ಬೆಳ್ತಂಗಡಿ; ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಎರಡು ವರ್ಷಗಳ ಹಿಂದೆ ಡಿ. 23 ರಂದು ಪತ್ರಕರ್ತರ ಗ್ರಾಮ ವಾಸ್ತವ್ಯ ಎಂಬ ವಿನೂತನ ಕಾರ್ಯಕ್ರಮ ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರಕಾರಿ ಶಾಲೆಯಲ್ಲಿ ಹಮ್ಮಿಕೊಂಡಿತ್ತು.
ಮೂಲಭೂತ ಸೌಲಭ್ಯ ವಂಚಿತವಾಗಿರುವ ಗ್ರಾಮವನ್ನು ಗುರುತಿಸಿ ಆ ಗ್ರಾಮವನ್ನು ಅಭಿವೃದ್ಧಿ ಪಥದತ್ತ ಕೊಂಡ್ಯೂಯುವುದು ಪತ್ರಕರ್ತರ ಗ್ರಾಮ ವಾಸ್ತವ್ಯದ ಉದ್ದೇಶವಾಗಿತ್ತು.ಪತ್ರಕರ್ತರು ಈ ರೀತಿಯ ಗ್ರಾಮ ವಾಸ್ತವ್ಯ ಮಾಡುತ್ತಿರುವುದು ದೇಶದಲ್ಲಿ ಮೊದಲ ಬಾರಿಗೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು .
ಪತ್ರಕರ್ತರು ಗ್ರಾಮ ವಾಸ್ತವ್ಯ ಮಾಡಿ ಇಂದಿಗೆ ಎರಡು ವರ್ಷ ಪೂರ್ಣಗೊಂಡಿದೆ. ಪತ್ರಕರ್ತರು ಗ್ರಾಮ ವಾಸ್ತವ್ಯ ಮಾಡಿದ ಶಾಲೆಯ ಚಿತ್ರಣವೇ ಬದಲಾಗಿದೆ. ಮುಚ್ಚುವ ಹಂತದಲ್ಲಿದ್ದ ಸರಕಾರಿ ಶಾಲೆ ಇವತ್ತು ಹೊಸ ರೂಪ ಪಡೆದುಕೊಂಡಿದೆ. 42 ವಿದ್ಯಾರ್ಥಿಗಳಿದ್ಧ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ 80 ಕ್ಕೆ ಏರಿದೆ .ಪತ್ರಕರ್ತರ ಸಂಘದ ವತಿಯಿಂದ ದಾನಿಗಳ ನೆರವಿನೊಂದಿಗೆ ಈ ಶಾಲೆಗೆ ಕಂಪ್ಯೂಟರ್, ವಾಚನಾಲಯಕ್ಕೆ ಪೀಠೋಪಕರಣ, ಪುಸ್ತಕಗಳನ್ನು ಒದಗಿಸಿ ಕೊಡಲಾಗಿದೆ. ಮಧ್ಯಾಹ್ನದ ಬಿಸಿಯೂಟಕ್ಕೆ ಕೈ ತೋಟ ನಿರ್ಮಾಣ ಮಾಡಿ ಕೊಡಲಾಗಿದೆ. ಕಂಪ್ಯೂಟರ್ ಹಾಗೂ ಇಂಗ್ಲಿಷ್ ಶಿಕ್ಷಣ ನೀಡಲು ಶಿಕ್ಷಕಿಯೊಬ್ಬರನ್ನು ನೇಮಕ ಮಾಡಲಾಗಿದ್ದು ಪತ್ರಕರ್ತರ ಸಂಘದಿಂದ ವೇತನ ನೀಡಲಾಗಿದೆ.
ಪತ್ರಕರ್ತರ ಗ್ರಾಮ ವಾಸ್ತವ್ಯದ ವೇಳೆ ಗ್ರಾಮದ ಜನರ ಸಮಸ್ಯೆಗಳ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು ಶೇಕಡಾ 50 ರಷ್ಟು ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ತಮ್ಮ ಶಾಸಕರ ಅನುದಾನದಲ್ಲಿ ಶಾಲಾ ದುರಸ್ತಿಗೆ 5 ಲಕ್ಷ ರುಪಾಯಿ ಅನುದಾನ ನೀಡಿದ್ದು ಸರಕಾರಿ ಶಾಲೆ ಸುಣ್ಣ ಬಣ್ಣಗಳಿಂದ ಹೊಸ ರೂಪ ಪಡೆದುಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಸೆಲ್ವ ಮಣಿ ಅವರ ಮುತುವರ್ಜಿ ಯಿಂದ ಶಾಲೆಗೆ 5 ಲಕ್ಷ ರುಪಾಯಿ ವೆಚ್ಚದಲ್ಲಿ ಅವರಣ ಗೋಡೆ ನಿರ್ಮಾಣ ಮಾಡಲಾಗಿದ್ದು ಅಂತಿಮ ಹಂತದಲ್ಲಿದೆ. ಕುತ್ಲೂರು ಗ್ರಾಮದ ಕೆಲವು ರಸ್ತೆಗಳು ಕಾಂಕ್ರೀಟ್ ಕರಣ ಗೊಂಡಿದೆ. ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ ,
ಶಾಲಾ ಮುಖ್ಯಸ್ಥರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳು ,ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಸಮಾಜ ಸೇವಕ ರಾಮಚಂದ್ರ ಭಟ್ ಅವರ ವಿಶೇಷ ಸಹಕಾರದಿಂದ ಕುತ್ಲೂರು ಉನ್ನತೀಕರಿಸಿದ ಸರಕಾರಿ ಶಾಲೆ ರಾಜ್ಯಕ್ಕೆ ಮಾದರಿ ಆಗಿದ್ದು ರಾಜ್ಯ ಶಿಕ್ಷಣ ಸಚಿವ ಸುರೇಶ ಕುಮಾರ್ ಅವರ ಮೆಚ್ಚುಗೆಗೆ ಪಾತ್ರವಾಗಿದೆ. ಕಳೆದ ವರ್ಷ ಪತ್ರಕರ್ತರು ಗ್ರಾಮ ವಾಸ್ತವ್ಯ ಮಾಡಿದ ಮಡಪ್ಪಾಡಿ ಗ್ರಾಮಕ್ಕೂ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಹಾಗೂ ಗ್ರಾಮೀಣ ಅಭಿವೃದ್ಧಿ ಸಚಿವ ಕೆ. ಯಸ್ ಈಶ್ವರಪ್ಪ ಅವರು ಜಿಲ್ಲಾ ಪತ್ರಕರ್ತರ ಸಂಘದ ಮನವಿ ಮೇರೆಗೆ ಮಡಪ್ಪಾಡಿ ರಸ್ತೆ ಅಭಿವೃದ್ಧಿಗೆ 2 ಕೋಟಿ ರುಪಾಯೀ ಮಂಜೂರು ಮಾಡಲಾಗಿದ್ದು ಗ್ರಾಮದ ಜನರ ಮೆಚ್ಚುಗೆಗೆ ಪತ್ರಕರ್ತರ ಸಂಘ ಪಾತ್ರವಾಗಿದೆ .
ಪತ್ರಕರ್ತರು ಮನಸ್ಸು ಮಾಡಿದರೆ ಗ್ರಾಮಗಳ ಅಭಿವೃದ್ಧಿ ಮಾಡಲು ಸಾಧ್ಯವಿದೆ ಎಂಬುದನ್ನು ಸಂಘದ ಜಿಲಾಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ನೇತೃತ್ವದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ತೋರಿಸಿಕೊಟ್ಟಿದೆ.
ಮುಂದಿನ ಪತ್ರಕರ್ತರ ಗ್ರಾಮ ವಾಸ್ತವ್ಯ ಮುಂದಿನ ತಿಂಗಳು ಕಡಬ ತಾಲೂಕು ಪತ್ರಕರ್ತರ ಸಂಘದ ನೇತೃತ್ವದಲ್ಲಿ ಕಡಬ ತಾಲೂಕಿನ ಸಿರಿಬಾಗಿಲಿನಲ್ಲಿ ನಡೆಯಲಿದೆ.