ಬೆಳ್ತಂಗಡಿ; ಮದನೀಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷರೂ, ಕರ್ನಾಟಕ ರಾಜ್ಯದ ಹಿರಿಯ ವಿದ್ವಾಂಸರೂ ಆಗಿರುವ ಸಯ್ಯಿದ್ ಕಾಜೂರು ತಂಙಳ್ ಅವರು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಅವರನ್ನು ಅವರ ಅಧಿಕೃತ ನಿವಾಸ 'ಬಿಷಪ್ ಹೌಸ್' ನಲ್ಲಿ ಡಿ.24 ಎಂದು ಭೇಟಿಮಾಡಿ ಕ್ರೈಸ್ತ ಬಾಂಧವರಿಗೆ ಕ್ರಿಸ್ಮಸ್ ಹಬ್ಬಕ್ಕೆ ಶುಭಾಶಯ ಕೋರಿದರು.
ದಕ್ಷಿಣ ಭಾರತದ ಅಜ್ಮೀರ್ ಎಂದೇ ಖ್ಯಾತಿವೆತ್ತ ಇತಿಹಾಸ ಪ್ರಸಿದ್ಧ ಸರ್ವಧರ್ಮ ಸೌಹಾರ್ದ ಕ್ಷೇತ್ರ ಕಾಜೂರಿನಲ್ಲಿ ಕಳೆದ 2 ದಶಕಗಳಿಂದ ಧರ್ಮಗುರುಗಳಾಗಿ, ಕಾಜೂರು ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರಾಗಿರುವ ಸಯ್ಯಿದ್ ಕಾಜೂರು ತಂಙಳ್ ಅವರು ಮೂಲತಃ ಕೇರಳದ ಮಲಪ್ಪುರಂ ಜಿಲ್ಲೆಯವರಾಗಿದ್ದು, ಖ್ಯಾತ ವಾಗ್ಮಿಗಳಾಗಿ, ಧಾರ್ಮಿಕ ಪ್ರವಚನಕಾರರಾಗಿ ಅಂತಾರಾಜ್ಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ.
ಬಿಷಪ್ ಲಾರೆನ್ಸ್ ಮುಕ್ಕುಯಿ ಅವರು ದ.ಕ, ಉಡುಪಿ ಮತ್ತು ಕೊಡಗು ಜಿಲ್ಲೆಗಳನ್ನೊಳಗೊಂಡ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿದ್ದು,
ತಾಲೂಕೂ ಸೌಹಾರ್ದ ವೇದಿಕೆಯ ಅಧ್ಯಕ್ಷರೂ ಆಗಿ ನಾಡಿನ ಸೌಹಾರ್ದತೆಗೆ ಕೊಡುಗೆ ನೀಡುತ್ತಿದ್ದಾರೆ.
ಈ ಇಬ್ಬರು ಉನ್ನತ ಮಟ್ಟದ ಧರ್ಮಗುರುಗಳ ಈ ಭೇಟಿ ಸೌಹಾರ್ದ ಸಮಾಜ ನಿರ್ಮಾಣಕ್ಕೆ ಪ್ರೇರಣಾದಾಯಕವಾಗಿದೆ
ಕಾಜೂರು ತಂಙಳ್ ಭೇಟಿ ಸಂದರ್ಭ ತಾಲೂಕು ಮುಸ್ಲಿಂ ಜಮಾಅತ್ ಮಾಧ್ಯಮ ಸಂಯೋಜಕ, ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಅವರೂ ಉಪಸ್ಥಿತರಿದ್ದರು.