ ನಾಲ್ಕೈದು ವರ್ಷಗಳಲ್ಲಿ ಬೆಸ್ಟ್ ಫೌಂಡೇಶನ್ ಮಾಡಿಯೇ ಮಾಡುತ್ತದೆ ಎಂದರು..
ಗ್ರಾಮಾಂತರ ಭಾಗದ ವಿದ್ಯಾರ್ಥಿಗಳು, ಸರಕಾರಿ ಶಾಲೆಯಲ್ಲಿ ಓದಿದವರು ಎಂಬ ಕೀಳರಿಮೆ ಬೇಕಾಗಿಲ್ಲ. ಎಲ್ಲಾ ಸಾಧನೆಗಳನ್ನು ಮಾಡಿದವರೆಲ್ಲರೂ ಇಂತಹದ್ದೇ ಮೂಲದಿಂದ ಬಂದವರು ಎಂಬುದು ಉಲ್ಲೇಖಾರ್ಹ ಎಂದರು.
ಮೀಸಲಾತಿ ಹಕ್ಕು;
ತಾಲೂಕಿನಲ್ಲಿ ಓಡಾಡಿದಾಗ ಅನೇಕ ವಿಚಾರಗಳನ್ನು ತಿಳಿಯಲು ಸಾಧ್ಯವಾಯಿತು. ನಮ್ಮಲ್ಲಿ ಮೀಸಲಾತಿ ಎಂಬುದು ಇನ್ನೂ ಕೆಲವರಿಗೆ ಅರಿವು ಇಲ್ಲ. ಮೀಸಲಾತಿ ಎಂಬುದು ದೌರ್ಬಲ್ಯ ಅಲ್ಲ. ಅದು ನಮ್ಮ ಹಕ್ಕು. ಅದನ್ನು ಬಳಸಿಕೊಂಡು ನಮ್ಮ ಉದ್ಯೋಗವನ್ನು ಕಸಿದುಕೊಳ್ಳಬೇಕು. ಮುಂದಕ್ಕೆ ಮೀಸಲಾತಿ ಬಗ್ಗೆಯೂ ಜಾಗೃತಿ ಮೂಡಿಸಲು ಮುಂದಕ್ಕೆ ಅರ್ಹ ಸಂಪನ್ಮೂಲ ವ್ಯಕ್ತಿಗಳಿಂದ ತರಗತಿ ದೊರೆಯುವಂತೆ ಮಾಡುತ್ತೇವೆ. ಇದರಲ್ಲೂ ನೀವೆಲ್ಲಾ ಭಾಗಿಗಳಾಗಬೇಕು ಎಂದರು.
ಯೂತ್ ಹೆಲ್ಪ್‌ಲೈನ್ ಆರಂಭ;
ತಾಲೂಕಿನ ಜನ ತರಬೇತಿ, ಸ್ಕಾಲರ್‌ಶಿಪ್, ಅರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಬಗ್ಗೆ ನನ್ನನ್ನು ನಿರಂತರವಾಗಿ ಸಂಪರ್ಕದಲಿದ್ದಾರೆ. ಮುಂದಕ್ಕೆ ಅಂತವರಿಗಾಗಿ ನಾವು ಬೆಸ್ಟ್ ಫೌಂಡೇಶನ್ ವತಿಯಿಂದ ಯೂತ್ ಹೆಲ್ಪ್‌ಲೈನ್ ಪ್ರಾರಂಭಿಸುತ್ತಿದ್ದೇವೆ. ಇದು ಸಂಪೂರ್ಣ ಯುವಜನತೆಗೆ ಅವಕಾಶ. ಇದಕ್ಕೆ ನೀವು ಕರೆ ಮಾಡಬಹುದು ಎಂದರು.
ಬ್ಯಾಂಕಿಂಗ್ ತರಬೇತಿಗೂ ವಿಭಾಗ;
ಕರಾವಳಿಯ ಮಣ್ಣು ಐದು ಬ್ಯಾಂಕ್‌ಗಳನ್ನು ಪರಿಚಯಿಸಿದ ಮಣ್ಣು. ಒಂದು ಕಾಲದಲ್ಲಿ ದೇಶದ ಎಲ್ಲೇ ಹೋದರೂ ತುಳು, ಕೊಂಕಣಿ ಮಾತನಾಡುವವರು ಸಿಗುತ್ತಿದ್ದರು. ಇಂದು ಆ ಜಾಗವನ್ನು ಅನ್ಯ ಭಾಷಿಗರು ಮುತ್ತಿಕೊಂಡಿದ್ದಾರೆ. ಇದು ತಪ್ಪಲ್ಲ. ಆ ಕ್ಷೇತ್ರದಲ್ಲೂ ನಮ್ಮವರನ್ನು ಸಿದ್ಧಗೊಳಿಸುವ ಉದ್ದೇಶದಿಂದ ಬ್ಯಾಂಕಿಂಗ್ ತರಬೇತಿಯನ್ನು ಆಯೋಜಿಸಲಿದ್ದೇವೆ ಎಂದರು.
ಕಾರ್ಯಕ್ರಮಕ್ಕೆ ಸಹಯೋಗ ನೀಡಿದ ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿ ಪತ್ರಿಕೆಯ ಪ್ರಸಾರ ವಿಭಾಗದ ಮುಖ್ಯಸ್ಥ ಪ್ರಕಾಶ್ ನಾಯಕ್, ಉಜಿರೆ ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಎ ಕುಮಾರ್ ಹೆಗ್ಡೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಕುಮಾರ್ ಹೆಗ್ಡೆ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಬೆಸ್ಟ್ ಫೌಂಡೇಶನ್ ಸಲಹೆಗಾರ ನಾಮದೇವ ರಾವ್ ಮುಂಡಾಜೆ ಸ್ವಾಗತಿಸಿದರು. ಸೌಜನ್ಯಾ 'ಕಟ್ಟುತ್ತೇವಾ' ಎಂಬ ಧ್ಯೇಯಗೀತೆ ಹಾಡಿದರು. ಚಂದ್ರಹಾಸ ಬಳಂಜ ಕಾರ್ಯಕ್ರಮ ನಿರೂಪಿಸಿದರು.
ಗುರುರಾಜ್ ಗುರಿಪಳ್ಳ ವಂದನಾರ್ಪಣೆಗೈದರು.