ಬೆಳ್ತಂಗಡಿ; ದಿಡುಪೆ ಎಳನೀರು ಬಂಗರುಬಳಿಗೆ ಜಲಪಾತ ಪ್ರದೇಶದಲ್ಲಿ ಭೂಕುಸಿತವಾಗಿ ಇಂದಿಗೆ(ಕಳೆದ ಸೋಮವಾರ) 7 ದಿನ ಪೂರ್ತಿಯಾಗಿದೆ. ಘಟನೆ ವೇಳೆ ಚಾರಣಕ್ಕೆ ಹೋಗಿದ್ದ ಉಜಿರೆ ಕಾಶಿಬೆಟ್ಟು ನಿವಾಸಿ ಸನತ್ ಶೆಟ್ಟಿ ಅವರು ಜೀವಂತ ಸಮಾದಿಯಾಗಿದ್ದು ಅವರ ಮೃತದೇಹಕ್ಕಾಗಿ ಹುಟುಕಾಟ ಇನ್ನೂ ಮುಂದುವರಿದಿದೆ.
ಘಟನಾ ಸ್ಥಳಕ್ಕೆ ಶನಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಅವರು ಭೇಟಿ ನೀಡಿ ಸ್ಥಳ ವೀಕ್ಷಣೆ ನಡೆಸಿ ಕಾರ್ಯಾಚರಣೆ ಯ ಸಂಪೂರ್ಣ ವಿವರ ಪಡೆದಿದ್ದಾರೆ.
ಸ್ಥಳದಲ್ಲಿ ಪೊಲೀಸ್ ಇಲಾಖೆ, ಎನ್ ಡಿಆರ್‌ಎಫ್, ಅಗ್ನಿಶಾಮಕ ದಳ, ರಾಷ್ಟ್ರೀಯ ಹಿಂದೂಜಾಗರಣ ವೇದಿಕೆ ಕಾರ್ಯಕರ್ತರು, ಅರಣ್ಯ ಇಲಾಖೆ, ಹಾಗೂ ಸ್ಥಳೀಯರು ಸೇರಿ ಕಾರ್ಯಾಚರಣೆ ನಡೆಸುತ್ತಿದ್ದು ಅದಾಗ್ಯೂ ಮೃತದೇಹದ ಯಾವುದೇ ಸುಳಿವು ಲಭ್ಯವಾಗಿಲ್ಲ. ಮನೆಯವರು ತೀವ್ರ ದುಃಖಿತರಾಗಿದ್ದು ಅವರಿಗೆ ಜನರು ಹೇಳುವ ಸಾಂತ್ವನ ಸಾಲದಾಗಿದೆ.
ಕಾರ್ಯಾಚರಣೆ ನಿರತರಿಗೆ ಸ್ಥಳೀಯ ಗ್ರಾ.ಪಂ ಸದಸ್ಯರ ಮೂಲಕ ಸ್ಥಳೀಯರೊಬ್ಬರ ಮನೆಯಲ್ಲಿ ಅನ್ನ ಆಹಾರದ ವ್ಯವಸ್ಥೆ ಯನ್ನು ಶಾಸಕರ ನಿರ್ದೇಶನದಂತೆ ಮಾಡಲಾಗಿದೆ. ದಿನಕ್ಕೆ ನೂರಾರು ಮಂದಿ ಕುತೂಹಲಿಗರು ಬಂದು ಸ್ಥಳ ವೀಕ್ಷಣೆ ಮಾಡಿ ಹೋಗುತ್ತಿದ್ದಾರೆ.
---
50 ಮಂದಿಗೆ ಪ್ರಾಣಾಪಾಯವಿತ್ತು;
ಘಟನೆ ನಡೆದ ಹಿಂದಿನ ದಿನ ಇದೇ ಜಲಪಾತ ಪ್ರದೇಶಕ್ಕೆ ಸರಕಾರಿ ಬಸ್ಸೊಂದರಲ್ಲಿ ಸುಮಾರು 50 ಕ್ಕೂ ಅಧಿಕ ಮಂದಿ ಇದ್ದ ನಿಯೋಗವೊಂದು ಭೇಟಿ ನೀಡಿತ್ತು. ಒಂದು ವೇಳೆ ಆ ಸಮಯದಲ್ಲೇನಾದರೂ ಇಂತಹಾ ಘಟನೆ ನಡೆದಿದ್ದರೆ ಹೆಚ್ಚಿನ ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಇತ್ತು ಎಂಬ ವಿಚಾರ ಈಗ ಒಂದೊಂದಾಗಿ ಹೊರಬರಲಾರಂಭಿಸಿದೆ.
ಸ್ಥಳಕ್ಕೆ ಭೇಟಿ ನೀಡಿದ ಎಸ್.ಪಿ ಅವರ ಜೊತೆ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ, ಸಬ್ ಇನ್ಸ್‌ಪೆಕ್ಟರ್ ನಂದ ಕುಮಾರ್ ಹಾಗೂ ಇತರ ಅಧಿಕಾರಿಗಳು, ಉಪಸ್ಥಿತರಿದ್ದರು.
ಎಸ್.ಪಿ ಅವರು ಮಾಧ್ಯಮದವರು ಜೊತೆ ಮಾತನಾಡಿ, ಇನ್ನಷ್ಟು ಅಪಾಯದ ಮುನ್ಸೂಚನೆ ಇರುವುದರಿಂದ ಕಲ್ಲುಗಳನ್ನು ಒಡೆಯುವ ವೇಳೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
----
ಸಾವಿರಾರು ಚಾರಣಿಗರು ಭೇಟಿ ನೀಡುವ ಪ್ರದೇಶ;
ಸದ್ರಿ ಜಲಪಾತ ಪ್ರದೇಶದಲ್ಲಿ ಇನ್ನೂ ಅನೇಕ ಪ್ರಕೃತಿ ರಮಣೀಯ ಜಾಗಗಳಿದ್ದು ಅಲ್ಲಿಗೆಲ್ಲಾ ವಾರದಲ್ಲಿ ಸಾವಿರಾರು ಮಂದಿ ಭೇಟಿ ನೀಡುತ್ತಿದ್ದಾರೆ ಎಂದು ಊರವರು ಈಗೀಗ ಒಂದೊಂದೇ ಮಾಹಿತಿ ನೀಡುತ್ತಿದ್ದಾರೆ.
ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ಇಲ್ಲೆಲ್ಲಾ ಹೋಮ್ ಸ್ಟೇ ಗಳು, ಹಟ್ಟ್ ಗಲು ಕಾರ್ಯಾರಂಭಿಸಿವೆ. ಇಲ್ಲಿನ ಕೆಲವು ಹೋಂ ಸ್ಟೇಗಳು ಅಧಿಕೃತವಾದರೆ ಇನ್ನೂ ಅನೇಕ ಅನಧಿಕೃತವಾಗಿದೆ ಎಂದು ತಿಳಿದುಬಂದಿದೆ. ಈಬಗ್ಗೆ ಇತ್ತೀಚೆಗೆ ತಾ.ಪಂ ಸಾಮಾನ್ಯ ಸಭೆಯಲ್ಲೂ ವಿಚಾರ ಪ್ರಸ್ತಾಪವಾಗಿದ್ದು ಭಾರೀ ಚರ್ಚೆ ನಡೆದಿತ್ತು.
---
ಅಕ್ರಮ ಹೋಂಸ್ಟೇಗಳ ವಿರುದ್ದ ಕಠಿನ ಕ್ರಮ; ಎಸ್.ಪಿ
ಸ್ಥಳಭೇಟಿಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಅವರು, ಬಂಗಾರುಬಳಿಗೆ ಯಲ್ಲಿ ಜಲಪಾತದ ವೀಕ್ಷಣೆಗೆ ಹೋಗಿ ಮಣ್ಣಿನಸಿಗೆ ಸಿಲುಕಿರುವ ಯುವಕನ ಮೃತದೇಹವನ್ನು ಹೊರತೆಗೆಯಲು ಎಲ್ಲ ರೀತಿಯ ಪ್ರಯತ್ನಗಳನ್ನೂ ನಡೆಸಲಾಗುತ್ತಿದೆ. ಅರಣ್ಯ ಪ್ರದೇಶವನ್ನು ಕೇಂದ್ರೀಕರಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಅಕ್ರಮ ಹೋಂಸ್ಟೇಗಳ ಬಗ್ಗೆ ಪೋಲೀಸ್ ಇಲಾಖೆಯ ನೇತೃತ್ವದಲ್ಲಿ ಕಠಿನ ಕ್ರಮ ಕೈಗೊಳ್ಳಲಾಗುವುದು. ಕಾನೂನು ಬಾಹಿರವಾಗಿ ನಡೆಯುತ್ತಿರುವ ಇಂತಹ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ. ಅರಣ್ಯ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ಟ್ರಕಿಂಗ್ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು ಎಂದುರು.