ಬೆಳ್ತಂಗಡಿ: ತುಳುವಿಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು ತುಳು ಸಂಸ್ಕೃತಿ, ಸಂಸ್ಕಾರವು ಶ್ರೇಷ್ಠ ಸಂಸ್ಕಾರವಾಗಿದೆ. ಇದನ್ನು ಉಳಿಸಲು ತುಳು ಪ್ರತ್ಯೇಕ ರಾಜ್ಯದ ಅಗತ್ಯವಿದ್ದು ಇದಕ್ಕಾಗಿ ತುಳುವೆರೆಪಕ್ಷ ಸ್ಥಾಪಿಸಲಾಗಿದೆ.
ಈ ಹೋರಾಟಕ್ಕೆ ಶಕ್ತಿ ಬರಬೇಕಾದಲ್ಲಿ ರಾಜಕೀಯ ಶಕ್ತಿ ನಮ್ಮಲ್ಲಿ ಅಗತ್ಯವಿದ್ದು ಅದಕ್ಕಾಗಿ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ತುಲಕುವೆರೆ ಪಕ್ಷ ಚುನಾವಣೆಗೆ ಸ್ಪರ್ಧಿಸಲಿದೆ ಎಂದು ತುಳುವೆರೆ ಪಕ್ಷದ ಅಧ್ಯಕ್ಷ ಶೈಲೇಶ್ ಆರ್.ಜೆ ಹೇಳಿದ್ದಾರೆ.
ಅವರು ಗುರುವಾರ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ತುಳುವೆರೆ ಪಕ್ಷವನ್ನು ಬೆಳೆಸಲು ಚಿಂತಿಸಲಾಗಿದ್ದು ತುಳು ಭಾಷೆಗಾಗಿ ಹೋರಾಟ ಮಾಡಿದ ಎಲ್ಲಾ ಗಣ್ಯರನ್ನು, ಮಠಾಧೀಶರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು ತುಳು ನಾಡಿಗೆ, ತುಳು ಭಾಷೆಗೆ ಅನ್ಯಾಯವಾದಾಗ ನ್ಯಾಯಾಕ್ಕಾಗಿ ತುಳುವೆರೆ ಪಕ್ಷ ಹೋರಾಡಲು ಸಿದ್ಧವಾಗಿದೆ.
ತುಳು ಭಾಷಿಗರು ನೆಲೆಸಿರುವಂತಹ ಎಲ್ಲಾ ಭಾಗವನ್ನು ಒಟ್ಟುಸೇರಿಸಿ ತುಳು ಪ್ರತ್ಯೇಕ ರಾಜ್ಯಕ್ಕೆ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದರು.
ತುಳುನಾಡಾಗಿ ಮೆರೆದ ಪ್ರದೇಶ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿದೆ;
ಭರತ ಖಂಡದಲ್ಲಿ ಸತಿಯಪುತ್ರ, ಆಳ್ವಖೇಡ, ತುಳುದೇಸ, ತುಲುಂಗ, ತೌಳವ, ತುಳುನಾಡು, ತುಳು ರಾಜ್ಯ ಎಂದು ಕರೆಯಲ್ಪಟ್ಟು ಸ್ವತಂತ್ರವಾಗಿ ಮೆರೆದ ಇಂದಿನ ಉತ್ತರ ಕೇರಳ ಪ್ರಾಂತ್ಯ, ಕರಾವಳಿ ಕರ್ನಾಟಕ ಪ್ರಾಂತ್ಯ ಮತ್ತು ಮಲೆನಾಡು ಕರ್ನಾಟಕ ಪ್ರಾಂತ್ಯಗಳು ಇಂದಿನ ಆಧುನಿಕ ಸ್ವತಂತ್ರ ಭಾರತ ದೇಶದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದೆ. ಈ ಪ್ರಾಂತ್ಯಗಳ ಜನರ ನಾಡು, ನುಡಿ, ಸಂಸ್ಕೃತಿ ಅಳಿವಿನ ಅಂಚಿನಲ್ಲಿ ಇದೆ. ತೌಳವ ನಾಗರೀಕತೆಯ ಮೂಲವಾದ ನದಿಗಳ ಮೂಲವನ್ನು ವಿಕೃತಿಗೊಳಿಸಿ ಬಯಲು ಸೀಮೆಗೆ ತಿರುಗಿಸುವ ವಿಫಲ ಪ್ರಯತ್ನದಲ್ಲಿ ನಮ್ಮನ್ನು ಸದ್ಯ ಆಳುತ್ತಿರುವ ನಾಡಿನವರು ನಿರತರಾಗಿದ್ದಾರೆ ಎಂಬುದು ನಮ್ಮ ಹೋರಾಟಕ್ಕೆ ಪ್ರೇರಣೆ ಒದಗಿಸುತ್ತಿದೆ ಎಂದರು.
ತುಳು ಭಾಷಾ ಸ್ಥಾನಮಾನ ಮರೀಚಿಕೆಯಾಗುವ ಸಾಧ್ಯತೆ;
೧೯೫೬ ಭಾಷಾವಾರು ರಾಜ್ಯಗಳು
ರಚನೆಯಾಗುವಾಗ ತುಳು ಭಾಷಿಕ ಪ್ರಾಂತ್ಯಗಳನ್ನು ಅನ್ಯಾಯವಾಗಿ ವಿಭಾಗಿಸಿ ಕನ್ನಡ ನಾಡು ಮತ್ತು ಮಲೆನಾಡಿಗೆ ಹಂಚುವ ಮೂಲಕ ತುಳು ಅಸ್ತಿತ್ವತೆಯನ್ನು ನಾಶ ಮಾಡುವ ವ್ಯವಸ್ತಿತ ಶಡ್ಯಂತ್ರ ಸ್ವತಂತ್ರ ಭಾರತದಲ್ಲಿ ನಡೆಯಿತು. ತುಳುವರ ನಾಡು ನುಡಿಯ ಅಸ್ಮಿತೆಯ ಕೂಗಿಗೆ ಕರ್ನಾಟಕ ಸರಕಾರ, ಕೇರಳ ಸರಕಾರ, ಕೇಂದ್ರ ಸರಕಾರ ಮತ್ತು ಈ ಸರಕಾರಗಳ ಆಳ್ವಿಕೆಯನ್ನು ನಡೆಸಿದ ಪಕ್ಷಗಳು ಸ್ಪಂದಿಸಲಿಲ್ಲ. ತುಳುವರ ತುಳು ಭಾಷೆಯ ಸ್ಥಾನಮಾನದ ಕೂಗು ಅರಣ್ಯ ರೋಧನವಾಗಿಯೇ ಉಳಿದಿದೆ. ಹೀಗೆ ನಮ್ಮನ್ನು ಆಳಿದ ಎಲ್ಲಾ ರಾಜಕೀಯ ಪಕ್ಷಗಳು ತುಳು ಭಾಷೆ, ಸಂಸ್ಕೃತಿ ಮತ್ತು ನಾಡಿನ ಅಸ್ಮಿತೆಯನ್ನು ನಾಶ ಮಾಡುವ ಪ್ರಕ್ರಿಯೆಯಲ್ಲಿ ನಿರತವಾಗಿದೆ.
ಹೀಗೆ ಸರಕಾರಗಳು ಮತ್ತು ರಾಜಕೀಯ ಪಕ್ಷಗಳ ನಿರ್ಲಕ್ಷ್ಯ, ದೌರ್ಜನ್ಯ, ಅಸಮಾನತೆಯಿಂದ ನೊಂದ ತುಳುವರು ತಮ್ಮ ಅಸ್ಮಿತೆಯ ಉಳಿವಿಗಾಗಿ ತುಲುವೆರೆ ಪಕ್ಷ ಎಂಬ ರಾಜಕೀಯ ಪಕ್ಷವನ್ನು ಕೇಂದ್ರ ಚುನಾವಣಾ ಆಯೋಗ ದೆಹಲಿಯಲ್ಲಿ ನೊಂದಾಯಿಸಿದ್ದು ಭಾರತ ದೇಶದ ಅಧಿಕೃತ ನೊಂದಾಯಿತ ಪಕ್ಷವೆಂದು ಮಾನ್ಯತೆಯೂ ದೊರೆತಿದೆ ಎಂದರು.
ತುಳುನಾಡಿಗೆ ಹಲವು ಬೇಡಿಕೆಗಳಿವೆ;
ತುಳುನಾಡಿನ ಸಮಗ್ರ ಅಭಿವೃದ್ಧಿ, ತುಳು ಭಾಷೆಗೆ ಸ್ಥಾನಮಾನ, ತುಳುನಾಡು ರಾಜ್ಯ ರಚನೆ, ತುಳುನಾಡಿನ ನದಿ ಮತ್ತು ನದಿ ಮೂಲಗಳ ಸಂರಕ್ಷಣೆ, ಜ್ಞಾನಾಧಾರಿತ ಉದ್ಯಮಗಳ ಮೂಲಕ ತುಳುನಾಡಿನ ಜನತೆಗೆ ಉದ್ಯೋಗ ಸೃಷ್ಠಿ, ತುಳು ಸಂಸ್ಕೃತಿಯ ಸಂರಕ್ಷಣೆ, ತುಳು ಭಾಷೆಯಲ್ಲಿ ಶಿಕ್ಷಣ ಮತ್ತು ಆಡಳಿತ ಸೇರಿದಂತೆ ಸ್ವಚ್ಛ, ಸುಂದರ, ಸೌಹಾರ್ದ, ಶಾಂತಿಯ ಸಮೃದ್ಧ ತುಳುನಾಡು ಕಟ್ಟುವ ಮೂಲಕ ಮತ್ತೊಮ್ಮೆ ಭಾರತ ದೇಶದಲ್ಲಿ ತುಳು ಕಂಗೊಳಿಸುವಂತೆ ಮಾಡುವುದೇ ತುಳುವರ ಉದ್ದೇಶವಾಗಿದೆ ಎಂದರು.
ಗೋಷ್ಠಿಯಲ್ಲಿ ತಾಲೂಕು ಘಟಕದ ಅಧ್ಯಕ್ಷ ಪ್ರಶಾಂತ್ ಎಂ, ಉಪಾಧ್ಯಕ್ಷ ನವೀನ್ ಅಡ್ಕದಬೈಲು, ಪ್ರಧಾನ ಕಾರ್ಯದರ್ಶಿ ಸತೀಶ್ ಪಿ.ಎನ್, ಮಂಗಳೂರು ಘಟಕದ ಅಧ್ಯಕ್ಷ ಅರವಿಂದ ಪಂಡಿತ್, ಮೂಡುಬಿದಿರೆ ಘಟಕದ ಅಧ್ಯಕ್ಷ ಸಂಪತ್, ಪುತ್ತೂರು ಘಟಕದ ಅಧ್ಯಕ್ಷ ವಿಜೇತ್ ರೈ, ತಾಲೂಕು ಕೋಶಾಧಿಕಾರಿ ರಾಜೇಶ್ ಕುಲಾಲ್, ತಾಲೂಕು ಘಟಕದ ಜೊತೆ ಕಾರ್ಯದರ್ಶಿ ರೇಖಾ ಲೋಬೋ ಮತ್ತು ಉಮೇಶ್ ಕುಲಾಲ್ ಉಪಸ್ಥಿತರಿದ್ದರು.