ಬೆಳ್ತಂಗಡಿ: ಉಜಿರೆಯ ಉದ್ಯಮಿ ಬಿಜೊಯ್ ಅವರ ಪುತ್ರ, ಎಂಟರ ಹರೆಯದ ಬಾಲಕ ಅನುಭವ್ ಅವರನ್ನು ಕೋಲಾರದಲ್ಲಿ ಸುರಕ್ಷಿತವಾಗಿ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಸಂಬಂಧ ಒಟ್ಟು 6 ಮಂದಿಯನ್ನು ಬಂಧಿಸಲಾಗಿದೆ ಎಂದು ಪ್ರಕರಣದ ತನಿಖಾಧಿಕಾರಿ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಅವರು ತಿಳಿಸಿದ್ದಾರೆ.
ಕೋಲಾರದ ಮಾಲೂರು ತಾಲೂಕಿನ ಕೂರ್ನ ಹೊಸಹಳ್ಳಿ ಮನೆಯಲ್ಲಿ ಮಗುವನ್ನು ಬಚ್ಚಿಡಲಾಗಿತ್ತು. ಬೆಳಗ್ಗಿನ ಜಾವಾ 5 ಗಂಟೆಗೆ ಕಾರ್ಯಾಚರಣೆ ನಡೆದಿದೆ. ಸಂದೇಶ್ ಪಿ.ಜಿ ಅವರೇ ಖುದ್ದು ಭಾಗಿಯಾಗಿದ್ದ ತಂಡವೇ ಆರೋಪಿಗಳು ಮಲಗಿ ನಿದ್ರಿಸುತ್ತಿದ್ದ ಮನೆಗೆ ಲಗ್ಗೆ ಇಟ್ಟಿದ್ದಾರೆ. ಈ ಮನೆಯವರೂ ಕೂಡ ಆರೋಪಿಗಳೇ ಆಗಿದ್ದಾರೆ ಎಂದು ಅವರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ.
ಕೋಲಾರ ನ್ಯಾಯಾಲಯಕ್ಕೆ ಆರೋಪಿಗಳನ್ನು ಮತ್ತು ಮಗುವನ್ನು 11.00 ಗಂಟೆಗೆ ಹಾಜರುಪಡಿಸಬೇಕಾಗಿದೆ. ಆ ಬಳಿಕ ಮಗುವಿಗೆ ಅಗತ್ಯ ಆರೋಗ್ಯ ತಪಾಸಣೆ ಕೈಗೊಂಡು ಹೆತ್ತವರಿಗೆ ಹಸ್ತಾಂತರ ಮಾಡಲಾಗುತ್ತದೆ.
ಆರೋಪಿಗಳನ್ನು ಅಲ್ಲಿನ ನ್ಯಾಯಾಲಯದ ಅನುಮತಿ ಪಡೆದು ಬೆಳ್ತಂಗಡಿಗೆ ಕರೆ ತರಲಾಗುವುದು. ನ್ಯಾಯಾಲಯದ ಅನುಮತಿಯೊಂದಿಗೆ ಆರೋಪಿಗಳನ್ನು ಪೊಲೀಸ್ ಕಷ್ಟಡಿಗೆ ತೆಗೆದುಕೊಂಡು ತೀವ್ರವಾದ ವಿಚಾರಣೆ ನಡೆಸಲಾಗುತ್ತದೆ. ತಂಡದಲ್ಲಿ ಇನ್ಯಾರ್ಯಾರು ಇದ್ದಾರೆಬೆಂಬುದನ್ನು ಖಚಿತಪಡಿಸಿ ಅವರನ್ನೂ ಬಂಧಿಸುವ ಕಾರ್ಯ ನಡೆಯಲಿದೆ.
ಮಗುವನ್ನು ಅಪಹರಿಸಿದ ಆಗಂತುಕರು ಉಪ್ಪಿನಂಗಡಿ ಸುಳ್ಯ ಮೂಲಕ ಪ್ರಯಾಣ ಬೆಳೆಸಿದ್ದರು ಎಂದು ಪ್ರಾಥಮಿಕ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.