ಬೆಳ್ತಂಗಡಿ; ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಬೆಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿದ್ದನ್ನು ವಿರೋಧಿಸಿ ಪೊಲೀಸರ ವಿರುದ್ಧವೇ ಗುಡುಗಿದ್ದ ಶಾಸಕ ಹರೀಶ್ ರ ವಿರುದ್ಧ ದಾಖಲಾಗಿದ್ದ ಎರಡೂ ಪ್ರಕರಣಗಳ ತ್ವರಿತ ತನಿಖೆ ನಡೆಸಿದ ಪೊಲೀಸರು ಶಾಸಕರ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಮೇ.28. ರಂದು ದೋಷಾರೋಪಣಾ ಪಟ್ಟಿ (ಚಾರ್ಜ್ ಶೀಟ್ ) ಸಲ್ಲಿಸಿದ್ದಾರೆ.
ಪ್ರಕರಣದ ತನಿಖೆಗಾಗಿ ಎಸ್.ಪಿ ಅವರಿಂದ ನಿಯೋಜಿಸಲ್ಪಟ್ಟಿದ್ದ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿದ್ದ ಪುತ್ತೂರು ಪೊಲೀಸ್ ಇನ್ಸ್‌ಪೆಕ್ಟರ್ ಸತೀಶ್ ಜಿ.ಜೆ ಅವರು ಬೆಂಗಳೂರಿನ ನ್ಯಾಯಾಲಯಕ್ಕೆ ಈ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಆದ್ದರಿಂದ ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ನೋಡಿಕೊಳ್ಳಲಿದೆ.
ಅಕ್ರಮ ಗಣಿಗಾರಿಕೆ ಮತ್ತು ಸ್ಪೋಟಕ ಕಾಯ್ದೆಯಡಿ ಬಂಧಿಸಲ್ಪಟ್ಟಿದ್ದ ಬಿಜೆಪಿ ಯುವ ಮೋರ್ಚಾದ ನಾಯಕರುಗಳಾದ ಶಶಿರಾಜ್ ಶೆಟ್ಟಿ ಮತ್ತು ಪ್ರಮೋದ್ ಉಜಿರೆ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಈ ಪೈಕಿ ಶಶಿರಾಜ್ ಶೆಟ್ಟಿ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಪೊಲೀಸ್ ಠಾಣೆಯಲ್ಲಿ ನಡೆದ ಪ್ರತಿಭಟನೆಯ ವೇಳೆ ಶಾಸಕ ಹರೀಶ್ ಪೂಂಜ ಅವರು ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದೂ ಮಾತ್ರವಲ್ಲದೆ ಪೊಲೀಸರ ವಿರುದ್ಧ ಅಸಂವಿಧಾನಿಕ ಪದ ಬಳಸಿ ನಿಂದಿಸಿದ್ದರು ಎಂದು ಒಂದು ಪ್ರಕರಣ ದಾಖಲಾಗಿತ್ತು.
ಈ ವಿಚಾರವನ್ನು ಖಂಡಿಸಿ ಬಿಜೆಪಿ ಮಂಡಲದ ವತಿಯಿಂದ ಬೆಳ್ತಂಗಡಿ ಆಡಳಿತ ಸೌಧದ ಬಳಿ ನಡೆದಿದ್ದ ಪ್ರತಿಭಟನೆಯ ವೇಳೆ ಮತ್ತೆ ಶಾಸಕರು ಪೊಲೀಸರ ವಿರುದ್ಧವೇ ಹರಿಹಾಯ್ದ ಬಗ್ಗೆ ಎರಡನೇ ಎಫ್ ಐ ಆರ್ ದಾಖಲಾಗಿತ್ತು.
ಈ ಸಂಬಂಧವಾಗಿ ಶಾಸಕರಿಗೆ ನೋಟೀಸು ನೀಡಿ ಠಾಣೆಗೆ ವಿಚಾರಣೆಗೆ ಕರತರಲು ಪೊಲೀಸರು ಮನೆಗೆ ತೆರಳಿದ್ದ ವೇಳೆ ಅಲ್ಲೂ ಸಾವಿರಾರು ಜನ ಜಮಾಯಿಸಿ ಹೈ ಡ್ರಾಮಾ ನಡೆದಿತ್ತು.
ಈ ಎರಡೂ ಪ್ರಕರಣಗಳ ತ್ವರಿತ ತನಿಖೆಗೆ ಎಸ್.ಪಿ ಅವರು ನಿಯೋಜಿಸಿದ ತಂಡ ಇದೀಗ ತನಿಖೆ ಪೂರ್ತಿಗೊಳಿಸಿದ್ದು, ಶಾಸಕರ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.