ಬೆಳ್ತಂಗಡಿ; ತಾಕತ್ತಿದ್ದರೆ ನಮ್ಮ ಎದುರಿಗೆ ಬಂದು ಗೋವುಗಳನ್ನು ಮುಟ್ಟಿರಿ ನಾವು ನೋಡಿಕೊಳ್ಳುತ್ತೇವೆ. ಗೋವುಗಳನ್ನು ಕಡಿದರೆ ಕೈ ಕಡಿಯುವ ದಿನ ಬರಲಿದೆ, ಗೋವು ಕಳ್ಳರು ನಿಮ್ಮ ಗ್ರಾಮಗಳಿಗೆ ಬಂದರೆ ಕಾನೂನು ಬದ್ದವಾಗಿಯೇ ಅವರ ಕೈಕಾಲು ಮುರಿಯಿರಿ. ಹಾಗೆಯೇ ಈ ನೆಲದಲ್ಲಿ ಹುಟ್ಟಿ ಇಲ್ಲಿನ ಅನ್ನ ತಿಂದು ಪಾಕಿಸ್ತಾನದ ಪರ ಘೋಷಣೆ ಕೂಗುವ ದೇಶದ್ರೋಹಿಗಳ ನಾಲಗೆ ಸೀಳಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಗುಡುಗಿದರು.
ಉಜಿರೆಯಲ್ಲಿ ಭಾನುವಾರ ನಡೆದ ಬೆಳ್ತಂಗಡಿ ಬಿಜೆಪಿ ಮಂಡಲದ ಸ್ಥಳೀಯ ಸಂಸ್ಥೆಗಳಲ್ಲಿ ಜಯಗಳಿಸಿದ ಬಿಜೆಪಿಯ ಚುನಾಯಿತ ಪ್ರತಿನಿಧಿಗಳಿಗೆ, ಸ್ಪರ್ಧಿಸಿದವರಿಗೆ, ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಬಿಜೆಪಿಯಿಂದ ಗೆದ್ದಿರುವ ಮುಸಲ್ಮಾನರು -ಕ್ರೈಸ್ಥರು ಭಾರತ ಮಾತಾಕೀ ಜೈ ಎನ್ನುವವರು. ಅವರೆಂದೂ ದೇಶಪ್ರೇಮಿಗಳಾಗಿದ್ದಾರೆ ಎಂದು ಸಚಿವರು ಸಮರ್ಥಿಸಿದರು.
ಹಿಂದೂ ಧರ್ಮಕ್ಕೋಸ್ಕರ ನಾವು ಯಾರೊಂದಿಗೂ ತಾಂಟಲು ರೆಡಿ; ಹರೀಶ್ ಪೂಂಜ
ಶಾಸಕ ಹರೀಶ್ ಪೂಂಜ ಮಾತನಾಡಿ, ನಾವು ಯಾರೊಂದಿಗೂ ತಾಂಟುವುದಿಲ್ಲ. ಆದರೆ ದೇಶಕ್ಕೋಸ್ಕರ ಹಿಂದೂ ಧರ್ಮಕೋಸ್ಕರ ಯಾರೊಂದಿಗೂ ತಾಂಟಲು ಸಿದ್ದರಿದ್ದೇವೆ. ರಾಷ್ಟ್ರ ವಿರೋಧೀ ಘೋಷಣೆ ಕೂಗುವವರನ್ನು, ಲವ್ ಜಿಹಾದ್ ಮಾಡುವವರೊಂದಿಗೆ, ಅಕ್ರಮವಾಗಿ ಗೋ ಹತ್ಯೆ ಮಾಡುವವರೊಂದಿಗೆ ಯಾವತ್ತೂ ತಾಂಟುತ್ತೇವೆ. ಅವರನ್ನು ಖಂಡಿತಾ ಹತ್ತಿಕ್ಕುತ್ತೇವೆ ಎಂದು ಘೋಷಿಸಿದರು.
ಸಭೆಯಲ್ಲಿ ರಾಜ್ಯ ಸರಕಾರದ ಸಚಿವರುಗಳಾದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಅಂಗಾರ, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಪಕ್ಷದ ಮುಖಂಡರುಗಳಾದ ಸುದರ್ಶನ್ ಎಂ, ಮೀನಾಕ್ಷಿ ಶಾಂತಿಗೋಡು, ಹರಿಕೃಷ್ಣ ಬಂಟ್ವಾಳ, ಸುಧೀರ್ ಶೆಟ್ಟಿ, ರಾಮದಾಸ್ ಭಟ್, ಕಸ್ತೂರಿ ಪಂಜ, ಕೊರಗಪ್ಪ ನಾಯ್ಕ, ಶಶಿಧರ ಕಲ್ಮಂಜ, ಜಯಾನಂದ ಗೌಡ ಹಾಗೂ ಇತರರು ಇದ್ದರು.ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಸ್ವಾಗತಿಸಿದರು.
13 ಪಂಚಾಯತ್ ಕಾಂಗ್ರೆಸ್ ಮುಕ್ತ!
ಈ ಬಾರಿಯ ಚುನಾವಣೆಯಲ್ಲಿ 46 ಗ್ರಾ ಪಂಗಳಲ್ಲಿ 40 ಪಂಚಾಯತುಗಳನ್ನು ಗೆದ್ದಿದ್ದೇವೆ. ಈ ಪೈಕಿ 13 ಗ್ರಾಮ ಪಂಚಾಯತುಗಳಲ್ಲಿ ಕಾಂಗ್ರೆಸ್ ಮುಕ್ತ ಮಾಡಿದ್ದೇವೆ.ಹರೀಶ್ ಪೂಂಜ ಶಾಸಕರು.